ಹಾವೇರಿ
ನಿಮ್ಮ ಅಧಿಕಾರ ಹಾಗೂ ವಿವೇಚನೆಯನ್ನು ಚಲಾಯಿಸಿ ತಮ್ಮ ಸಾಮಥ್ರ್ಯವನ್ನು ಒರೆಗಚ್ಚಿ ನಿರ್ಭಿತಿಯಿಂದ ಚುನಾವಣಾ ಅಕ್ರಮಗಳನ್ನು ತಡೆಯಿರಿ. ಸಂಶಯಾಸ್ಪದ ಚುಟವಟಿಕೆಗಳ ಬಗ್ಗೆ ಹದ್ದಿನಕಣ್ಣೀರಿಸಿ, ಯಾವುದೇ ಚುನಾವಣಾ ಅಕ್ರಮಗಳಿಗೆ ಅವಕಾಶಮಾಡಿಕೊಡಬೇಡಿ ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಕೇಂದ್ರ ವೆಚ್ಚ ವೀಕ್ಷಕರಾದ ಐ.ಆರ್.ಎಸ್. ಅಧಿಕಾರಿ ಹಸನ್ ಅಹ್ಮದ್ ಅವರು ಸೂಚಿಸಿದರು.
ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಾವೇರಿ ಹಾಗೂ ಗದಗ ಜಿಲ್ಲೆಯ ಎಂ.ಸಿ.ಸಿ, ಎಫ್.ಎಸ್.ಟಿ., ವಿ.ಎಸ್.ಟಿ., ಎಂ.ಸಿ.ಎಂ.ಸಿ, ಅಬಕಾರಿ ಹಾಗೂ ಪೊಲೀಸ್ ಹಾಗೂ ಸಹಾಯಕ ವೆಚ್ಚ ವೀಕ್ಷಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಚುನಾವಣೆಗೆ ಕೇವಲ ಹದಿಮೂರು ದಿನ ಬಾಕಿ ಉಳಿದಿದೆ. ಅತ್ಯಂತ ಮಹತ್ವದ ಸಮಯವಿದು. ಚುನಾವಣೆಗೆ ಸಂಬಂಧಿಸಿದಂತೆ ಅಕ್ರಮ ಚಟುವಟಿಕೆಗಳು ತೀವ್ರಗೊಳ್ಳುವ ಈ ಸಮಯದಲ್ಲಿ ಪ್ರತಿ ಚಲನವಲನಗಳನ್ನು ಅತ್ಯಂತ ಸೂಕ್ಷ್ಮವಾಗಿ ಅವಲೋಕಿಸಬೇಕು. ತಮ್ಮ ವಿವೇಚನೆ ಹಾಗೂ ಸಾಮಾನ್ಯ ಜ್ಞಾನಬಳಸಿ ಅಕ್ರಮಗಳನ್ನು ಪತ್ತೆಮಾಡಿ ದೂರು ದಾಖಲಿಸಿ ಎಂದು ಸೂಚಿಸಿದರು.
ಸಹಾಯಕ ವೆಚ್ಚ ವೀಕ್ಷಕರಾಗಿ ನಿಯೋಜನೆಗೊಂಡಿರುವ ಅಧಿಕಾರಿಗಳು ಕೇವಲ ಕಚೇರಿಯಲ್ಲಿ ಕುಳತುಕೊಳ್ಳಬಾರದು. ಕ್ಷೇತ್ರ ಭೇಟಿ ನೀಡಬೇಕು, ಚೆಕ್ ಪೋಸ್ಟ್ ಸೇರಿದಂತೆ ವಿವಿಧ ತಂಡಗಳ ಕಾರ್ಯ ನಿರ್ವಹಣೆ ಬಗ್ಗೆ ಖುದ್ದಾಗಿ ಪರಿಶೀಲಿಸಬೇಕು ಎಂದು ಸೂಚಿಸಿದರು.
ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳನ್ನು ತೀವ್ರವಾಗಿ ತಪಾಸಣೆಗೊಳಿಸಬೇಕು. ವಾಹನ ದಟ್ಟಣೆಯ ಸಂದರ್ಭದಲ್ಲಿ ತಪಾಸಣೆಯಿಂದ ತಪ್ಪಿಸಿಕೊಂಡು ವೇಗವಾಗಿ ಚಲಿಸುವ ವಾಹನಗಳನ್ನು ಮುಂದಿನ ಚೆಕ್ಪೋಸ್ಟ್ಗಳಲ್ಲಿ ತಪಾಸಣೆಗೆ ಒಳಪಡಿಸುವಂತೆ ಮಾಹಿತಿಯನ್ನು ತ್ವರಿತವಾಗಿ ರವಾನಿಸಬೇಕು.
