ಚಳ್ಳಕೆರೆ
ರಾಜ್ಯದ ಪ್ರಸಿದ್ದ ಜಾತ್ರೆಗಳಲ್ಲಿ ತಾಲ್ಲೂಕಿನ ಗೌರಸಮುದ್ರ ಗ್ರಾಮದ ಶ್ರೀಮಾರಮ್ಮ ದೇವಿ ಜಾತ್ರೆಯೂ ಸಹ ಒಂದಾಗಿದೆ. ಪ್ರತಿವರ್ಷವೂ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಜಾತ್ರೆಗೆ ಆಗಮಿಸಿ ದೇವಿಯ ದರ್ಶನ ಮಾಡುವರು. ಕಳೆದ ನೂರಾರು ವರ್ಷಗಳಿಂದ ಜಾನಪದ ಸಂಸ್ಕøತಿಯ ಹಾದಿಯಲ್ಲಿಯೇ ಈ ಜಾತ್ರೆ ಸಹ ನಡೆಯಲಿದ್ದು, ಇಂತಹ ಆಧುನಿಕ ಕಾಲದಲ್ಲೂ ಸಹ ಸಾವಿರಾರು ಭಕ್ತರು ಎತ್ತಿನ ಗಾಡಿಗಳಲ್ಲಿ ಆಗಮಿಸಿ ದೇವಿಯ ದರ್ಶನ ಪಡೆಯುವುದು ವಿಶೇಷ. ಪ್ರತಿವರ್ಷವೂ ಸಹ ಈ ಜಾತ್ರೆಗೆ ಆಗಮಿಸುವ ಭಕ್ತರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದ್ದು, ಜಾತ್ರೆಗೆ ಆಗಮಿಸುವ ಭಕ್ತರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸುವಲ್ಲಿ ಜಿಲ್ಲಾ ಆಡಳಿತ ಮುಂದಾಗಿದೆ.
ಪ್ರತಿಜಾತ್ರೆಯಲ್ಲೂ ಸಹ ಭಕ್ತರಿಗೆ ಸಂಚಾರಿ ವ್ಯವಸ್ಥೆ, ದೇವಿಯ ದರ್ಶನ ವ್ಯವಸ್ಥೆ, ಕಳ್ಳಕಾಕರಿಂದ ರಕ್ಷಣೆ, ಉತ್ತಮ ಭದ್ರತೆ, ಯಾವುದೇ ರೀತಿಯ ಅಡಚಣೆ ಇಲ್ಲದೆ ದೇವಿಯ ದರ್ಶನದ ಜೊತೆಗೆ ತುಮಲಕ್ಕೆ ಭೇಟಿ ನೀಡುವುದು ಸಹ ವಾಡಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಈ ವರ್ಷ ಪೊಲೀಸ್ ಇಲಾಖೆ ಭಕ್ತರಿಗೆ ನಿರೀಕ್ಷೆಗೂ ಮೀರಿ ಹೆಚ್ಚಿನ ಸೌಕರ್ಯಗಳನ್ನು ಕಲ್ಪಿಸಿದೆ. ಜಾತ್ರೆ ಸೆ.10 ರಿಂದ 12 ವರೆಗೂ ನಡೆಯಲಿದ್ದು, 11ರ ಮಂಗಳವಾರ ವಿಶೇಷವಾದ ದೇವಿಯ ಭವ್ಯವಾದ ಮೆರವಣಿಗೆ ನಡೆಯಲಿದ್ದು, ಪದ್ದತಿಯಂತೆ ಗ್ರಾಮದ ದೇವಸ್ಥಾನದಿಂದ ಬರುವ ದೇವಿ ಊರ ಹೊರಗಿನ ತುಮಲದಲ್ಲಿ ಪ್ರತಿಷ್ಠಾಪನೆಯಾಗಲಿದ್ದು, ಅಲ್ಲಿ ಪೂಜಾರರು ಕಂಬ ಹತ್ತಿ ದೀಪ ಹಚ್ಚುವ ಮೂಲಕ ಜಾತ್ರೆಗೆ ಪ್ರಾರಂಭವಾಗಲಿದೆ. ಈ ಬಾರಿ ವಿಶೇಷವಾಗಿ ಜಾತ್ರೆಗೆ ಬರುವ ಭಕ್ತರು ತಮ್ಮ ಜಾನುವಾರಗಳನ್ನು ಸಹ ದೇವಿಯ ದರ್ಶನಕ್ಕೆ ಕರೆತರುವ ಪದ್ದತಿಇದ್ದು, ಅವುಗಳಿಗಾಗಿ ಪತ್ಯೇಕ ಬ್ಯಾರಿಕೇಟ್ ನಿರ್ಮಿಸಿ ಯಾವುದೇ ತೊಂದರೆಯಾಗದಂತೆ ಜಾಗೃತೆ ವಹಿಸಿದೆ.
