ರಾಷ್ಟ್ರದ ಪ್ರಗತಿಗೆ ವಿಜ್ಞಾನವೇ ಮೂಲತಳಹದಿ : ವಿಜ್ಞಾನ ನಮ್ಮ ಪ್ರಗತಿಯ ಸಂಕೇತ

ಚಳ್ಳಕೆರೆ

  ಪ್ರೌಢಶಾಲಾ ಹಂತದಲ್ಲೇ ಸಾಮಾನ್ಯವಾಗಿ ಎಲ್ಲಾ ವಿದ್ಯಾರ್ಥಿಗಳಲ್ಲಿ ಹಲವಾರು ಹೊಸ ವಿಚಾರಗಳ ಬಗ್ಗೆ ಚಿಂತನೆ ನಡೆಸುವ ಸಾಮಥ್ರ್ಯವಿರುತ್ತದೆ. ವಿದ್ಯಾರ್ಥಿಗಳು ವಿವಿಧ ವಿಷಯಗಳಲ್ಲಿ ನಡೆಸುವ ಅಭ್ಯಾಸ ಅವರನ್ನು ಜ್ಞಾನದ ದಿಕ್ಕಿನತ್ತ ತೆಗೆದುಕೊಂಡು ಹೋಗುತ್ತದೆ. ಅದರಲ್ಲೂ ವಿಜ್ಞಾನ ಮಕ್ಕಳ ಬುದ್ದಿ ಕೌಶಲ್ಯವನ್ನು ಆವಿಷ್ಕಾರ ಮಾಡುವ ಸಾಧನವಾಗಿದೆ. ಈ ಹಿನ್ನೆಲೆಯಲ್ಲಿ ವಿಜ್ಞಾನ ವಿಷಯಕ್ಕೆ ಹೆಚ್ಚು ಮಹತ್ವವವನ್ನು ನೀಡಲಾಗುತ್ತಿದೆ. ನಮ್ಮ ಎಲ್ಲಾ ಪ್ರಗತಿಪರ ಸಾಧನೆಗಳಲ್ಲಿ ವಿಜ್ಞಾನದ ಪಾತ್ರವೇ ಹೆಚ್ಚು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ವೆಂಕಟೇಶಪ್ಪ ತಿಳಿಸಿದರು.

  ಅವರು, ಮಂಗಳವಾರ ಇಲ್ಲಿನ ಎಚ್‍ಟಿಟಿ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ವಸ್ತು ಪ್ರದರ್ಶನದಲ್ಲಿ ಗ್ರಾಮೀಣ ಭಾಗಗಳ ಪ್ರೌಢಶಾಲಾ ವಿದ್ಯಾರ್ಥಿಗಳು ತಮ್ಮ ಬುದ್ದಿ ಕೌಶಲ್ಯವನ್ನು ಮೀರಿ ಅನೇಕ ರೀತಿ ಉತ್ತಮ ಮಾದರಿಗಳನ್ನು ತಯಾರಿಸಿ ಇಲ್ಲಿ ಪ್ರದರ್ಶನಕ್ಕೆ ಇಟ್ಟಿದ್ಧಾರೆ. ವಿದ್ಯಾರ್ಥಿಗಳಲ್ಲಿ ಅಡಗಿರುವ ವಿಜ್ಞಾನದ ಹಲವಾರು ಪ್ರಯೋಗಗಳು ಅತ್ಯಂತ ಪ್ರಭಾವವನ್ನು ಬೀರುವಂತಹವುಗಳಾಗಿವೆ. ವಿದ್ಯಾರ್ಥಿಗಳು ವಿಜ್ಞಾನದಲ್ಲಿ ಅನೇಕ ಪ್ರಯೋಗಗಳು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರತಿವರ್ಷ ನಡೆಯುವ ವಿಜ್ಞಾನ ವಸ್ತು ಪ್ರದರ್ಶನ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ಉತ್ತಮ ಪಡಿಸುವಲ್ಲಿ ಸಹಕಾರಿಯಾಗಿದೆ ಎಂದರು.

