ಬೆಂಗಳೂರು
ಕೆಲವೊಮ್ಮೆ ಯಾರ ಮಾತಿಗೆ ಬೇಕಾದರೂ ಬೆಲೆ ಸಿಕ್ಕಿಬಿಡಲಿದೆ ಎನ್ನುವುದಕ್ಕೆ ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಎಂ.ಬಿ.ಪಾಟೀಲ್ ಸಚಿವರಾಗಿದ್ದು ಉತ್ತಮ ಉದಾಹರಣೆ ಎನ್ನಲಾಗುತ್ತಿದೆ.
ದಿಲ್ಲಿಯಲ್ಲಿ ನಡೆದ ಒಂದು ಪ್ರಸಂಗ ಇದಕ್ಕೆ ನೀಡಬಹುದಾದ ಸೂಕ್ತ ಉದಾಹರಣೆ. ರಾಜ್ಯದಿಂದ ತೆರಳಿದ್ದ ಹಲವು ನಾಯಕರು ಸಂಭಾವ್ಯ ಸಚಿವರ ಹೆಸರಿನ ಪಟ್ಟಿ ಹಿಡಿದು ರಾಹುಲ್ ಗಾಂಧಿ ಮುಂದೆ ಚರ್ಚೆ ಆರಂಭಿಸಿದ್ದರು.
ಆ ಸಂದರ್ಭ ಒಂದು ಹಂತದಲ್ಲಿ ಇಬ್ಬರು ಲಿಂಗಾಯಿತ ನಾಯಕರಾದ ಎಂ.ಬಿ.ಪಾಟೀಲ್ ಹಾಗೂ ಬಿ.ಸಿ.ಪಾಟೀಲ್ ಹೆಸರಿನಲ್ಲಿ ಒಂದು ಆಯ್ಕೆ ಸಾಕಷ್ಟು ಚರ್ಚೆಗೆ ಈಡಾಯಿತು. ತೆರಳಿದ್ದ ನಾಯಕರಲ್ಲಿ ಬಹುತೇಕ ಮಂದಿ ಬಿ.ಸಿ.ಪಾಟೀಲ್ ಪರ ಬ್ಯಾಟಿಂಗ್ ಮಾಡಿದ್ದರು. ಆದರೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತ್ರ ಎಂ.ಬಿ.ಪಾಟೀಲ್ ಪರ ನಿಂತರು. ಕೊನೆಗೆ ಏಕಾಂಗಿಯಾಗಿ ವಾದ ಮಾಡಿ, ರಾಹುಲ್ ಗಾಂಧಿಯನ್ನು ಒಪ್ಪಿಸಿದರು ಕೂಡ.
ಮಾಜಿ ಸಿಎಂ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಡಿಸಿಎಂ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ನಾಯಕರು ಬಿ.ಸಿ.ಪಾಟೀಲ್ ಪರ ಮಾತನಾಡಿದರೆ, ಖಂಡ್ರೆ ಮಾತ್ರ ಎಂ.ಬಿ.ಪಾಟೀಲ್ ಪರ ನಿಂತರು. ಕೊನೆಗೂ ಇವರ ಮಾತಿಗೆ ಬೆಲೆ ಸಿಕ್ಕಿತು. ಇದು ಕೇವಲ ಖಂಡ್ರೆ ಗೆಲುವು ಮಾತ್ರವಲ್ಲ, ಹಿಂದೆ ನಿಂತು ಬೆಂಬಲಿಸಿದ ಲೋಕಸಭೆ ಕಾಂಗ್ರೆಸ್ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಭಾವ ಕೂಡ ಇತ್ತು ಎನ್ನುವುದು ವಿಶೇಷ.
ಲಿಂಗಾಯತ ಕೋಟಾದಲ್ಲಿ ಸಚಿವ ಸ್ಥಾನಕ್ಕಾಗಿ ರೇಸ್‍ನಲ್ಲಿದ್ದವರು ಬಿ.ಸಿ ಪಾಟೀಲ್ ಮತ್ತು ಎಂ.ಬಿ ಪಾಟೀಲ್ ಹೆಸರು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಬಿಟ್ಟರೆ, ಖಂಡ್ರೆ ಮಾತ್ರ ರಾಹುಲ್ ಎದುರು ಎಂ.ಬಿ ಪಾಟೀಲ್ ಪರ ಬ್ಯಾಟಿಂಗ್ ಮಾಡಲು ನಿಂತರು. ಉಳಿದವರು ನಿರಾಸಕ್ತಿ ತೋರಿಸಿದ್ರು. ಉಳಿದ ಎಲ್ಲರಿಂದಲೂ ಬಿ.ಸಿ ಪಾಟೀಲ್ ಹೆಸರೇ ಪ್ರಸ್ತಾಪವಾಗಿತ್ತು.
