ಕೊರಟಗೆರೆ
ಕೊರಟಗೆರೆ ಕ್ಷೇತ್ರದ ಪ.ಪಂ. ಚುನಾವಣೆಯು ಎಂಎಲ್‍ಎ ಚುನಾವಣೆಗಿಂತ ಹೆಚ್ಚಿನ ಬಿರುಸು ಪಡೆದುಕೊಳ್ಳುವ ಮೂಲಕ ಪಕ್ಷದ ಟಿಕೆಟ್ ಕೈತಪ್ಪಿದ ಅಭ್ಯರ್ಥಿಗಳು ತಮ್ಮ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪಕ್ಷದ ಅಭ್ಯರ್ಥಿಗಳ ವಿರುದ್ಧವೇ ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿ ಪಕ್ಷಕ್ಕಿಂತ ವ್ಯಕ್ತಿಗೆ ಪಪಂ ಚುನಾವಣೆಯಲ್ಲಿ ಹೆಚ್ಚಿನ ಆದ್ಯತೆ ಎಂಬುದನ್ನು ತೋರಿಸುವ ಸಾಹಸಕ್ಕೆ ಮತ್ತೊಮ್ಮೆ ಮುಂದಾಗಿರುವುದು ವಿಶೇಷವಾಗಿದೆ.
ಪಟ್ಟಣದ ಪಪಂ ಚುನಾವಣೆಗೆ ಮೊದಲನೇ ಭಾಗವಾದ 1ರಿಂದ 8ನೇ ವಾರ್ಡಿಗೆ ಕಾಂಗ್ರೆಸ್‍ನ ಆಕಾಂಕ್ಷಿ ಅಭ್ಯರ್ಥಿಯಾಗಿ 14ಜನ, ಬಿಜೆಪಿಯ ಆಕಾಂಕ್ಷಿ ಅಭ್ಯರ್ಥಿಗಳಾಗಿ ಒಟ್ಟು 7ಜನ, ಜೆಡಿಎಸ್‍ನ ಆಕಾಂಕ್ಷಿ ಅಭ್ಯರ್ಥಿಗಳಾಗಿ 14ಜನ ಮತ್ತು ಪಕ್ಷೇತರವಾಗಿ 15ಜನ ಸೇರಿದಂತೆ ಒಟ್ಟು 50 ಜನ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಪಕ್ಷದಿಂದ 8ನೇ ವಾರ್ಡಿಗೆ ಯಾವ ಅಭ್ಯರ್ಥಿಗೂ ಬಿ.ಫಾರಂ ನೀಡಿದ ಕಾರಣ ಯಾರು ನಾಮಪತ್ರ ಸಲ್ಲಿಸಿಲ್ಲ.
ಪಟ್ಟಣದ ಎರಡನೇ ಭಾಗವಾದ 9 ರಿಂದ 15ನೇ ವಾರ್ಡಿಗೆ ಒಟ್ಟು 45ಜನ ನಾಮಪತ್ರ ಸಲ್ಲಿಸಿದ್ದಾರೆ. ಅದರಲ್ಲಿ ಕಾಂಗ್ರೆಸ್‍ನ ಆಕಾಂಕ್ಷಿ ಅಭ್ಯರ್ಥಿಗಳಾಗಿ 11ಜನ, ಬಿಜೆಪಿಯ ಆಕಾಂಕ್ಷಿ ಅಭ್ಯರ್ಥಿಗಳಾಗಿ 12ಜನ, ಜೆಡಿಎಸ್‍ನ ಆಕಾಂಕ್ಷಿ ಅಭ್ಯರ್ಥಿಗಳಾಗಿ 8ಜನ ಮತ್ತು ಪಕ್ಷೇತರವಾಗಿ 14ಜನ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಪಕ್ಷದಿಂದ 10ನೇ ವಾರ್ಡಿಗೆ ಯಾರಿಗೂ ಬಿ.ಫಾರಂ ನೀಡದ ಹಿನ್ನೆಲೆಯಲ್ಲಿ ಪಕ್ಷದ ವತಿಯಿಂದ ಯಾರು ಸಹ ನಾಮಪತ್ರ ಸಲ್ಲಿಸಲು ಮುಂದಾಗಿಲ್ಲ.
