ಬೆಂಗಳೂರು
ಉಪ ಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಬುಧವಾರ ವೋಲ್ವೋ ಬಸ್‌ನಲ್ಲಿ ನಗರ ಸಂಚಾರ ಮಾಡಿ ನಗರದ ೧೨ ಮಾರ್ಗದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಬಸ್‌ಗಳ ಸಂಚಾರಕ್ಕೆ ಪ್ರತ್ಯೇಕ ಬಸ್ ಲೇನ್ ನಿರ್ಮಾಣಗೊಂಡಿರುವುದನ್ನು ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಕೆಲವು ಸಲಹೆ ಸೂಚನೆಗಳನ್ನು ನೀಡಿದರು
ಸಚಿವರಾದ ಬಳಿಕ ಮೊದಲ ಬಾರಿಗೆ ಬಿಎಂಟಿಸಿ ವೋಲ್ವೋ ಬಸ್‌ನಲ್ಲಿ ನಗರ ಸಂಚಾರ ಮಾಡಿದ ಅವರು ಪ್ರತ್ಯೇಕ ಪಥ ವೀಕ್ಷಿಸಿ ಪ್ರಯಾಣಿಕರಿಗೆ ಅಗತ್ಯವಾದ ರಸ್ತೆ ಸುಧಾರಿತ ಪ್ರಯಾಣ, ಕಡಿಮೆ ಅವಧಿಯಲ್ಲಿ ಹೆಚ್ಚಿನ ದೂರವನ್ನು ಕ್ರಮಿಸುವುದು, ಹೆಚ್ಚಿನ ಜನರನ್ನು ಬಸ್ಸಿನಲ್ಲಿ ಪ್ರಯಾಣಿಸಲು ಆಕರ್ಷಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಪರಿಶಿಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ನಗರದಲ್ಲಿ ಬಸ್ ಕಾರಿಡಾರ್ ಗಳನ್ನು ರಚಿಸಲು ಯೋಜನೆ ಹಾಗೂ ಮೊದಲನೇ ಹಂತವಾಗಿ ಟಿನ್ ಫ್ಯಾಕ್ಟರಿಯಿಂದ ಸೆಂಟ್ರಲ್‌ನ ಸಿಲ್ಕ್ ಬೋರ್ಡ್ ರಸ್ತೆ ಮಾರ್ಗ ಬಳಕೆ ಮಾಡುವುದರ ಕುರಿತು ಪರಿಶೀಲನೆ ನಡೆಸಿ ಹೆಚ್ ಎಸ್ ಆರ್ ಲೇಔಟ್ ನ ವೋಲ್ವೋ ಡಿಪೋ ೨೫ ಕ್ಕೆ ಭೇಟಿ ನೀಡಿ ಗಾಂಧಿ ಜಯಂತಿಯ ದಿನವಾಗಿದ್ದರಿಂದ ಸ್ವೀಟ್ ತಿನ್ನಿ ಎಂದು ಡಿಪೋ ತಾಂತ್ರಿಕ ಸಿಬ್ಬಂದಿಗೆ ೫ ಸಾವಿರವನ್ನು ನೀಡಿ ತಾಂತ್ರಿಕ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದರು..
ಏಕಕಾಲದಲ್ಲಿ ಪರಿಹಾರ
ಇದೇ ಸಂದರ್ಭದಲ್ಲಿ ರಾಜ್ಯಕ್ಕೆ ನೆರೆ ಪರಿಹಾರ ಕುರಿತು ಮಾತನಾಡಿದ ಸಚಿವರು, ಪ್ರವಾಹ ವಿಚಾರ ಕೇಂದ್ರ ಸರ್ಕಾರದ ಗಮನದಲ್ಲಿದೆ. ೫ ರಾಜ್ಯದಲ್ಲಿ ನೆರೆ ಪ್ರವಾಹ ಉಂಟಾಗಿದೆ. ಎಲ್ಲಾ ೫ ರಾಜ್ಯಗಳಿಗೆ ಏಕಕಾಲಕ್ಕೆ ಬಿಡುಗಡೆ ಮಾಡುತ್ತಾರೆ. ಕೇಂದ್ರ ಗೃಹಸಚಿವರು ಈ ಭರವಸೆ ನೀಡಿದ್ದಾರೆ. ಕೇಂದ್ರದ ನೆರವಿಗೆ ಕಾಯದೆ ೨ ಸಾವಿರ ಕೋಟಿ ಈಗಾಗಲೇ ವಿತರಣೆ ಆರಂಭಿಸಿದ್ದೇವೆ. ನಾಳೆ ಸಚಿವ ಸಂಪುಟ ಸಭೆ ಬಳಿಕ ಮನೆ ಕಳೆದುಕೊಂಡವರಿಗೆ ೫ ಲಕ್ಷದಲ್ಲಿ ಆರಂಭಿಕವಾಗಿ ನಾಳೆ ೧ ಲಕ್ಷ ವಿತರಣೆ ಮಾಡುತ್ತೇವೆ. ಸಾಂತ್ವನ ಹೇಳೋದರಲ್ಲಿ ತಪ್ಪಿಲ್ಲ. ನಮಗೆ ಕೇಂದ್ರದ ಮೇಲೆ ವಿಶ್ವಾಸ ಇದೆ. ನೆರೆ ಪರಿಹಾರ ಶೀಘ್ರದಲ್ಲೇ ಬಿಡುಗಡೆ ಆಗಲಿದೆ ಎಂದು ಭರವಸೆ ನೀಡಿದರು.
