ನವದೆಹಲಿ:
‘ಮೋದಿ ಉಪನಾಮ’ ಹೇಳಿಕೆಗೆ ಸಂಬಂಧಿಸಿದಂತೆ ಮಾನನಷ್ಟ ಮೊಕದ್ದಮೆಯಲ್ಲಿ ಗುಜರಾತ್ ಹೈಕೋರ್ಟ್ ನೀಡಿದ್ದ 2 ವರ್ಷಗಳ ಶಿಕ್ಷೆಗೆ ಸುಪ್ರೀಂ ಕೋರ್ಟ್ ಇಂದು ತಡೆ ನೀಡಿದೆ.
ಪ್ರಕರಣ ಸಂಬಂಧ ಗುಜರಾತ್ ಹೈಕೋರ್ಟ್ ನೀಡಿದ್ದ ಶಿಕ್ಷೆಗೆ ತಡೆ ಕೋರಿ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಮೋದಿ ಉಪನಾಮ ಟೀಕೆಗೆ ಸಂಬಂಧಿಸಿದಂತೆ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಯನ್ನು ತಡೆಹಿಡಿಯಲು ನಿರಾಕರಿಸಿದ ಗುಜರಾತ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಶಿಕ್ಷೆಗೆ ಮಧ್ಯಂತರ ತಡೆ ನೀಡಿದೆ. ರಾಹುಲ್ ಗಾಂಧಿ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದಿಸಿದ್ದರು.
ರಾಹುಲ್ ಅರ್ಜಿ ವಿಚಾರಣೆ ನಡೆಸಿದ ಬಿಆರ್ ಘರ್ವಿ, ಪಿಎಸ್ ನರಸಿಂಹ ಮತ್ತು ಸಂಜಯ್ ಕುಮಾರ್ ಅವರಿದ್ದ ಪೀಠ, ಉಚ್ಛಾರಣೆಗಳು ಉತ್ತಮ ಅಭಿರುಚಿಯಿಲ್ಲ ಎಂಬುದರಲ್ಲಿ ಸಂದೇಹವಿಲ್ಲ, ಸಾರ್ವಜನಿಕ ಜೀವನದಲ್ಲಿ ವ್ಯಕ್ತಿಗಳು ಸಾರ್ವಜನಿಕ ಭಾಷಣಗಳನ್ನು ಮಾಡುವಾಗ ಎಚ್ಚರಿಕೆ ವಹಿಸಬೇಕು ಎಂದು ಹೇಳಿದೆ.
ಗುಜರಾತ್ ಸರ್ಕಾರದ ಮಾಜಿ ಸಚಿವ ಪೂರ್ಣೇಶ್ ಮೋದಿ ಅವರು 2019 ರಲ್ಲಿ ಗಾಂಧಿ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು ಏಪ್ರಿಲ್ 13, 2019 ರಂದು ಕರ್ನಾಟಕದ ಕೋಲಾರದಲ್ಲಿ ಚುನಾವಣಾ ರ್ಯಾಲಿಯಲ್ಲಿ ರಾಹುಲ್ ಗಾಂಧಿ, ಎಲ್ಲ ಕಳ್ಳರ ಸರ್ ನೇಮ್ ಮೋದಿ ಎಂದೇ ಯಾಕಿದೆ? ಎಂದು ಕೇಳಿದ್ದರು. ಈ ಹೇಳಿಕೆಯಿಂದ ರಾಹುಲ್ ಮೋದಿ ಹೆಸರಿರುವವರನ್ನು ಅವಮಾನಿಸಿದ್ದಾರೆ ಎಂದು ಪೂರ್ಣೇಶ್ ಮೋದಿ ದೂರು ದಾಖಲಿಸಿದ್ದರು.
