ಹಾಸ್ಯವೇ ಜೀವನ, ಹಾಸ್ಯದಿಂದಲೇ ಕೂಡಿದ ಪತಿಬೇಕು.ಕಾಂ

       ಇಂದಿನ ದಿನದ ಸಾಮಾಜಿಕ ಸಂಗತಿಯನ್ನು ಹಾಸ್ಯಮಯವಾಗಿ ಚಿತ್ರಿಸುವ ಪ್ರಯತ್ನದ ಸಿನಿಮಾ ‘ಪತಿಬೇಕು.ಕಾಂ’.

      ಹೌದು ಮದುವೆ ಎಂದತೆ ಸುಲಭದ ಮಾತಲ್ಲ. ಮದುವೆ ಮನೆ ಎಂದರೆ ಅದರಲ್ಲಿ ಸಂಭ್ರಮ ಇದ್ದರೂ, ಅದರ ಹಿಂದೆ ನೂರಾರು ಸಂಕಟಗಳು, ಪರದಾಟಗಳು ಇರುತ್ತವೆ. ಮಿಗಿಲಾಗಿ ಮದುವೆಗೆ ಗಂಡು/ಹೆಣ್ಣು ಹುಡುಕುವುದೇ ಪೋಷಕರಿಗೆ ಹರಸಾಹಸ ಅಗಿರುತ್ತದೆ. ವಯಸ್ಸು ಮೀರುತ್ತಿರುವ ಮಗಳಿಗೆ ಗಂಡು ಹುಡುಕಲು ಹೆಣಗಾಡುವ ಪೋಷಕರ ಗಂಭೀರ ಸಮಸ್ಯೆಯನ್ನೇ ಮನರಂಜನಾತ್ಮಕವಾಗಿ ತೆರೆದಿಟ್ಟಿದ್ದಾರೆ ನಿರ್ದೇಶಕ ರಾಕೇಶ್.

Related image

      ಈ ಚಿತ್ರದ ಒಳಹೊಕ್ಕು ನೋಡವುದಾದರೆ, ಮದುವೆ ವಯಸ್ಸಿಗೆ ಬಂದ ಮಗಳಿಗೆ ಗಂಡು ಹುಡುಕುವುದರಲ್ಲಿ ಬಸವಳಿಯುವ ಬಹುತೇಕ ಅಪ್ಪ ಅಮ್ಮಂದಿರ ಕಥೆಇದಾಗಿದೆ. ಮಧ್ಯಮವರ್ಗದ ಕುಟುಂಬವೊಂದು ವರದಕ್ಷಿಣೆಯ ಬೇಡಿಕೆಯಿಂದಾಗಿ ಮಗಳ ಮದುವೆ ಮಾಡಲಾಗದೆ ಕಂಗೆಟ್ಟಿದ್ದ ಸಿನಿಮಾದ ಕಥೆ ಪೋಷಕರ (ಕೃಷ್ಣ ಅಡಿಗ, ಹರಿಣಿ) ಪಡಿಪಾಟಲಿಗಿಂತಲೂ ಮಗಳ ಸುತ್ತವೇ ಸುತ್ತುತ್ತದೆ. ಭಾಗ್ಯ ಹೆಸರಿನಲ್ಲಿ ಪ್ರಮುಖ ಪಾತ್ರದಾರಿಯಾದ ಶೀತಲ್ ಶೆಟ್ಟಿಯನ್ನು ನೋಡಲು ಬರುವ ಗಂಡುಗಳೆಲ್ಲರದೂ ವರದಕ್ಷಿಣೆಯದ್ದೇ ಬೇಡಿಕೆ.    