ಪ.ಪಂ.ಯ ಒಟ್ಟು 15 ವಾರ್ಡಿನ ಚುನಾವಣೆಗೆ ಒಟ್ಟು 95 ಜನ ನಾಮಪತ್ರ ಸಲ್ಲಿಸಿದ್ದಾರೆ. ಅದರಲ್ಲಿ ಕಾಂಗ್ರೆಸ್ ಪಕ್ಷದ ಆಕಾಂಕ್ಷಿ ಅಭ್ಯರ್ಥಿಗಳಾಗಿ 27ಜನ, ಜೆಡಿಎಸ್ ಪಕ್ಷದ ಆಕಾಂಕ್ಷಿಗಳಾಗಿ ಅಭ್ಯರ್ಥಿಗಳಾಗಿ 19ಜನ, ಬಿಜೆಪಿ ಪಕ್ಷದ ಆಕಾಂಕ್ಷಿ ಅಭ್ಯರ್ಥಿಯಾಗಿ 20ಜನ, ಪಕ್ಷೇತರರಾಗಿ 29ಜನ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್-15, ಜೆಡಿಎಸ್-15 ಮತ್ತು ಬಿಜೆಪಿ ಪಕ್ಷದ ವತಿಯಿಂದ ಕೇವಲ 13 ಜನಕ್ಕೆ ಮಾತ್ರ ಪಕ್ಷದ ವತಿಯಿಂದ ಬಿ.ಫಾರಂ ನೀಡಿದೆ. ಪಕ್ಷೇತರ ಅಭ್ಯರ್ಥಿಗಳಾಗಿ 31 ಜನ ನಾಮಪತ್ರ ಸಲ್ಲಿಸಿ ಕಣದಲ್ಲಿದ್ದಾರೆ.
ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೈತಪ್ಪಿದ ಆಕಾಂಕ್ಷಿ ಅಭ್ಯರ್ಥಿಗಳು ತಮ್ಮ ಪಕ್ಷದ ವಿರುದ್ಧವೇ ತಿರುಗಿ ಬೀಳುವ ಮೂಲಕ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಗಳಾಗಿ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ಕಳೆದ ಭಾರಿ ಪ.ಪಂ. ಚುನಾವಣೆಯಲ್ಲಿ ಗೆದ್ದ ಹತ್ತಾರು ಅಭ್ಯರ್ಥಿಗಳಿಗೆ ಈ ಭಾರಿ ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ಪಕ್ಷದ ಹಿರಿಯ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಪ್ರಚಾರದ ಕೆಲಸ ಬಿಸಿತುಪ್ಪವಾಗಿ ಪರಿಣಮಿಸಿದೆ.
ಬಂಡಾಯ ಎದ್ದಿರುವ ಪಕ್ಷೇತರ ಅಭ್ಯರ್ಥಿಗಳನ್ನು ಆಶ್ವಾಸನೆ ಮತ್ತು ಪಕ್ಷದ ಶಿಸ್ತಿನ ಪಾಠದ ಮೂಲಕ ಒಗ್ಗೂಡಿಸಿ ಚುನಾವಣೆ ರಣತಂತ್ರ ರೂಪಿಸಲು ನಾಯಕರಿಂದ ಈಗಾಗಲೇ ಸಾಕಷ್ಟು ಪ್ರಯತ್ನಗಳು ಎರಡು ಪಕ್ಷದಲ್ಲಿಯೂ ಸಹ ನಡೆಯುತ್ತಿರುವುದು ಕಂಡು ಬರುತ್ತಿದೆ. ಕೊರಟಗೆರೆ ಪಪಂ ಚುನಾವಣೆಯು ಪಕ್ಷಕ್ಕಿಂತ ವ್ಯಕ್ತಿಗೆ ಹೆಚ್ಚಿನಆದ್ಯತೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸುವುದೊ ಅಥವಾ ವ್ಯಕ್ತಿಗಿಂತ ಪಕ್ಷದ ಟಿಕೆಟ್ ಹೆಚ್ಚಿನ ಪ್ರಾಧಾನ್ಯತೆ ಪಡೆಯುವುದೊ ಎಂಬುದನ್ನು ಚುನಾವಣೆವರೆಗೆ ಕಾದು ನೋಡಬೇಕಾಗಿದೆ.