ಚೆಕ್ ಪೋಸ್ಟ್ ಹಾದಿಗಳನ್ನು ತಪ್ಪಿಸಿ ಪರ್ಯಾಯಮಾರ್ಗವಾಗಿ ಚಲಿಸುವ ಸಂಶಯಾಸ್ಪದ ವಾಹನಗಳ ಚಟುವಟಿಕೆಗಳ ಮೇಲೆ ತೀವ್ರ ನಿಗಾವಹಿಸಬೇಕು. ಫ್ಲೈಯಿಂಗ್ ಸ್ವ್ಕಾಡ್ ತಂಡ ನಿರಂತರ ಚಲನೆಯ ಮೂಲಕ ಗಮನಹರಿಸಬೇಕು. ಸ್ಥಳೀಯ ಪೊಲೀಸ್ ಠಾಣೆಯ ನೆರವು ಪಡೆಯಬೇಕು. ಇಂತಹ ವಾಹನಗಳ ಮೇಲೆ ನಿಗಾವಹಿಸಲು ಠಾಣೆಗೆ ಮಾಹಿತಿಯನ್ನು ರವಾನಿಸಬೇಕು. ಚುನಾವಣಾ ಅಕ್ರಮಗಳ ತಡೆಯಲು ಮುಂದಾದಾಗ ಅಧಿಕಾರಿಗಳ ಮೇಲೆ ಸ್ಥಳೀಯ ವ್ಯಕ್ತಿಗಳಿಂದ ಹಲ್ಲೆಗಳು, ಜೀವ ಬೆದರಿಕೆ ಬಂದರೆ ತಕ್ಷಣವೇ ಪೊಲೀಸ್ಗೆ ಮಾಹಿತಿ ನೀಡಬೇಕು. ಇಂತಹ ವ್ಯಕ್ತಿಗಳ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ನಿಯಂತ್ರಣ ಕೊಠಡಿಗಳಲ್ಲಿ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯ ಕರೆಗಳನ್ನು ಸ್ವೀಕರಿಸಿದ ತಕ್ಷಣ ಸಂಬಂಧಿಸಿದ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ತಂಡಗಳಿಗೆ ಮಾಹಿತಿ ರವಾನಿಸಬೇಕು. ಕರೆ ಸ್ವೀಕರಿಸಿದ ತಕ್ಷಣ ಸ್ಥಳಕ್ಕೆ ದಾವಿಸುವಂತೆ ಫ್ಲೈಯಿಂಗ್ ಸ್ಕ್ವಾಡ್ ತಂಡ ಹಾಜರಾಗಬೇಕು ಎಂದು ಸೂಚಿಸಿದರು.
ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ಅಕ್ರಮ ಚಟುವಟಿಕೆಗಳು ಚುರುಕುಗೊಳ್ಳುತ್ತಿವೆ. ಹಣದ ವಹಿವಾಟು, ಮದ್ಯ, ಚುನಾವಣಾ ಉದ್ದೇಶದಿಂದ ಹಂಚಿಕೆ ಮಾಡುವ ವಸ್ತುಗಳ ಖರೀದಿ, ಸಾಗಾಣಿಕೆ, ಹಂಚಿಕೆಗಳ ಬಗ್ಗೆ ತಮ್ಮದೇ ಗೂಡಾಚಾರದಿಂದ ಮಾಹಿತಿ ಸಂಗ್ರಹಿಸಬೇಕು. ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿಕಟ ಸಂಪರ್ಕದೊಂದಿಗೆ ತಮ್ಮದೇ ಆದ ಸ್ಥಳೀಯ ಸಂಪರ್ಕದಿಂದ ಮಾಹಿತಿ ಕಲೆಹಾಕಬೇಕು.
