ಕೊಟ್ಟೂರು :
ಕಾಂಗ್ರೆಸ್‍ನಿಂದ ಮಾತ್ರ ಜನ ಸಾಮಾನ್ಯರ ಅಭಿವೃದ್ದಿ ಸಾಧ್ಯ ಎಂದು ಶಾಸಕ ಎಸ್.ಭೀಮನಾಯ್ಕ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿಗಳ ಪರ ಚುನಾವಣೆ ಪ್ರಚಾರ ನಡೆಸಿ ಮಾತನಾಡಿದ ಅವರು ರಾಜ್ಯದ ರೈತರ ಕಷ್ಟಕ್ಕೆ ಸ್ಪಂದಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರ ಸಾಲಮನ್ನಾ ಮಾಡಿದ್ದರು. ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ, ಶೂಭಾಗ್ಯದಂತಹ ನೂರಾರು ಜನಪರ ಯೋಜನೆಗಳನ್ನು ಜಾರಿಗೊಳಿಸಿದ ಕೀರ್ತಿ ಕಾಂಗ್ರೆಸ್‍ಗೆ ಸಲ್ಲುತ್ತದೆ ಎಂದರು.
ಪ್ರಸ್ತುತ ರಾಜ್ಯ ಸಮ್ಮಿಶ್ರ ಸರ್ಕಾರ ರೈತರ 34ಸಾವಿರ ಕೋಟಿ ರೂ ಸಾಲಮನ್ನಾ ಮಾಡಿದೆ. ಕೇರಳ ಹಾಗೂ ಕೊಡಗಿನಲ್ಲಿ ಅತಿವೃಷ್ಟಿಯಿಂದಾದ ತೊಂದರೆಗೆ ಕೇಂದ್ರ ಬಿಜೆಪಿ ಸರ್ಕಾರ ಸಮರ್ಪಕವಾಗಿ ಸ್ಪಂದಿಸಿಲ್ಲ. ಕೇರಳಕ್ಕೆ ಪರಿಹಾರ ಧನವಾಗಿ ಕೇವಲ 500 ಕೋಟಿ ನೀಡಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ ಎಂದು ಆರೋಪಿಸಿದರು.
ಪಟ್ಟಣದಲ್ಲಿ ಬಡವರಿಗೆ ಸೂರು ಕಲ್ಪಿಸಲು ಪ್ರಾಮಾಣಿಕವಾಗಿ ಶ್ರಮಿಸಲಾಗಿದೆ ಎಂದ ಶಾಸಕರು ಕಳೆದ 6 ತಿಂಗಳಲ್ಲಿ ಕೊಟ್ಟೂರು ಪಟ್ಟಣದ ಅರ್ಹ ಫಲಾನುಭವಿಗಳಿಗೆ 1200 ಮನೆ ನೀಡಲಾಗಿದೆ, ನಿರಂತರ 24 ಗಂಟೆ ನೀರು ಪೂರೈಕೆಗಾಗಿ 15 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಪಟ್ಟಣದ ಜನತೆ ಅಭಿವೃದ್ದಿ ಕಾರ್ಯಕ್ಕೆ ಕಾಂಗ್ರೆಸ್ ಬೆಂಬಲಿಸುವ ವಿಶ್ವಾಸವಿದ್ದು, ಎಲ್ಲಾ 20 ಸ್ಥಾನಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ ಎಂದರು.
ಪಟ್ಟಣಕ್ಕೆ 24 ಗಂಟೆ ನಿರಂತರ ನೀರು ಪೂರೈಕೆ ಸೇರಿದಂತೆ ಪ್ರತಿ ವಾರ್ಡ್‍ಗೂ ಸಿ.ಸಿ.ರಸ್ತೆ, ಚರಂಡಿ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದರು. ನೂತನ ತಾಲೂಕು ಕೇಂದ್ರವಾಗಿ ಘೋಷಣೆಯಾಗಿರುವ ಕೊಟ್ಟೂರು ಪಟ್ಟಣದಲ್ಲಿ ಮಿನಿವಿಧಾನಸೌಧ ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಜಿ.ಪಂ.ಸದಸ್ಯ ಎಂ.ಎಂ.ಜೆ ಹರ್ಷವರ್ಧನ ಅವರು ಮಾತನಾಡಿ ಶಾಸಕ ಎಸ್.ಭೀಮನಾಯ್ಕ ಅವರು ಉತ್ಸಾಹದಿಂದ ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದಾರೆ. ಅವರಿಗೆ ಮತ್ತಷ್ಟು ಶಕ್ತಿ ನೀಡಲು ಪಟ್ಟಣದ ಜನತೆ ಕಾಂಗ್ರೆಸ್ ಬೆಂಬಲಿಸುವಂತೆ ಕೋರಿದರು.
ಜಿ.ಪಂ.ಮಾಜಿ ಉಪಾಧ್ಯಕ್ಷ ದೊಡ್ಡರಾಮಣ್ಣ, ಕರಡಿಕೊಟ್ರಯ್ಯ, ಬಿ.ಎಸ್.ವಿರೇಶ್, ಹರಾಳು ನಂಜಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಂ.ಮಲ್ಲಿಕಾರ್ಜುನ್, ಗೂಳಿಮಲ್ಲಿಕಾರ್ಜುನ, ಮುಟಗನಹಳ್ಳಿ ಕೊಟ್ರೇಶ್,ಶ್ರೀನಿವಾಸ್, ಚಿರಿಬಿ ಜಗದೀಶ್, ಗುರುಶಾಂತಪ್ಪ, ಸಿ.ಎಂ.ವಿನಯ್, ಸೇರಿದಂತೆ ಇತರರಿದ್ದರು.
ಕೊಟ್ಟೂರಿನಲ್ಲಿ ಮಂಗಳವಾರ ಪಟ್ಟಣ ಪಂಚಾಯ್ತಿ ಕಾಂಗ್ರೇಸ್ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಕೈಗೊಂಡ ಶಾಸಕ ಎಸ್.ಭೀಮಾನಾಯ್ಕ 8,9,10 ಮತ್ತಿತರ ವಾರ್ಡ್‍ಗಳಲ್ಲಿ ಸಂಚರಿಸಿ ಜನರಿಗೆ ಕೈಮುಗಿಯುತ್ತಾ ಮತಯಾಚಿಸಿದರು. ಜಿ.ಪಂ.ಸದಸ್ಯ ಎಂ.ಎಂ.ಜೆ ಹರ್ಷವರ್ಧನ ಮುಖಂಡ ಪಿ.ಹೆಚ್.ದೊಡ್ಡರಾಮಣ್ಣ ಮತ್ತಿತರರು ಜೊತೆಗೆ ಸಾಗಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
