ಮೈಸೂರು
ಹೊರ ರಾಜ್ಯದವರ ಕನ್ನಡ ಭಾಷಾ ಕಲಿಕೆಗಾಗಿ ಕನ್ನಡ ಕಲಿಕಾ ಕೇಂದ್ರ ಸ್ಥಾಪನೆ ಮಾಡುವ ಸಂಬಂಧ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಶೀಘ್ರ ಕ್ರಮಕೈಗೊಳ್ಳಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಹೇಳಿದ್ದಾರೆ.
ಕರ್ನಾಟಕ ಸುವರ್ಣ ಮಹೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ ತಿ ಇಲಾಖೆ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಮೈಸೂರಿನ ಕಿರುಕಲಾ ರಂಗ ಮಂದಿರದಲ್ಲಿ ಸೋಮವಾರ ಕರೆದಿದ್ದ ಸಾಹಿತಿ, ರಂಗಕರ್ಮಿ ಹಾಗೂ ಕಲಾವಿದರೊಂದಿಗೆ ಸಭೆ ನಡೆಸಿದ ಬಳಿಕ ಸಚಿವರು ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದರು. ಹೊರ ರಾಜ್ಯದಿಂದ ಬಂದು ಕರ್ನಾಟಕದಲ್ಲಿ ನೆಲೆಸುವ ಹೊರ ರಾಜ್ಯದವರಿಗೆ ಕನ್ನಡ ಭಾಷೆ ಕಲಿಸಬೇಕು ಎಂಬ ಬಗ್ಗೆ ಅಧಿಕಾರಿಗಳ ಜತೆ ಒಂದೆರೆಡು ಸುತ್ತಿನ ಸಭೆ ನಡೆಸಲಾಗಿದೆ. ಕನ್ನಡ ಕಲಿಕೆಗೆ ತಂತ್ರಾಂಶ ಪರಿಚಯಿಸುವ ಸಂಬಂಧ ಕೂಡ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ತಿಳಿಸಿದರು.
ನ.1ಕ್ಕೆ ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ?ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ? ಎಂಬ ಘೋಷವಾಕ್ಯದಡಿ ಕಾರ್ಯಕ್ರಮ ನಡೆಸುವ ಬಗ್ಗೆ ಆಯವ್ಯಯದಲ್ಲಿ ಈಗಾಗಲೇ ಘೋಷಣೆ ಮಾಡಲಾಗಿದೆ. ರಾಜ್ಯದ ನಾಲ್ಕು ಕಂದಾಯ ವಿಭಾಗವಾರು ಸಾಹಿತಿಗಳ ಸಭೆ ಆಯೋಜನೆ ಮಾಡಿ ಸಲಹೆ ಪಡೆದುಕೊಳ್ಳಲಾಗಿದೆ.
ಮೈಸೂರಿನಲ್ಲಿ ನಡೆದ ಸಭೆಯಲ್ಲಿ ಕರ್ನಾಟಕದ ಪರಂಪರೆ, ಕನ್ನಡದ ಇತಿಹಾಸ ಹಾಗೂ ಬಿಂಬಿಸುವ ಹಿನ್ನೆಲೆಯಲ್ಲಿ ಕನ್ನಡರಥ ರಾಜ್ಯವಿಡೀ ಸಂಚಾರ ಮಾಡುವುದು, 31 ಜಿಲ್ಲೆಗಳಲ್ಲಿ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಪ್ರತಿಮೆ ನಿರ್ಮಾಣ, ಕುವೆಂಪು ಅವರ ಸಾಹಿತ್ಯವನ್ನು ಕೇಂದ್ರವಾಗಿಟ್ಟುಕೊAಡು ಕಾರ್ಯಕ್ರಮ ಆಯೋಜನೆ, ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಭಾಗಿಯಾಗಿದ್ದ ಗಣ್ಯರ ಸನ್ಮಾನ, ಗಡಿನಾಡಿನಲ್ಲಿ ಕನ್ನಡ ಬಿತ್ತುವುದು ಸೇರಿದಂತೆ ಹೀಗೆ ಹಲವು ಸಲಹೆಗಳು ಬಂದಿವೆ. ಈ ಸಲಹೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಳಿ ಚರ್ಚೆ ನಡೆಸಿ ಕಾರ್ಯಕ್ರಮದ ರೂಪುರೇಷೆಯನ್ನು ಅಂತಿಮಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರ ಅವಧಿಯಲ್ಲಿ ಕರ್ನಾಟಕ ಎಂದು ಹೆಸರು ನಾಮಕರಣ ಮಾಡಲಾಗಿತ್ತು. ಇದೀಗ ಮೈಸೂರು ಭಾಗದವರೇ ಆದ ಸಿದ್ದರಾಮಯ್ಯ ಅವರ ಅವಧಿಯಲ್ಲಿ 50ರ ಸಂಭ್ರಮದಲ್ಲಿರುವುದು ಹೆಮ್ಮೆಯ ಸಂಗತಿ. ವರ್ಷವಿಡೀ ಕಾರ್ಯಕ್ರಮವನ್ನು ಅರ್ಥ ಪೂರ್ಣವಾಗಿ ಆಚರಣೆ ಮಾಡಲಾಗುವುದು ಎಂದರು.
ಅಕಾಡೆಮಿ ಹಾಗೂ ಪ್ರಾಧಿಕಾರಗಳಿಗೆ ಶೀಘ್ರವೇ ಅಧ್ಯಕ್ಷರ ನೇಮಕ ಮಾಡಲಾಗುವುದು. ಈ ಸಂಬAಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಕನ್ನಡ ಇಲಾಖೆಗೆ ಪ್ರಸಕ್ತ ಸಾಲಿನಲ್ಲಿ ಮುಖ್ಯಮಂತ್ರಿಗಳು 247 ಕೋಟಿ ರೂ. ಅನುದಾನ ನೀಡಿದ್ದಾರೆ. ಅಗತ್ಯ ಬಿದ್ದರೆ ಹೆಚ್ಚುವರಿ ಅನುದಾನಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಇದೇ ವೇಳೆ ತಿಳಿಸಿದರು. ಸಭೆಯಲ್ಲಿ ಸಾಹಿತಿಗಳಾದ ಸಿ.ಪಿ.ಕೃಷ್ಣಕುಮಾರ್, ಹಿ.ಶಿ.ರಾಮಚಂದ್ರೇಗೌಡ, ಪ್ರಸನ್ನ, ಚನ್ನಿ ಜನಾರ್ಧನ್, ಮಂಡ್ಯ ರಮೇಶ್, ಪ್ರೊ. ಕೆ.ಎಸ್.ಭಗವಾನ್, ಬಿ.ಎಂ.ರಾಮಚಂದ್ರ, ಲತಾ ರಾಜಶೇಖರ್, ತುಳಸಿ ರಾಮಚಂದ್ರ, ಕಾಳೇಗೌಡ ನಾಗವಾರ, ಕನ್ನಡ ಇಲಾಖೆ ನಿರ್ದೇಶಕ ವಿಶ್ವನಾಥ್ ಹಿರೇಮಠ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್, ಅಧಿಕಾರಿಗಳಾದ ಮಧುಸೂದನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