ಸ್ಥಳೀಯ ಯುವಕರ ಸಹಕಾರದೊಂದಿಗೆ ಕ್ರಮಗಳ ಪತ್ತೆಮಾಡಿ ಕ್ರಮಕೈಗೊಳ್ಳಬೇಕು ಎಂದು ಸಲಹೆ ನೀಡಿದರು.ಸಭೆ-ಸಮಾರಂಭಗಳು, ವಿ.ಐ.ಪಿ.ಗಳು ಭಾಗವಹಿಸುವ ಕಾರ್ಯಕ್ರಮಗಳನ್ನು ವಿಡಿಯೋ ಚಿತ್ರೀಕರಣ ತಂಡ ವಿವರವಾಗಿ ಚಿತ್ರಿಕರಿಸಬೇಕು. ವಿಡಿಯೋ ವೀಕ್ಷಣೆ ತಂಡ ಅತ್ಯಂತ ಸೂಕ್ಷ್ಮವಾಗಿ ಜವಾಬ್ದಾರಯುತವಾಗಿ ಪರಿಶೀಲಿಸಿ ಆಯೋಗದ ನಿಯಮಾನುಸಾರ ವೆಚ್ಚವನ್ನು ದಾಖಲಿಸಬೇಕು. ಭಾಷಣಕಾರರ ಭಾಷಣದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಅಂಶಗಳಿದ್ದರೆ ದೂರು ದಾಖಲಿಸಬೇಕು ಎಂದು ಸಲಹೆ ನೀಡಿದರು.
ವ್ಯಕ್ತಿಯ ಸಂಶಯಾಸ್ಪದ ನಡಾವಳಿ, ಮುಖದ ಭಾವನೆಗಳಿಂದ ಅಕ್ರಮಗಳನ್ನು ಪತ್ತೆಮಾಡಬಹುದು. ಎಷ್ಟೋ ಸಂದರ್ಭದಲ್ಲಿ ದೇಹದೊಳಗೆ ಬಂಗಾರ, ಡ್ರಗ್ಸ್ನಂತಹ ವಸ್ತುಗಳನ್ನು ಸಾಗಾಣಿಕೆ ಮಾಡುವುದನ್ನು ಇಂತಹ ನಡಾವಳಿಗಳಿಂದ ಪತ್ತೆಮಾಡಿರುವುದು ತಮಗೆ ತಿಳಿದ ವಿಚಾರವಾಗಿದೆ. ತಮ್ಮ ವಿವೇಚನೆ ಸಾಮಾನ್ಯ ಜ್ಞಾನ , ಗೂಡಾಚಾರದ ಸ್ವ ಬುದ್ಧಿಮತ್ತೆಯಿಂದ ಅಕ್ರಮಗಳ ಪತ್ತೆಮಾಡಿ ಎಂದು ಸಲಹೆ ನೀಡಿದರು.
ಸಾರ್ವಜನಿಕರಿಗೆ ತೊಂದರೆಯಾಗದಂತೆ ರ್ಯಾಂಡಮ್ ಆಗಿ ಸಾರಿಗೆ ಬಸ್ಗಳ ತಪಾಸಣೆ, ದ್ವಿಚಕ್ರವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ನಡೆಸಿ. ಚುನಾವಣೆಯ ಸಂದರ್ಭದಲ್ಲಿ ಮುಗ್ದ ವ್ಯಕ್ತಿಗಳನ್ನು ಬಳಸಿಕೊಂಡು ಹಣ, ವಸ್ತುಗಳನ್ನು ಸಾಗಾಣಿಕೆಗೆ ಬಳಸಲಾಗುತ್ತದೆ. ಗೊಬ್ಬರ ಚೀಲ, ತರಕಾರಿ ಚೀಲದಲ್ಲಿ ಹಣ ಸಾಗಿಸಿ ಸಿಕ್ಕುಬಿದ್ದಿರುವ ಉದಾಹರಣೆಗಳಿವೆ. ಈ ಕಾರಣಕ್ಕಾಗಿ ತಂಹದರ ಬಗ್ಗೆ ಹೆಚ್ಚು ಗಮನ ಹರಿಸಿ ಎಂದು ಹೇಳಿದರು.