      ಹಾಸ್ಯ ಚಿತ್ರದ ಜೀವಾಳ. ಪ್ರತಿ ಪಾತ್ರವನ್ನೂ ಹಾಸ್ಯದ ದೃಷ್ಟಿಯಿಂದಲೇ ಸೃಷ್ಟಿಸಿರುವುದು ಮನರಂಜನೆ ನೀಡುವ ನಿರ್ದೇಶಕರ ತುಡಿತಕ್ಕೆ ಪೂರಕವಾಗಿದೆ. ಸಿನಿಮಾಕ್ಕೆ ಕೊಡಬಹುದಾಗಿದ್ದ ಗಾಂಭೀರ್ಯವನ್ನ ಕೂಡ ಹಾಸ್ಯದ ಅಮುಲಿನಲ್ಲಿ ಮುಳುಗಿಸಿದ್ದಾರೆ. ತನ್ನ ಮದುವೆಗೆ ಬೇಕಾದ ಹಣವನ್ನು ಸಂಗ್ರಹಿಸಲು ನಾಯಕಿ ಅನುಸರಿಸುವ ತಂತ್ರಗಳು, ತಾನೇ ಮದುವೆ ಬ್ರೋಕರ್ ಕಾರ್ಯಕ್ಕೆ ಇಳಿದು ಹಣ ಸಂಪಾದಿಸುವುದು, ಲವ್ ಮ್ಯಾರೇಜ್ ಮಾಡಿಕೊಳ್ಳುವುದಕ್ಕಾಗಿಯೇ ಹುಡುಗರನ್ನು ಹುಡುಕುವುದು, ಕೊನೆಗೆ ಮದುವೆಗಾಗಿ ಇಡೀ ಕುಟುಂಬವೇ ನಾಟಕ ಮಾಡುವುದು ಅಲ್ಲಲ್ಲಿ ನಗು ಮೂಡಿಸಿದರೂ, ಹಾಸ್ಯದ ಪರಿಣಾಮ ಹೆಚ್ಚುಕಾಲ ಉಳಿಯುವುದಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ. Related image

      ವರದಕ್ಷಿಣೆ ಬಯಸದ, ಒಳ್ಳೆಯ ಗುಣಗಳನ್ನು ಹೊಂದಿರುವ ಗಂಡನ್ನು ಹುಡುಕಲು ಸ್ವತಃ ಅಖಾಡಕ್ಕೆ ಇಳಿಯುವ ನಾಯಕಿ, ತನಗೆ ಸೂಕ್ತನಾದ ಪತಿಯನ್ನು ಹುಡುಕಿಕೊಳ್ಳುತ್ತಾಳೆಯೇ? ಮಗಳಿಗೆ 61 ಗಂಡುಗಳನ್ನು ನೋಡಿ ಸುಸ್ತಾದ ಪೋಷಕರು, ಪ್ರೀತಿಸಿ ಮದುವೆಯಾಗುವ ನಿರ್ಧಾರ ಕೈಗೊಳ್ಳುವ ಮಗಳಿಗೆ ಬೆಂಬಲ ನೀಡುತ್ತಾರೆಯೇ ಎಂಬುದನ್ನು ಚಿತ್ರಮಂದಿರದಲ್ಲಿ ನೋಡಬೇಕಾಗಿದೆ.

      ಮನರಂಜನೆಯೇ ಪ್ರಧಾನವಾಗಿರುವುದರಿಂದ ಎಲ್ಲ ಪಾತ್ರಗಳಿಗೂ ನಗಿಸುವ ಹೊಣೆ ಹಂಚಲಾಗಿದೆ. ಹಲವು ಮಿತಿಗಳ ನಡುವೆಯೇ ಶೀತಲ್ ಶೆಟ್ಟಿ ಪಾತ್ರಕ್ಕೆ ನ್ಯಾಯ ಒದಗಿಸಸಲಾಗಿದೆ. ಉಳಿದ ಕಲಾವಿದರು ಸಹ ನಿರ್ದೇಶಕರ ಆಶಯಕ್ಕೆ ಅನುಗುಣವಾಗಿ ಪಾತ್ರವನ್ನು ನಿಭಾಯಿಸಿದ್ದಾರೆ.