ತುಮಕೂರು:
ಅಯೋಧ್ಯೆಯ ಶ್ರೀ ರಾಮನ ದರ್ಶನಕ್ಕೆ ರಾಜ್ಯದಿಂದ ಆರಂಭಿಸಿರುವ ವಿಶೇಷ ಅಯೋಧ್ಯಾಧಾಮ ಧಾಮ ರೈಲಿಗೆ ತುಮಕೂರಿನ ರೈಲ್ವೆ ನಿಲ್ದಾಣದಿಂದ ಬುಧವಾರ ಮುಂಜಾನೆ ಹಸಿರು ನಿಶಾನೆ ತೋರಲಾಯಿತು.
ಜಿಲ್ಲೆಯ 215 ಮಂದಿ ರಾಮಭಕ್ತರು ಈ ವಿಶೇಷ ತುಮಕೂರು-ಅಯೋಧ್ಯೆಧಾಮ ರೈಲಿನಲ್ಲಿ ಬುಧವಾರ ಮುಂಜಾನೆ ಪ್ರಯಾಣ ಆರಂಭವಿಸಿದ್ದು, ರಾಮಲಲ್ಲಾ ದರ್ಶನಕ್ಕೆ ತೆರಳಿದ ಎಲ್ಲಾ ರಾಮ ಭಕ್ತರಿಗೆ ಶಾಸಕರು, ಬಿಜೆಪಿ ಅಧ್ಯಕ್ಷರು, ಮುಖಂಡರು ಶುಭ ಕೋರಿ ಬೀಳ್ಕೊಟ್ಟರು.
ಈ ವೇಳೆ ಮಾತನಾಡಿದ ಶಾಸಕ ಬಿ.ಸುರೇಶ್‌ಗೌಡ, ದೇಶದ ಬಹುಜನರ ಆಶಯವನ್ನು ಪ್ರಧಾನಿ ಮೋದಿ ಅವರು ಈಡೇರಿಸಿದ್ದು, ಕರ್ನಾಟದಿಂದ ಮೊದಲ ತಂಡವಾಗಿ ಜಿಲ್ಲೆಯ ಭಕ್ತರು ಅಯೋಧ್ಯೆಗೆ ಹೊರಟಿದ್ದಾರೆ. ಧರ್ಮಕ್ಷೇತ್ರವಾಗಿ ಅಯೋಧ್ಯೆ ಭಕ್ತರನ್ನು ಆಕರ್ಷಿಸುತ್ತಿದೆ ಎಂದರು.
6 ದಿನಗಳ ಪ್ರವಾಸ: ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಚ್.ಎಸ್.ರವಿಶಂಕರ್ ಮಾತನಾಡಿ, ಜಿಲ್ಲೆಯ ಭಕ್ತರು ಸಂಭ್ರಮ, ಸಡಗರದಿಂದ ಅಯೋಧ್ಯೆ ಶ್ರೀ ರಾಮ ದರ್ಶನಕ್ಕಾಗಿ ಆರು ದಿನಗಳ ಪ್ರವಾಸ ಹೊರಟಿದ್ದಾರೆ. ತಲಾ ೩ ಸಾವಿರ ರೂ. ಪಾವತಿಸಿ ರೈಲು ಪ್ರಯಾಣ ಮಾಡುತ್ತಿರುವ ಯಾತ್ರಿಕರಿಗೆ ರೈಲ್ವೆ ಇಲಾಖೆ ಎಲ್ಲಾ ರೀತಿಯ ಸೇವಾಸೌಲಭ್ಯ ಒದಗಿಸಿದೆ ಎಂದರು.
ರಾಜ್ಯ ಬಿಜೆಪಿ ಕಾರ್ಯದರ್ಶಿ ಅಂಬಿಕಾ ಹುಲಿನಾಯ್ಕರ್, ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿ ಅಯೋಧ್ಯೆ ಪ್ರವಾಸಕ್ಕೆ ತೆರಳುತ್ತಿರುವುದು ಗಮನಾರ್ಹ. ಮುಂದಿನ ದಿನಗಳಲ್ಲಿ ಯಾತ್ರಿಕರ ಸಂಖ್ಯೆ ಹೆಚ್ಚಾಗಿ ಅಯೋಧ್ಯೆ ಜಗತ್ತಿನ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಗಮನ ಸೆಳೆಯಲಿದೆ ಎಂದರು.
ಅಯೋಧ್ಯೆ ಯಾತ್ರೆಯ ಸಂಚಾಲಕ ಜಗದೀಶ್ ಹಿರೇಮನೆ, ಜಿಲ್ಲಾ ಬಿಜೆಪಿ ಕೋಶಾಧ್ಯಕ್ಷ ಡಾ.ಎಸ್.ಪರಮೇಶ್, ಮಾಧಮ ಸಂಚಾಲಕ ಟಿ.ಆರ್.ಸದಾಶಿವಯ್ಯ, ವಕ್ತಾರ ಜಗದೀಶ್, ನಗರ ಪಾಲಿಕೆ ಮಾಜಿ ಸದಸ್ಯರಾದ ಹೆಚ್.ಮಲ್ಲಿಕಾರ್ಜುನಯ್ಯ, ಸಿ.ಎನ್.ರಮೇಶ್, ಮುಖಂಡರಾದ ಕೆ.ವೇದಮೂರ್ತಿ, ಚಂದ್ರಬಾಬು, ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದು ಅಯೋಧ್ಯೆ ಯಾತ್ರಿಕರಿಗೆ ಶುಭ ಕೋರಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