೧೨ ಮಾರ್ಗದಲ್ಲಿ ಲೇನ್
ನಗರದಲ್ಲಿ ಬಿಬಿಎಂಪಿ, ಬಿಎಂಟಿಸಿ, ಬೆಂಗಳೂರು ಸಂಚಾರ ಪೊಲೀಸ್ ಮತ್ತು ಡಲ್ಟ್ ಸಂಸ್ಥೆಗಳು ಒಟ್ಟಾಗಿ ಪ್ರತ್ಯೇಕ ಬಸ್ ಪಥ ನಿರ್ಮಾಣ ಮಾಡುವ ಪ್ರಸ್ತಾವನೆ ಸಿದ್ಧಪಡಿಸಿದ್ದವು.ಎಂ. ಜಿ. ರಸ್ತೆಯಿಂದ ವೆಲ್ಲಾರ ಜಂಕ್ಷನ್ ಮಾರ್ಗವಾಗಿ ಕೆ. ಆರ್. ಪುರ ಮತ್ತು ಸಿಲ್ಕ್ ಬೋರ್ಡ್ ತನಕ ೩೦ ಕಿ. ಮೀ. ಉದ್ದದ ಮೊದಲ ಬಸ್ ಪಥ ನಿರ್ಮಾಣವಾಗಲಿದೆ. ರಸ್ತೆಯಲ್ಲಿ ಪ್ರತ್ಯೇಕ ಬಸ್ ಪಥಕ್ಕೆ ಬ್ಯಾರಿಕೇಡ್ ಹಾಕಲಾಗುತ್ತದೆ.
ಬೆಂಗಳೂರು ನಗರದ ೧೨ ಮಾರ್ಗದಲ್ಲಿ ಪ್ರಾಯೋಗಿಕವಾಗಿ ಬಸ್ ಪಥ ನಿರ್ಮಾಣವಾಗಲಿದೆ. ಹೊರವರ್ತುಲ ರಸ್ತೆ, ಬನ್ನೇರುಘಟ್ಟ ರಸ್ತೆ, ಹಳೆ ಮದ್ರಾಸ್ ರಸ್ತೆ, ಹಳೆ ವಿಮಾನ ನಿಲ್ದಾಣ ರಸ್ತೆ, ವೆಸ್ಟ್ ಆಫ್ ಕಾರ್ಡ್ ರೋಡ್, ಮಾಗಡಿ ರಸ್ತೆ, ಬಳ್ಳಾರಿ ರಸ್ತೆಯಲ್ಲಿ ಪ್ರತ್ಯೇಖ ಬಸ್ ಪಥವನ್ನು ನಿರ್ಮಿಸಲಾಗುತ್ತಿದೆ.
ಪ್ರತ್ಯೇಕ ಬಸ್ ಪಥ ೩.೫ ಮೀಟರ್ ಅಗಲ ಹೊಂದಿರಲಿದೆ. ಈಗಿರುವ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಕೆ ಮಾಡಿ ಪ್ರತ್ಯೇಕ ಪಥವನ್ನು ನಿರ್ಮಾಣ ಮಾಡಲಾಗುತ್ತದೆ. ಬಿಎಂಟಿಸಿ ಬಸ್‌ಗಳು ಇನ್ನು ಮುಂದೆ ಪ್ರತ್ಯೇಕ ಪಥದಲ್ಲಿ ಮಾತ್ರ ಸಂಚಾರ ನಡೆಸಲಿವೆ. ಬೇರೆ ವಾಹನಗಳು ಸಂಚಾರ ನಡೆಸುವ ರಸ್ತೆಯಲ್ಲಿ ಚಲಿಸುವುದಿಲ್ಲ.
ದಟ್ಟಣೆ ಕಡಿಮೆ
ಬಿಎಂಟಿಸಿಯಲ್ಲಿ ಸುಮಾರು ೬೦೦೦ ಬಸ್‌ಗಳಿವೆ. ಪ್ರತಿದಿನ ಇಷ್ಟು ಬಸ್ ರಸ್ತೆಗಿಳಿಯುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತದೆ. ರಸ್ತೆಯಲ್ಲಿ ಎಲ್ಲಾ ವಾಹನಗಳ ಜೊತೆಗೆ ಬಸ್ ಸಂಚಾರ ನಡೆಸುವುದರಿಂದ ಸಂಚಾರ ದಟ್ಟಣೆಯಲ್ಲಿ ಸಿಲುಕುತ್ತವೆ. ಇದನ್ನು ತಪ್ಪಿಸಲು ಬಸ್ ಪಥ ನಿರ್ಮಿಸಲಾಗುತ್ತಿದೆ.ಈಗಾಗಲೇ ಹುಬ್ಬಳ್ಳಿ-ಧಾರವಾಡ ನಡುವೆ ಸಂಚಾರ ನಡೆಸುವ ಬಿಆರ್‌ಟಿಎಸ್‌ಗೆ ಪ್ರತ್ಯೇಕ ಪಥವನ್ನು ರಚನೆ ಮಾಡಲಾಗಿದೆ. ಈ ಮಾರ್ಗದಲ್ಲಿ ಬೇರೆ ವಾಹನಗಳು ಸಂಚಾರ ನಡೆಸುವುದನ್ನು ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