  ಪ್ರಾಸ್ತಾವಿಕವಾಗಿ ಮಾತನಾಡಿದ ಬಿಆರ್‍ಸಿ ಮಂಜಪ್ಪ, ಶಿಕ್ಷಣ ಇಲಾಖೆ ಪ್ರತಿವರ್ಷ ನಡೆಯುವ ಹಲವಾರು ಗುಣಾತ್ಮಕ ಕಾರ್ಯಕ್ರಮದಲ್ಲಿ ವಿಜ್ಞಾನ ವಸ್ತು ಪ್ರದರ್ಶನವೂ ಸಹ ಒಂದಾಗಿದೆ. ಪ್ರತಿವರ್ಷವೂ ವಿದ್ಯಾರ್ಥಿಗಳು ಪರಿಶ್ರಮದಿಂದ ಶಿಕ್ಷಕರ ಮಾರ್ಗದರ್ಶನದಲ್ಲಿ ನೂತನ ತಾಂತ್ರಿಕತೆಯ ಅಂಶಗಳಿಂದ ಕೂಡಿದ ಪ್ರಯೋಗಗಳನ್ನು ಸಿದ್ದ ಪಡಿಸುತ್ತಾರೆ. ತಾಲ್ಲೂಕಿನಾದ್ಯಂತ ಒಟ್ಟು 96 ಪ್ರೌಢಶಾಲೆಗಳಿದ್ದು ಬಹುತೇಕ ಎಲ್ಲಾ ಪ್ರೌಢಶಾಲೆಗಳ ವಿಜ್ಞಾನದ ವಿದ್ಯಾರ್ಥಿಗಳು ಈ ವಸ್ತು ಪ್ರದರ್ಶನದಲ್ಲಿ ಭಾಗಿಯಾಗಿದ್ದಾರೆ. 100ಕ್ಕೂ ಹೆಚ್ಚು ಹಲವಾರು ವಿಷಯಗಳ ವಿಜ್ಞಾನ ಪ್ರಯೋಗದ ಮಾದರಿಗಳನ್ನು ನಾವು ಇಲ್ಲಿ ವೀಕ್ಷಿಸಬಹುದು. ಪ್ರತಿಯೊಬ್ಬ ವಿದ್ಯಾರ್ಥಿಯೂ ಈ ಕಾರ್ಯದಲ್ಲಿ ಶ್ರಮದಿಂದ ಮಾದರಿಗಳನ್ನು ಸಿದ್ದ ಪಡಿಸಿ ಪ್ರದರ್ಶಿಸುತ್ತಿದ್ಧಾರೆ. ತಾಲ್ಲೂಕು ಮಟ್ಟದ ವಿಜ್ಞಾನ ಮೇಳ ವಿದ್ಯಾರ್ಥಿಗಳ ಕೌಶಲ್ಯವನ್ನು ಹೆಚ್ಚಿಸುವುದರಲ್ಲಿ ಸಫಲವಾಗಿದೆ. ಪ್ರಯೋಗ ತಯಾರಿಕೆಯಲ್ಲಿ ಮಾರ್ಗದರ್ಶನ ನೀಡಿದ ಎಲ್ಲಾ ವಿಜ್ಞಾನ ಶಿಕ್ಷಕರನ್ನು ಅಭಿನಂದಿಸುವುದಾಗಿ ತಿಳಿಸಿದರು.
ಎಚ್‍ಟಿಟಿ ಶಾಲೆಯ ಮುಖ್ಯ ಶಿಕ್ಷಕ ಎಚ್.ರಾಜಣ್ಣ ಮಾತನಾಡಿ, ತಾಲ್ಲೂಕು ಮಟ್ಟದ ವಿಜ್ಞಾನ ಮೇಳ ಪ್ರಭಾವವನ್ನು ಬೀರುವಲ್ಲಿ ಸಹಕಾರಿಯಾಗಿವೆ. ವಿಜ್ಞಾನದಲ್ಲಿ ನಿರೀಕ್ಷೆಗೂ ಮೀರಿ ಹೆಚ್ಚು ಪ್ರಯೋಗಗಳನ್ನು ಇಲ್ಲಿ ಕಾಣಬಹುದಾಗಿದೆ. ವಿಶೇಷವಾಗಿ ತಾಲ್ಲೂಕಿನ ಕುದಾಪುರ ಫಾರಂ ಬಳಿ ಇರುವ ಐಐಎಸ್‍ಸಿ ವಿಜ್ಞಾನ ಕೇಂದ್ರದಲ್ಲಿ ವಿಜ್ಞಾನ ಶಿಕ್ಷಕರಿಗೆ ವಿಜ್ಞಾನದ ಹಲವಾರು ಆವಿಷ್ಕಾರಗಳನ್ನು ಕುರಿತು ತರಬೇತಿ ನೀಡಲಾಗುತ್ತಿದೆ. ಚಳ್ಳಕೆರೆ ತಾಲ್ಲೂಕು ವಿಜ್ಞಾನದ ವಿಷಯದ ಮುಂಚೂಣಿ ಕೇಂದ್ರವೆಂಬ ಖ್ಯಾತಿ ಇದೆ. ಈ ಖ್ಯಾತಿಯನ್ನು ಸದಾಕಾಲ ಹಸಿರಾಗಿರಲು ನಮ್ಮ ವಿಜ್ಞಾನ ವಿದ್ಯಾರ್ಥಿಗಳು ಮತ್ತಷ್ಟು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಬೇಕು ಎಂದರು.

