ಪಡುವಣ ಬಾನಲಿ ಮೂಡಿದೆ ನಸುಗೆಂಪು
ಧರೆಯಂಗಳಕಿದೊ ದುಮ್ಮಿ ಕ್ಕಿದೆ ಇರುಳ ಕಪ್ಪು
ಆವರಿಸಿದೆ ಆಗಸಕೆ ಕೌತುಕಗಳ ಬೆಡಗು
ಮುಸುಕಿದ ಮಸುಕಿನಲು ಕಾಡು ಸೊಬಗು
ಬಲೆಯೊಡ್ಡಿದೆ, ಕರೆನೀಡಿದೆ, ಬನ್ನಿರೋ ಬೇಗ
ಕಾದೊಡಲಿನ ಕಾತುರಕೆ ಉಣಿಸಿರೆ, ಎಲೆ ಮೇಘ
ಹೆಪ್ಪಿಟ್ಟಿಹ ಕತ್ತಲಲಿ ಸೆಲೆಯೊಡೆಯಲಿ ಜೀವ
ಬರಡು ರೆಂಬೆ ಕೊಂಬೆಯಲಿ ಹರಡಲಿ ಕೊರಳ ರವ
ಕಪ್ಪಿನಲ್ಲಿ ಅಚ್ಚಾಗಿಹ ಹಚ್ಚ ಹಸಿರು
ಒಣಮೈಯ ಕಾಷ್ಟದಲು ಬಸಿರಾಗಲು ಬಿಸಿಯುಸಿರು
ಅಸ್ತಮದ ಕಣ್ಣಂಚಿನಲಿ ಒಪ್ಪಿಗೆಯ ಶುಭ
ಬೆಳಗಾಗುವ ಮುನ್ನ, ಹೊಸತಾಗಲು ಭವ!
ಕರೆಯುಲಿಯ ಬಟ್ಟಲ ಮೇಲ್ಚಾಚಿ ನೀಡಿ
ಮುಳುಗುತಿಹ ಸೂರ್ಯನಿಗೆ ವಿದಾಯ ಹಾಡಿ
ಧರೆಯಾಗಿ ತಟಸ್ಥ ಚಿತ್ರ, ಕೋಡಿ
ಹರಿಸಿದೆ ನಸುಗೆಂಪು, ಬಾನ ವೈಚಿತ್ರ್ಯ !
ಸಂಜೆಗೆಂಪು ತುಂಬಲು ಬಾನೊಡಲು
ಅಸ್ತಮಿಪ ರವಿಗೆ ಕಾಡು, ನಾಡಾದರೇನು
ಮೂಡಿದರು ಇರುಳು, ರವಿ ಕಾಣದ್ದೇನು?
ಕಣ್ತೆರೆದಿದ್ದರು, ದಿಗಂತದಲಿ ಮರೆಯಾಗುವನವನು!
–ಅರೆಯೂರು ಶ್ರೀವೈದ್ಯಸುತ,
ಅರೆಯೂರು ವೈದ್ಯನಾಥಪುರ