ಈ ಬಗ್ಗೆ ಪತ್ರಿಕೆಗೆ ಮಾಹಿತಿ ನೀಡಿದ ಉಪವಿಭಾಗದ ಡಿವೈಎಸ್ಪಿ ಎಸ್.ರೋಷನ್ ಜಮೀರ್, ಜಿಲ್ಲಾ ರಕ್ಷಣಾಧಿಕಾರಿ ಶ್ರೀನಾಥ ಎಂ.ಜೋಶಿ, ಹೆಚ್ಚುವರಿ ರಕ್ಷಣಾಧಿಕಾರಿ ರಾಮಲಕ್ಷ್ಮಣ್ ವರಸಿದ್ದಿ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಎನ್.ತಿಮ್ಮಣ್ಣ, ತಳಕು ಠಾಣೆ ಪಿಎಸ್‍ಐ ಶಿವಕುಮಾರ್ ಮತ್ತು ಸಿಬ್ಬಂದಿ ವರ್ಗ ಕಳೆದ ಒಂದು ವಾರದಿಂದ ಜಾತ್ರೆಗೆ ಬರುವ ಭಕ್ತಾಧಿಗಳ ಸಹಾಯಕ್ಕಾಗಿ ಅನೇಕ ಮಾದರಿ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ವಿಶೇಷವಾಗಿ ಈ ಬಾರಿ ಗ್ರಾಮದ ಶ್ರೀಮಾರಮ್ಮ ದೇವಸ್ಥಾನ, ತುಮಲು ಪ್ರದೇಶದಲ್ಲಿ ಹಾಗೂ ಸುತ್ತಮುತ್ತ ಪೊಲೀಸ್ ಇಲಾಖೆ ಸಿಸಿ ಕ್ಯಾಮರವನ್ನು ಅಳವಡಿಸಿದೆ. ಇದು ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಅಳಡಿಸಲಾಗಿದೆ. ವಾಹನ ಸಂಚಾರಕ್ಕೆ ಯಾವುದೇ ಅಡ್ಡಿ ಉಂಟಾಗದಂತೆ ರಸ್ತೆಗಳ ಎರಡೂ ಬದಿಯನ್ನು ವಿಸ್ತರಣೆ ಮಾಡಲಾಗಿದೆ. ದೇವಸ್ಥಾನಕ್ಕೆ ಬರುವ ವಾಹನಗಳನ್ನು ಸ್ವಲ್ಪ ದೂರದಲ್ಲೇ ತಡೆದು ನೇರವಾಗಿ ತುಮುಲು ಪ್ರದೇಶಕ್ಕೆ ವಿಶೇಷವಾಗಿ ರಸ್ತೆ ವ್ಯವಸ್ಥೆ ಮಾಡಲಾಗಿದೆ, ಬಸ್ ನಿಲ್ದಾಣವನ್ನು ಪ್ರತ್ಯೇಕವಾಗಿ ನಿರ್ಮಿಸಲಾಗಿದೆ, ಎಲ್ಲೆಡೆ ವಿವಿಧ ಕಾರ್ಯಕ್ರಮಗಳ ಮಾಹಿತಿ ಪಡೆಯಲು ಪೊಲೀಸ್ ಇಲಾಕೆ ಪತ್ಯೇಕ ನಾಮಪಲಕ ಅಳವಡಿಸಿದೆ, ವಿಶೇಷವಾಗಿ ಐದು ಕಡೆ ಸಹಾಯ ವಾಣಿ ಕೇಂದ್ರವನ್ನು ಸ್ಥಾಪಿಸಿದ್ದು, ನಾಲ್ಕು ಕಡೆ ಚೆಕ್‍ಪೋಸ್ಟ್‍ಗಳನ್ನು ನಿರ್ಮಿಸಲಾಗಿದೆ. ತುಮಲ ಪ್ರದೇಶದ ಒಳ ಆವರಣದಲ್ಲೇ ವಾಚ್‍ಟವರ್ ನಿರ್ಮಿಸಿ ಜಾತ್ರೆ ನಡೆಯುವ ಬಗ್ಗೆ ನಿಗಾವಹಿಸಲಾಗುವುದು.
ವಿಶೇಷವಾಗಿ ಸರಗಳ್ಳತನ, ಇತರೆ ಸಣ್ಣ ಪುಟ್ಟ ಕಳ್ಳತನ ನಿಯಂತ್ರಿಸಲು ಸುತ್ತಮುತ್ತಲ ಜಿಲ್ಲೆಗಳ ಹಾಗೂ ಆಂದ್ರ ಪ್ರದೇಶದಿಂದಲೂ ಸಹ ನುರಿತ ಪೊಲೀಸ್ ತಂಡವನ್ನು ನಿಯೋಜಿಸಲಾಗಿದೆ.
ಬಂದೋಬಸ್ತ್ :- ಈ ಬಾರಿಯ ಜಾತ್ರೆಯ ಬಂದೋಬಸ್ತ್‍ನ್ನು ವಿಶೇಷವಾಗಿ ನಿಯೋನಿಸಿದ್ದು, 5 ಡಿವೈಎಸ್ಪಿ, 10 ವೃತ್ತ ನಿರೀಕ್ಷಕರು, 30 ಪಿಎಸ್‍ಐ, 63 ಎಎಸ್‍ಐ, 500 ಪೊಲೀಸ್ ಪೇದೆ, 50 ಮಹಿಳಾ ಪೊಲೀಸ್ ಪೇದೆ, 200 ಗೃಹ ರಕ್ಷಕ ದಳ ಸಿಬ್ಬಂದಿ, 7 ಡಿಆರ್ ವ್ಯಾನ್, 1 ಕೆಎಸ್‍ಆರ್‍ಪಿ ತುಕಡಿಯನ್ನು ಜಾತ್ರೆಗೆ ನಿಯೋಜಿಸಲಾಗಿದೆ.
ಪ್ರಾಣಿ ಬಲಿ ನಿಷೇದ :- ಈ ಬಾರಿಯೂ ಸಹ ಭಕ್ತಾಧಿಗಳು ಮೂಡನಂಬಿಕೆಯ ಆಧಾರದಲ್ಲಿ ಪ್ರಾಣಿ ಬಲಿ ಕೊಡುವುದು, ಬೇವಿನ ಸೀರೆ ಉಡುವುದನ್ನು ನಿಷೇದಿಸಿದೆ. ಭಕ್ತಾಧಿಗಳು ಪೊಲೀಸ್ ಇಲಾಖೆಯ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಲಾಗಿದೆ. ಜಾತ್ರೆಯಲ್ಲಿ ಅನಗತ್ಯವಾಗಿ ಕಿರಿಕಿರಿ ಉಂಟು ಮಾಡುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಲು ವಿಶೇಷ ತಂಡ ರಚಿಸಲಾಗಿದೆ.
