ರಾಜ್ಯದ ವೈಫಲ್ಯ, ಕೇಂದ್ರದ ಸಾಧನೆ ತಿಳಿಸಿ

0
14

ದಾವಣಗೆರೆ:

     ರಾಜ್ಯ ಸರ್ಕಾರದ ವೈಫಲ್ಯ ಹಾಗೂ ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ ಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರಬೇಕೆಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್ ಕರೆ ನೀಡಿದರು.

    ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ದಕ್ಷಿಣ ವಿಧಾನ ಸಭಾ ಕ್ಷೇತ್ರ ಹಾಗೂ ಮಾಯಕೊಂಡ ಕ್ಷೇತ್ರದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇನ್ನೂ 5 ತಿಂಗಳಲ್ಲಿಯೇ ಲೋಕಸಭಾ ಚುನಾವಣೆ ಎದುರಾಗುತ್ತಿದ್ದು, ಪಕ್ಷದ ಕಾರ್ಯಕರ್ತರು ಈ ಚುನಾವಣೆಯನ್ನು ಎದುರಿಸಲು ಸಜ್ಜಾಗಬೇಕೆಂದು ಕಿವಿಮಾತು ಹೇಳಿದರು.

     ಪಕ್ಷ ಸಂಘಟನೆಗಾಗಿ ಈಗಾಗಲೇ ಬೂತ್ ಮಟ್ಟದಲ್ಲಿ ಸಮಿತಿ ರಚಿಸಲಾಗಿದ್ದು, ಈ ಸಮಿತಿ ಪದಾಧಿಕಾರಿಗಳು ಪ್ರತಿ ಮನೆ-ಮನೆ ಭೇಟಿ ನೀಡಿ, ಕೇಂದ್ರ ಬಿಜೆಪಿ ಸರ್ಕಾರದ ಜನಪರ ಅಭಿವೃದ್ದಿ ಕಾರ್ಯಗಳನ್ನು ಹಾಗೂ ರಾಜ್ಯ ಸಮ್ಮಿಶ್ರ ಸರ್ಕಾರದ ವೈಫಲ್ಯಗಳನ್ನು ಮತದಾರರಿಗೆ ಮನದಟ್ಟು ಮಾಡಿಕೊಡಬೇಕೆಂದು ಸಲಹೆ ನೀಡಿದರು.

      ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರ ಇಡಬೇಕೆಂಬ ಏಕೈಕ ಕಾರಣಕ್ಕೆ ಅಪವಿತ್ರ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಗೊತ್ತುಗುರಿ ಇಲ್ಲವಾಗಿದೆ. ರಾಜ್ಯದಲ್ಲಿ ಸರ್ಕಾರವೇ ಇಲ್ಲ ಎಂಬ ವಾತಾವರಣ ಸೃಷ್ಟಿಯಾಗಿ, ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

      ಸ್ವತಂತ್ರ ಭಾರತದ 78 ವರ್ಷಗಳ ಇತಿಹಾಸದಲ್ಲಿ ಸುದೀರ್ಘ ಕಾಲ ಅಂದರೆ, ಸುಮಾರು 38 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ಒಂದೇ ಮನತನದವರು ಆಡಳಿತ ನಡೆಸಿದ್ದಾರೆ. ಬಳಿಕ ಅದೇ ಪಕ್ಷದ ಪಿ.ವಿ.ನರಸಿಂಹರಾವ್ ಹಾಗೂ ಮನಮೋಹನ್ ಸಿಂಗ್ ಪದಾಧಿಕಾರಿಗಳಾಗಿ ಆಡಳಿತ ನಡೆಸಿದ್ದಾರೆ. ಇನ್ನುಳಿದ್ದಂತೆ ಕೇವಲ 18 ವರ್ಷಗಳ ಕಾಲ ಮಾತ್ರ ಕಾಂಗ್ರೆಸ್ಸೇತರ ಪಕ್ಷಗಳು ಅಧಿಕಾರವನ್ನು ನಡೆಸಿವೆ. ದೇಶವನ್ನು ಸುದೀರ್ಘ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವು ದೇಶವನ್ನು ಅಧೋಗತಿಗೆ ತಂದಿದೆ ಎಂದು ಕಿಡಿಕಾರಿದರು.

      ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕಳೆದ ನಾಲ್ಕೂವರೆ ವರ್ಷಗಳ ಆಡಳಿತಾವಧಿಯಲ್ಲಿ ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಬಡವರ ಅಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಅಲ್ಲದೆ, ಕಾಂಗ್ರೆಸ್ ಆಡಳಿತಾವಧಿಯಲ್ಲಿ ಆಗಿದ್ದ ಅವ್ಯವಸ್ಥೆಯನ್ನು ಪ್ರಧಾನಿ ಮೋದಿಯವರು ಸರಿ ಮಾಡುವ ಮೂಲಕ ಸಾಲ ಪಡೆಯದೇ ದೇಶವನ್ನು ಮುನ್ನಡೆಸುತ್ತಿದ್ದಾರೆ.

     ಮುದ್ರಾ ಯೋಜನೆಯ ಮೂಲಕ ನಿರುದ್ಯೋಗಿ ಯುವಕರು ಸ್ವಯಂ ಉದ್ಯೋಗ ಕೈಗೊಳ್ಳಲು ಬ್ಯಾಂಕ್‍ಗಳ ಮೂಲಕ ಆರ್ಥಿಕ ನೆರವು ಕೊಡಿಸುತ್ತಿದ್ದಾರೆ. ಉಜ್ವಲ ಯೋಜನೆಯ ಮೂಲಕ ಬಿಪಿಎಲ್ ಕುಟುಂಬಳಿಗೆ ಉಚಿತ ಅಡುಗೆ ಅನೀಲ ಸಂಪರ್ಕ ಕಲ್ಪಿಸಿದ್ದಾರೆ. ಹೀಗೆ ನಮ್ಮ ಸರ್ಕಾರ ಜಾರಿಗೆ ತಂದಿರುವ ಜನಪರ ಕಾರ್ಯಗಳನ್ನು ನಮ್ಮ ಕಾರ್ಯಕರ್ತರು ಮನೆ-ಮನೆಗೆ ತಿಳಿಸಿ, ಬರುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವ ಮೂಲಕ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕೆಂದು ಸಲಹೆ ನೀಡಿದರು.

     ಬಿಜೆಪಿ ಯುವ ಮುಖಂಡ ಹೆಚ್.ಎಸ್.ನಾಗರಾಜ್ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯನ್ನು ಪಕ್ಷದ ಕಾರ್ಯಕರ್ತರು ಗಂಭೀರವಾಗಿ ಪರಿಗಣಿಸುವ ಮೂಲಕ ಚುನಾವಣೆಯನ್ನು ಸಮರ್ಥವಾಗಿ ಎದುರಿಸಬೇಕು. ಸ್ಪಲ್ವ ಎಚ್ಚರ ತಪ್ಪಿದರೂ ಅಪಾಯ ಕಾದಿದೆ. ಆದ್ದರಿಂದ ಅತೀ ಜಾಗರೂಕರಾಗಿರಬೇಕು ಎಂದರು.

   ಪಾಲಿಕೆ ಮಾಜಿ ಸದಸ್ಯ ಹೆಚ್.ಎಂ.ರುದ್ರಮುನಿಸ್ವಾಮಿ ಮಾತನಾಡಿ, ಬಿಜೆಪಿ ವರ್ಚಸ್ಸು ದಿನೇ, ದಿನೇ ಹೆಚ್ಚುತ್ತಿರುವ ಕಾರಣದಿಂದ ಬೇರೆ ಪಕ್ಷಗಳ ಮುಖಂಡರು, ಕಾರ್ಯಕರ್ತರು ಬಿಜೆಪಿಗೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ. ಹೀಗಾಗಿ ಅವರನ್ನು ನಮ್ಮ ಪಕ್ಷಕ್ಕೆ ಗೌರವಯುವತವಾಗಿ ಸ್ವಾಗತಿಸಿ, ಪಕ್ಷವನ್ನು ಬಲಪಡಿಸಬೇಕೆಂದು ಹೇಳಿದರು.

     ಸಭೆಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಎನ್.ಶಿವಕುಮಾರ್, ಬಿ.ರಮೇಶ ನಾಯ್ಕ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪಿ.ಸಿ.ಶ್ರೀನಿವಾಸ್, ಸತೀಶ್ ಕೆ, ಡಿ.ಎಸ್.ಶಿವಶಂಕರ್, ರಾಜನಹಳ್ಳಿ ಶಿವಕುಮಾರ್, ಶಾಂತಕುಮಾರ್ ಸೋಗಿ, ಭಾಗ್ಯಪಿಸಾಳೆ, ದೇವಿರಮ್ಮ ರಾಮಚಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here