ಚಿತ್ರದುರ್ಗ:
ಜನಸಾಮಾನ್ಯರಿಗೆ ಮೂಲಭೂತ ಸೌಲಭ್ಯಗಳು ದೊರೆತು ಸರ್ವಾಂಗೀಣ ಅಭಿವೃದ್ದಿಯಾಗಬೇಕಾದರೆ ಈ ಬಾರಿಯ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ.ಗೆ ಬಹುಮತ ನೀಡಿ ಎಂದು ಮೊಳಕಾಲ್ಮುರು ಶಾಸಕ ಬಿ.ಶ್ರೀರಾಮುಲು ಮತದಾರರಲ್ಲಿ ಮನವಿ ಮಾಡಿದರು.
ಇದೇ ತಿಂಗಳ 31 ರಂದು ನಡೆಯುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ.ಅಭ್ಯರ್ಥಿಗಳಾಗಿ ಸ್ಪರ್ಧಿಸಿರುವವ ಪರ ಭಾನುವಾರ ಚಳ್ಳಕೆರೆಯಲ್ಲಿ ಮತಯಾಚಿಸಿ ನಂತರ ಹೊಸದುರ್ಗದಲ್ಲಿ ಮತಯಾಚಿಸಲು ತೆರಳುತ್ತಿದ್ದ ಅವರು ಮಾರ್ಗ ಮಧ್ಯೆ ಚಿತ್ರದುರ್ಗದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು.
ಯು.ಪಿ.ಎ.ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಿಗೆ ಹದಿನಾಲ್ಕನೇ ಹಣಕಾಸು ಯೋಜನೆಯಡಿ 88.503 ಕೋಟಿ ರೂ.ಗಳನ್ನು ನೀಡಿತ್ತು. ದೇಶದ ಈಗಿನ ಪ್ರಧಾನಿ ನರೇಂದ್ರಮೋದಿರವರು ನಾಲ್ಕು ವರ್ಷಗಳ ಅಧಿಕಾರವಧಿಯಲ್ಲಿ ಎರಡು ಲಕ್ಷದ ಹತ್ತು ಸಾವಿರ ಕೋಟಿ ರೂ.ಗಳ ಅನುದಾನ ನೀಡಿದ್ದಾರೆ. ಚಿತ್ರದುರ್ಗ ನಗರಸಭೆಗೆ ನಾಲ್ಕು ಸಾವಿರದ 685.51 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿದೆ.
ಇದರಲ್ಲಿ ಸಾರ್ವಜನಿಕರಿಗೆ ಮೂಲಸೌಕರ್ಯಗಳಾದ ರಸ್ತೆ, ಚರಂಡಿ, ಬೀದಿ ದೀಪ, ಕುಡಿಯುವ ನೀರಿನ ವ್ಯವಸ್ಥೆಯಾಗಬೇಕು. ಸ್ವಚ್ಚ ಭಾರತ, ಉಜ್ವಲ ಯೋಜನೆ, ಭಾರತ ಆಯುಷ್ಮಾನ್‍ಭವ ದೇಶದ ಹತ್ತು ಕೋಟಿ ಬಡ ಕುಟುಂಬಗಳಿಗೆ ಐದು ಲಕ್ಷ ರೂ.ವೆರೆಗೆ ಉಚಿತ ಆರೋಗ್ಯವನ್ನು ನೀಡಿದೆ. ಇದರಿಂದ ಎಲ್ಲಾ ಕಡೆ ಬಿಜೆಪಿ.ಗೆ ಉತ್ತಮ ಸ್ಪಂದನೆ ಸಿಗುತ್ತಿರುವುದರಿಂದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಬಿಜೆಪಿ.ಅಧಿಕಾರ ಹಿಡಿಯಲಿದೆ ಎಂದು ಕರಾರುವಕ್ಕಾಗಿ ನುಡಿದರು.