  ಇದೇ ಸಂದರ್ಭದಲ್ಲಿ ವಿಜ್ಞಾನ ವಿಷಯದಲ್ಲಿ ವಿವಿಧ ಮಾದರಿಗಳನ್ನು ಸಿದ್ದ ಪಡಿಸಿದ ಶಾಲೆಗಳಿಗೆ ಬಹುಮಾನ ಘೋಷಿಸಲಾಯಿತು. ಆರೋಗ್ಯ ಮತ್ತು ನೈರ್ಮಲ್ಯ ವಿಭಾಗದಲ್ಲಿ ವಾಸವಿ ಪ್ರೌಢಶಾಲೆ ಪ್ರಥಮ, ಕೊರ್ಲಕುಂಟೆ ಸರ್ಕಾರಿ ಪ್ರೌಢಶಾಲೆ ದ್ವಿತೀಯ, ಮೊರಾರ್ಜಿ ಪ್ರೌಢಶಾಲೆ ತೃತೀಯ. ವ್ಯವಸಾಯ ಮತ್ತು ಸಾವಯವ ಕೃಷಿಯಲ್ಲಿ ಎಚ್‍ಟಿಟಿ ಪ್ರೌಢಶಾಲೆ ಪ್ರಥಮ, ಮೊರಾರ್ಜಿ ದ್ವಿತೀಯ, ಮಾರುತಿ ಪ್ರೌಢಶಾಲೆ ತೊರೆಕೋಲಮ್ಮನಹಳ್ಳಿ ತೃತೀಯ. ತ್ಯಾಜ್ಯ ನಿರ್ವಹಣೆ :- ಕುವೆಂಪು ಪ್ರೌಢಶಾಲೆ ಪ್ರಥಮ, ರೇಖಲಗೆರೆ ಲಂಬಾಣಿಹಟ್ಟಿ ಸರ್ಕಾರಿ ಪ್ರೌಢಶಾಲೆ ದ್ವಿತೀಯ, ವಾಸವಿ ಪ್ರೌಢಶಾಲೆ ತೃತೀಯ. ಸಾರಿಗೆ ಸಂಪರ್ಕ :- ಮಹಾತ್ಮಗಾಂಧಿ ಪ್ರೌಢಶಾಲೆ ಪ್ರಥಮ, ವಾಸವಿ ಪ್ರೌಢಶಾಲೆ ದ್ವಿತೀತ, ಸರ್ಕಾರಿ ಪ್ರೌಢಶಾಲೆ ತಿಮ್ಮನಹಳ್ಳಿ ತೃತೀಯ. ಸಂಪನ್ಮೂಲ ನಿರ್ವಹಣೆ :- ಕಲಮರಹಳ್ಳಿ ಸರ್ಕಾರಿ ಪ್ರೌಢಶಾಲೆ ಪ್ರಥಮ, ಎಚ್‍ಟಿಟಿ ಪ್ರೌಢಶಾಲೆ ದ್ವಿತೀಯ, ವಾಸವಿ ಪ್ರೌಢಶಾಲೆ ತೃತೀಯ. ಗಣಿತಶಾಸ್ತ್ರ ವಿನ್ಯಾಸ ವಿಭಾಗಕ್ಕೆ :- ವಿದ್ಯಾವಿಕಾಸ ಪ್ರೌಢಶಾಲೆ ನಾಯಕನಹಟ್ಟಿ ಪ್ರಥಮ, ಕುವೆಂಪು ಪ್ರೌಢಶಾಲೆ ದ್ವಿತೀಯ, ಸರ್ಕಾರಿ ಪದವಿ ಪೂರ್ವ ಕಾಲೇಜು ಪರಶುರಾಮಪುರ ತೃತೀಯ ಬಹುಮಾನ ಪಡೆದವು.

ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕಾರದ ಜಂಪಣ್ಣ, ಮುಖ್ಯ ಶಿಕ್ಷಕ ಸಂಪತ್ ಕುಮಾರ್, ಸಹ ಶಿಕ್ಷಕ ಬಿ.ರಾಜಣ್ಣ, ವಸಂತ ಕುಮಾರ್, ದೊಡ್ಡಯ್ಯ, ನೀಲಕಂಠ, ಚಂದ್ರಶೇಖರ್, ಮಂಜುನಾಥ, ಎಲ್. ರುದ್ರಮುನಿ ಮುಂತಾದವರು ಇದ್ದರು.

Recent Articles

spot_img

Related Stories

Share via
Copy link