ಚುನಾವಣೆ ಹಿನ್ನೆಲೆಯಲ್ಲಿ ಬ್ಯಾಂಕ್ಕಿನಲ್ಲಿ ಅಸಹಜ ವಹಿವಾಟುಗಳ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಪರಿಶೀಲಿಸಬೇಕು. ನೈಜ ವಹಿವಾಟಿಗೂ ಚುನಾವಣೆ ಸಂದರ್ಭದ ವಹಿವಾಟಿಗೂ ತಾಳೆಮಾಡಬೇಕು. ವಹಿವಾಟುದಾರರ ರಾಜಕೀಯ ನಂಟಿನ ಬಗ್ಗೆ ಪರಿಶೀಲನೆ ನಡೆಸಬೇಕು. ಸಾರಿ ಅಂಗಡಿ, ಗೃಹೋಪಯೋಗಿ ವಸ್ತುಗಳ ಮಾರಾಟ ಅಂಗಡಿಗಳ ವಹಿವಾಟಿನ ಬಗ್ಗೆ ಪರಿಶೀಲನೆ ನಡೆಸಬೇಕು.
ಜಿ.ಎಸ್.ಟಿ. ಖರೀದಿ ಬಿಲ್ಲಗಳಿಗೆ ತಾಳೆ ಹಾಕಬೇಕು. ಲಿಕ್ಕರ್ ಹಾಗೂ ಪೆಟ್ರೋಲ್ ಖರೀದಿಗೆ ಕೈ ಚೀಟಿ ನೀಡುವ ಚಟುವಟಿಕೆಗಳ ಮೇಲೆ ನಿಗಾವಹಿಸಿ ಕಠಿಣ ಕ್ರಮವಹಿಸಬೇಕು ಹಾಗೂ ಚುನಾವಣಾ ಬಾಂಡ್ಗಳ ಮೇಲೆ ನಿಗಾವಹಿಸಬೇಕು ಎಂದು ಸೂಚಿಸಿದರು.
ಹಾವೇರಿ ಮತ್ತು ಗದಗ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ವಿವರ ನೀಡಿ ಹಾವೇರಿ ಜಿಲ್ಲೆಯಲ್ಲಿ 50 ಹಾಗೂ ಗದಗ ಜಿಲ್ಲೆಯಲ್ಲಿ 207 ಚುನಾವಣೆ ಘೋಷಣೆಯಾದನಂತರ ರೂ.10 ಲಕ್ಷಕ್ಕೂ ಬ್ಯಾಂಕ್ ವಹಿವಾಟು ನಡೆದಿರುವ ಪ್ರಕರಣಗಳನ್ನು ಪತ್ತೆಮಾಡಲಾಗಿದೆ. ಈ ವಹಿವಾಟುದಾರರ ನೈಜತೆ ಕುರತಂತೆ ಪರಿಶೀಲನೆ ನಡೆಯುತ್ತಿದೆ. ಈ ವಹಿವಾಟಿನಲ್ಲಿ ಚುನಾವಣೆ ಸಂಬಂಧಿಸಿದ ರಾಜಕೀಯ ನಂಟು ಇದೆಯಾ? ಎಂದು ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಹಾವೇರಿ ಲೋಕಸಭಾ ವ್ಯಾಪ್ತಿಯ ಹಿರೇಕೆರೂರಿನಲ್ಲಿ ಒಂಭತ್ತು ಲಕ್ಷ ರೂ., ಮೋಟೆಬೆನ್ನೂರುಲ್ಲಿ 80 ಸಾವಿರ, ಹಾವೇರಿಯಲ್ಲಿ 13 ಲಕ್ಷ ರೂ., ರಾಣೇಬೆನ್ನೂರ ಮಾಕನೂರ ಚೆಕ್ ಪೋಸ್ಟ್ನಲ್ಲಿ 2.60 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಒಂದು ರಿವಾಲ್ವರ್ ವಶಪಡಿಸಿಕೊಳ್ಳಲಾಗಿದೆ. ಒಂದು ವಾಹನ ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಇಲಾಖೆ ತಂಡದಿಂದ 13.92 ಲಕ್ಷ ರೂ. ಮೊತ್ತದ 2334.51 ಲೀಟರ್ ದೇಶಿ ಮದ್ಯ ವಶಪಡಿಸಿಕೊಂಡಿರುವುದಾಗಿ ಸಂಬಂಧಿಸಿದ ಅಧಿಕಾರಿಗಳು ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ, ಚುನಾವಣಾ ವೆಚ್ಚ ನಿರ್ವಹಣೆ ಹಾವೇರಿ ಜಿಲ್ಲಾ ನೋಡಲ್ ಅಧಿಕಾರಿ ಧರಣಿ, ಗದಗ ನೋಡಲ್ ಅಧಿಕಾರಿ ಪ್ರಕಾಶ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.