ಲಿಂಗಾಯತ ಕೋಟಾದಡಿ ಸಚಿವರ ಆಯ್ಕೆಗೆ ವೀರಶೈವ ಮುಖಂಡನ ಅಭಿಪ್ರಾಯ ಕೇಳಿದ ರಾಹುಲ್‍ಗೆ ಈಶ್ವರ್ ಖಂಡ್ರೆ ಅವರು ಎಂ.ಬಿ. ಪಾಟೀಲರೇ ಸೂಕ್ತ ಎನ್ನುವ ಉತ್ತರ ಕೊಟ್ಟರು. ಐದು ನಿಮಿಷ ತಮ್ಮ ವಿವರ ಸಲ್ಲಿಸಿದರು. ಅಲ್ಲಿಗೆ ಎಂ.ಬಿ. ಪಾಟೀಲ್ ಸಚಿವರಾಗುವುದು ಪಕ್ಕಾ ಆಯಿತು. ಲಿಂಗಾಯಿತ ಪ್ರತ್ಯೇಕ ಧರ್ಮದ ವಿಚಾರ ಬಂದಾಗ ಇಬ್ಬರೂ ನಾಯಕರು ಪ್ರತ್ಯೇಕ ಬಣದಲ್ಲಿ ಗುರುತಿಸಿಕೊಂಡಿದ್ದರು. ಆದರೆ ಈ ಸಾರಿ ಖಂಡ್ರೆ ನಡೆ ಅಚ್ಚರಿ ಮೂಡಿಸಿದೆ. ಅಲ್ಲದೇ ಧರ್ಮರಾಜಕಾರಣ ಬೆರಸದೇ ಲಿಂಗಾಯತ ಲೀಡರ್ ಪರ ನಿಂತ ವೀರಶೈವ ಲೀಡರ್ ಕಾರ್ಯವೈಖರಿ ಬಹಳ ಕುತೂಹಲ ಕೂಡ ತರಿಸಿದೆ.
ಬಿ.ಸಿ ಪಾಟೀಲ್ ಮತ್ತು ಎಂ.ಬಿ ಪಾಟೀಲ್ ಈ ಇಬ್ಬರಲ್ಲಿ ಪಕ್ಷದ ಹಿತದೃಷ್ಟಿಯಿಂದ ಉತ್ತಮರು ಯಾರು ಎಂಬ ಪ್ರಶ್ನೆಗೆ, ಲೋಕಸಭೆ ಚುನಾವಣೆ ಎದುರಿಗಿರುವಾಗ ಪಕ್ಷದ ಒಳಿತು ನೋಡೊದಾದ್ರೆ ಎಂ.ಬಿ ಪಾಟೀಲ್ ಸೂಕ್ತ ಎಂದು ಈಶ್ವರ್ ಹೇಳಿದ್ರು. ವಿಚಾರಗಳಲ್ಲಿ ನಮ್ಮಲ್ಲಿ ಭಿನ್ನಾಭಿಪ್ರಾಯ ಇರಬಹುದು. ಆದರೆ ಪಕ್ಷದ ಪ್ರಗತಿ, ಹಿತದೃಷ್ಟಿಯಿಂದ ಈ ಆಯ್ಕೆ ಸೂಕ್ತ ಎಂದರು. ಎಂ.ಬಿ ಪಾಟೀಲ್ ವಿರುದ್ಧ ದ್ವೇಷ ರಾಜಕಾರಣ ಮಾಡದ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆಯ ಅಭಿಪ್ರಾಯ ಕೇಳಿ ಎಂ.ಬಿ ಪಾಟೀಲ್ ಅವರ ಆಯ್ಕೆಗೆ ರಾಹುಲ್ ಗಾಂಧಿ ಒಪ್ಪಿಗೆ ಸೂಚಿಸಿದರು ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