ದಾವಣಗೆರೆ:
ಭಾರತದ ಸಂವಿಧಾನ ಪ್ರತಿ ಸುಟ್ಟು, ಅಂಬೇಡ್ಕರ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಕಿಡಿಗೇಡಿಗಳನ್ನು ದೇಶದ್ರೋಹ ಕಾನೂನಿನಡಿ ಶಿಕ್ಷಿಸುವಂತೆ ಒತ್ತಾಯಿಸಿ ವಕೀಲರು ಗುರುವಾರ ಇಲ್ಲಿನ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟಿಸಿದರು.
ಇದೇ ವೇಳೆ ಪೀಪಲ್ಸ್ ಲಾಯರ್ಸ್ ಗಿಲ್ಡ್ ಅಧ್ಯಕ್ಷ ಅನಿಸ್ ಪಾಷ ಮಾತನಾಡಿ, ಇತ್ತೀಚೆಗೆ ನವದೆಹಲಿಯ ಜಂತರ್ ಮಂತರ್‍ನಲ್ಲಿ ಅಜಾದ್ ಸೇನೆ ಹಾಗೂ ಇನ್ನಿತರ ಸಂಘಟನೆಯ ಕೆಲವರು ದೇಶದ ಸಂವಿಧಾನ ಪ್ರತಿ ಹರಿದು ಹಾಕಿ, ಸುಟ್ಟಿರುವುದಲ್ಲದೆ, ಅಂಬೇಡ್ಕರ್ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಇದು ಭಾರತೀಯರಾದ ನಮ್ಮ ಭಾವನೆಗಳಿಗೆ ಧಕ್ಕೆ ತರುವ ಜೊತೆಗೆ ದೇಶದ ವಿರುದ್ಧ ದಂಗೆ ಏಳುವಂತೆ ಪ್ರಚೋದಿಸುವ ದೇಶದ್ರೋಹಿ ಕೃತ್ಯವಾಗಿದೆ. ಅಲ್ಲದೆ ದಲಿತರ ವಿರುದ್ಧ ಅವಹೇಳನಕಾರಿ ಮಾತನಾಡಿ ಜಾತಿ ನಿಂದನೆ ಮಾಡಿರುವುದು ಜಾತಿಗಳ ಮಧ್ಯೆ ವೈಷಮ್ಯ ಉಂಟುಮಾಡುವ ಕೃತ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ ಕೆಲವು ಪ್ರಜಾಪ್ರತಿನಿದಿಗಳು ಸಂವಿಧಾನದ ಆಧಾರದ ಮೇಲೆ ಗೆದ್ದು ಬಂದು, ಅದೇ ಸಂವಿಧಾನದ ಮೇಲೆ ಪ್ರಮಾಣವಚನ ಸ್ವೀಕರಿಸಿ, ಮರುಕ್ಷಣದಲ್ಲಿ ಸಂವಿಧಾನವನ್ನು ಬದಲಾಯಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಇಂತಹ ಸಂಧರ್ಭದಲ್ಲಿ ಸಂವಿಧಾನ ಸುಟ್ಟ ಕಿಡಿಗೇಡಿಗಳ ವಿರುದ್ಧ ಸಣ್ಣ ಪ್ರಮಾಣದ ಶಿಕ್ಷೆಗೆ ಒಳಪಡಿಸುವ ಕಲಂಗಳನ್ನು ದಾಖಲಿಸಿರುವುದು ಸರಿಯಲ್ಲ. ಇದರಿಂದ ದುಷ್ಕರ್ಮಿಗಳಿಗೆ ಇನ್ನಷ್ಟು ಪ್ರಚೋದನೆ ನೀಡಿದಂತಾಗುತ್ತದೆ. ಇದು ನಮ್ಮ ದೇಶದ ಆಂತರಿಕ ಭದ್ರತೆಗೆ ತರುವ ಜೊತೆಗೆ ಐಕ್ಯತೆ, ಭ್ರಾತೃತ್ವಕ್ಕೂ ಸಂಚಕಾರಿಯಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ವಕೀಲರಾದ ಶ್ಯಾಮ್, ಗೋಪಾಲ್, ಹಲಗೇರಿ ಮಂಜಪ್ಪ, ರಂಗನಾಥ, ಶ್ರೀಧರ್, ಕೇಶವ್, ಸಿರಾಜ್, ಅಬ್ದುಲ್ ಸಮದ್, ನಾಗರಾಜ, ಹಲಗೇರಿ ಚಂದ್ರಪ್ಪ, ಗಂಗಾಧರ, ಜ್ಯೋತಿ, ವನ್ಯಶ್ರೀ, ಸುಭಾಸ್ ಚಂದ್ರ ಬೋಸ್, ವಿದ್ಯಾದರ್ ವೇದವರ್ಮ, ಖಲೀಲ್, ಇಮ್ರಾನ್, ಕುಮಾರ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