ಸಿದ್ದರಾಮಯ್ಯ ನಾನೆ ಸಿ.ಎಂ.ಎಂದು ಹೇಳುತ್ತಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ಕೆ.ಪಿ.ಸಿ.ಸಿ.ಅಧ್ಯಕ್ಷ ದಿನೇಶ್‍ಗುಂಡೂರಾವ್, ವೀರಪ್ಪ ಮೊಯ್ಲಿ ಇವರುಗಳು ಕಾಂಗ್ರೆಸ್-ಜೆಡಿಎಸ್.ಸಮ್ಮಿಶ್ರ ಸರ್ಕಾರ ಇನ್ನು ಮೂರುವರೆ ವರ್ಷ ಅಧಿಕಾರದಲ್ಲಿರುತ್ತದೆ ಎಂದು ಹೇಳುತ್ತಿರುವುದನ್ನು ನೋಡಿದರೆ. ಕಾಂಗ್ರೆಸ್‍ನಲ್ಲಿ ಹೊಂದಾಣಿಕೆ ಇಲ್ಲ ಎಂಬುದು ಗೊತ್ತಾಗುತ್ತದೆ. ರಾಜ್ಯದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಗೆ ಹಾಸನ ಮಂಡ್ಯ ಜಿಲ್ಲೆಗಳಷ್ಟೆ ಅಭಿವೃದ್ದಿಯಾದರೆ ಸಾಕು. ಬೇರೆ ಚಿಂತೆ ಏಕೆ ಎನ್ನುವಂತಾಗಿದ್ದಾರೆ. ಸಮ್ಮಿಶ್ರ ಸರ್ಕಾರ ಬಿದ್ದು ಹೋಗುತ್ತೆ ಎಂದು ಜನ ಹೇಳುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಹೇಳುತ್ತಿದ್ದಾರೆ. ಭದ್ರಾಮೇಲ್ದಂಡೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಹಣ ಬಿಡುಗಡೆ ಮಾಡಿದ್ದು, ಬಿಜೆಪಿ.ಸರ್ಕಾರ. ಆದರೆ ಈಗಿನ ಸರ್ಕಾರ ನೀರಾವರಿ ಯೋಜನೆ ಬಗ್ಗೆ ಚಕಾರ ತ್ತುತ್ತಿಲ್ಲ.ಮಧ್ಯಕರ್ನಾಟಕದ ಬಯಲುಸೀಮೆ ಚಿತ್ರದುರ್ಗಕ್ಕೆ ನೀರು ಬರುವ ನಂಬಿಕೆಯಿಲ್ಲ. ಅದಕ್ಕಾಗಿ ಮುಂದಿನ ದಿನಗಳಲ್ಲಿ ಭದ್ರಾಮೇಲ್ದಂಡೆ ಯೋಜನೆ ಜಾರಿಗಾಗಿ ದೊಡ್ಡ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಉತ್ತರ ಕರ್ನಾಟಕ, ಮಧ್ಯಕರ್ನಾಟಕ, ಹೈದರಾಬಾದ್ ಕರ್ನಾಟಕ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಾರತಮ್ಯ ಮಾಡುತ್ತಿದ್ದಾರೆ. ರಾಜ್ಯ ವಿಭಜನೆಯಾಗುವುದು ನಮಗೆ ಬೇಡ. ನಮಗೆ ಬೇಕಿರುವುದು ಅಖಂಡ ಕರ್ನಾಟಕ ಎಂದು ವಿರೋಧಿಗಳ ಆಪಾದನೆಗೆ ತಿರುಗೇಟು ನೀಡಿದ ಬಿ.ಶ್ರೀರಾಮುಲು ಮಡಿಕೇರಿಯಲ್ಲಿ ನೆರೆಹಾವಳಿಯಿಂದ ಸಂತ್ರಸ್ಥರಾಗಿರುವವರಿಗೆ ಸಚಿವ ರೇವಣ್ಣ ಬಿಸ್ಕತ್‍ಗಳನ್ನು ಎಸೆದಿರುವುದನ್ನು ನೋಡಿದರೆ ಕರಳು ಕಿತ್ತುಬರುತ್ತದೆ. ದೇಶದ ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಸಚಿವ ರೇವಣ್ಣ ಇವರುಗಳು ನಾಗರೀಕತೆ ಸಂಸ್ಕಾರ ಉಳ್ಳವರು ಎಂದುಕೊಂಡಿದ್ದೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ.ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್, ಶಾಸಕ ಎಂ.ಚಂದ್ರಪ್ಪ, ವಿಭಾಗೀಯ ಸಹ ಪ್ರಭಾರಿ ಜಿ.ಎಂ.ಸುರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ್, ಮುರಳಿ, ಸ್ಲಂ ಮೋರ್ಚ ರಾಜ್ಯ ಉಪಾಧ್ಯಕ್ಷ ಸಿದ್ದೇಶ್‍ಯಾದವ್, ಮಹಿಳಾ ಮೋರ್ಚ ಘಟಕದ ಜಿಲ್ಲಾಧ್ಯಕ್ಷೆ ಶ್ಯಾಮಲಶಿವಪ್ರಕಾಶ್, ಯುವ ಮೋರ್ಚದ ಸಂದೀಪ್, ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ವಕ್ತಾರ ನಾಗರಾಜ್‍ಬೇದ್ರೆ, ಸುರೇಶ್‍ಸಿದ್ದಾಪುರ ಪತ್ರಿಕಾಗೋಷ್ಟಿಯಲ್ಲಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