ಹರಪನಹಳ್ಳಿ:
ಸರ್ಕಾರದಿಂದ ಆಚರಿಸಲ್ಪಡುವ ಮಹನೀಯರ ಜಯಂತಿಗಳು ಕಾಟಾಚಾರಕ್ಕೆ ಸೀಮಿತವಾಗುತ್ತಿವೆ. ಆ ಸಮಾಜದ ಮುಖಂಡರು ಜನರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿ ಆಚರಣೆಗಳಿಗೆ ಗೌರವ ಸಲ್ಲಿಸಬೇಕು ಎಂದು ಶಾಸಕ ಜಿ.ಕರುಣಾಕರರೆಡ್ಡಿ ಹೇಳಿದರು.
ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಹರ್ಷಿ ವಾಲ್ಮೀಕಿಯವರ ಕಾವ್ಯಗಳಲ್ಲಿ ಪಿತೃವಾಕ್ಯ ಪರಿಪಾಲನೆ, ಸಹೋದರತ್ವ, ಸ್ತ್ರೀಯರಿಗೆ ಗೌರವ, ದುಷ್ಟ ಸಂಹಾರ, ಭಕ್ತಿ, ಏಕಪತ್ನಿತ್ವ, ಪರಿಸರ ಸಂರಕ್ಷಣೆಯಂತಹ ಅನೇಕ ನೀತಿಗಳನ್ನೊಳಗೊಂಡಿರುವ ರಾಮಾಯಣ ಜಗತ್ತಿಗೆ ಸಂದೇಶ ನೀಡಿ ದೇಶದ ಮೌಲ್ಯ ಹೆಚ್ಚಿಸಿದೆ. ನೀತಿಗಳನ್ನು ಅನುಸರಿಸಿ ಜಯಂತಿಯ ಮಹತ್ವವನ್ನು ಅರಿಯಿರಿ ಎಂದರು.
ಪುರಸಭೆ ಅಧ್ಯಕ್ಷ ಹೆಚ್.ಕೆ.ಹಾಲೇಶ್ ಮಾತನಾಡಿ. ಎಸ್‍ಟಿ ಜನಾಂಗದ ಜಾತಿ ಪ್ರಮಾಣಪತ್ರದ ದುರ್ಭಳಕೆ ಹೆಚ್ಚಾಗಿದ್ದು, ಅಧಿಕಾರಿಗಳು ಪ್ರಮಾಣ ಪತ್ರ ನೀಡುವ ಮುನ್ನ ಪರಿಶೀಲಿಸಿ ಮತ್ತೊಮ್ಮೆ ಇಂತಹ ಅನಾಹುತಗಳು ಜರುಗದಂತೆ ಕ್ರಮ ವಹಿಸಬೇಕು ಎಂದರು. ಎಸ್‍ಟಿ ಸಮುದಾಯ ಭವನಕ್ಕಾಗಿ ಶಾಸಕ ಕರುಣಾಕರರೆಡ್ಡಿಯವರು 1 ಕೋಟಿ ಹಣ ಹಾಗೂ ನಿವೇಶನ ನೀಡಿದ್ದರು. ಸಮಾಜದ ಸದುಪಯೋಗಕ್ಕಾಗಿ 1 ಎಕರೆ ಭೂಮಿಗೆ ಬೇಡಿಕೆಯಿದ್ದರೂ ಇಲ್ಲಿಯವರೆಗೆ ನೆನೆಗುದಿಗೆ ಬಿದ್ದಿದೆ. ಶಾಸಕರು 1 ಎಕರೆ ಸ್ಥಳವಕಾಶ ಮಂಜೂರು ಮಾಡಿಕೊಡಬೇಕೆಂದು ಮನವಿ ಮಾಡಿದರು.
ತಹಸಿಲ್ದಾರ್ ಎನ್.ಎನ್.ಮಧು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಸದಸ್ಯೆ ಸುವರ್ಣ ಆರುಂಡಿ, ತಾಲೂಕು ಪಂಚಾಯ್ತಿ ಅಧ್ಯಕ್ಷೆ ಅನ್ನಪೂರ್ಣಮ್ಮ, ಸಮಾಜದ ಅಧ್ಯಕ್ಷ ನಿಚ್ಚವ್ವನಹಳ್ಳಿ ಪರಶುರಾಮ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜಿಪಂ ಸದಸ್ಯರಾದ ಡಿ.ಸಿದ್ದಪ್ಪ, ಹೆಚ್.ಪಿ.ಪರಶುರಾಮ್, ಡ. ಮಂಜುನಾಥ್ ಉತ್ತಂಗಿ, ತಪಂ ಸದಸ್ಯರಾದ ಹೆಚ್.ಚಂದ್ರಪ್ಪ, ಓ.ರಾಮಪ್ಪ, ನಾಗರಾಜ್, ಪುರಸಭೆ ಉಪಾಧ್ಯಕ್ಷ ಕೆ.ಸತ್ಯನಾರಾಯಣ, ಮುಖಂಡರಾದ ನಿಚ್ಚವ್ವನಹಳ್ಳಿ ಭೀಮಪ್ಪ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಆನಂದ್ ವೈ.ಡೊಳ್ಳಿನ, ಇಓ ತಿಪ್ಪೇಸ್ವಾಮಿ, ಸಿಪಿಐ ದುರುಗಪ್ಪ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