ಇದೇ ಸಂದರ್ಭದಲ್ಲಿ ತಾಲ್ಲೂಕು ಆಡಳಿತ ಜಿಲ್ಲಾಧಿಕಾರಿಗಳ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮಾರ್ಗದರ್ಶನದಂತೆ ದೇವಸ್ಥಾನ ಮುಂದೆ ಪ್ರತ್ಯೇಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸಿದೆ, ಗ್ರಾಮದಲ್ಲಿ ಕುಡಿಯುವ ನೀರಿನ ತೊಂದರೆ ಉಂಟಾಗದಂತೆ ಹೆಚ್ಚುವರಿಯಾಗಿ ನಲ್ಲಿ ಅಳವಡಿಸಲಾಗಿದೆ, ಜಾತ್ರಾ ಪ್ರಯುಕ್ತ ವಿಶೇಷವಾದ ಬೆಳಕಿನ ವ್ಯವಸ್ಥೆ ಮಾಡಲಾಗಿದೆ, ರೋಗ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸನ್ನದ್ದವಾಗಿದ್ದು, ಗ್ರಾಮದಲ್ಲೇ ವಾಸ್ತವ್ಯ ಹೂಡಿದ್ದು, ತಪಾಸಣಾ ಕಾರ್ಯವನ್ನು ಮುಂದುವರೆಸಿದೆ.
ಗ್ರಾಮ ಪಂಚಾಯಿತಿ ಆಡಳಿತ ದೇವಸ್ಥಾನ ಸುತ್ತಮುತ್ತ ಇನ್ನಿತರೆ ಕಡೆಗಳಲ್ಲಿ ಸ್ವಚ್ಚಗೊಳಿಸಿ ಎಲ್ಲೆಡೆ ಡಿಡಿಟಿ ಫೌಡರನ್ನು ಸಿಂಪಡಿಸಿದೆ. ಗ್ರಾಮ ಪಂಚಾಯಿತಿ ಆಡಳಿತಕ್ಕೆ ದೇವಸ್ಥಾನದ ಆಡಳಿತ ಮಂಡಳಿ ಸಹಕಾರ ನೀಡಿದ್ದು, ಗ್ರಾಮದಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಜಾಗ್ರತೆ ವಹಿಸಲಾಗಿದೆ. ಪೊಲೀಸ್ ಇಲಾಖೆ ದೇವಸ್ಥಾನದ ರಸ್ತೆಯ ಎರಡೂ ಬದಿ ಎಲ್ಲೂ ಸಹ ಅಂಗಡಿಗಳು ತಲೆ ಎತ್ತದಂತೆ ಬ್ಯಾರಿಕೇಟ್ ನಿರ್ಮಿಸಿದ್ದು , ವ್ಯಾಪಾರ ವಹಿವಾಟ ನಡೆಸುವವರು ರಸ್ತೆಯಿಂದ ಕೆಲ ದೂರ ತನ್ನ ವ್ಯವಹಾರಗಳನ್ನು ನಡೆಸಬಹುದಾಗಿದೆ ಒಟ್ಟಿನಲ್ಲಿ ಜಾತ್ರೆಗೆ ಬರುವ ಎಲ್ಲಾ ಭಕ್ತಾಧಿಗಳು ಈ ಸೌಲಭ್ಯಗಳ ಸದುಪಯೋಗ ಪಡೆದು ಯಾವುದೇ ತೊಂದರೆಗೆ ಒಳಗಾಗದಂತೆ ದೇವಿ ದರ್ಶನ ಪಡೆದು ತುಮಲಕ್ಕೆ ಪ್ರದೇಶಕ್ಕೆ ಭೇಟಿ ನೀಡಿ ತಮ್ಮ ಕೋರಿಕೆಗಳನ್ನು ಈಡೇರಿಸಿಕೊಳ್ಳಬಹುದಾಗಿದೆ.