ಕೂಡ್ಲಿಗಿ:

ಜಯಂತಿ ಹೆಸರಿನಲ್ಲಿ ತಾಲ್ಲೂಕು ಮಟ್ಟದ ಇಲಾಖೆಗಳಲ್ಲಿ ಹಣ ದುರುಪಯೋಗವಾಗುತ್ತಿದ್ದು, ಮುಂಬರುವ ಯಾವುದೇ ಜಯಂತಿ ಆಚರಣೆ ಮಾಡಲು ಅಧಿಕಾರಿಗಳಿಂದ ಹಣ ಕೇಳಬಾರದು ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಬಿ. ವೆಂಕಟೇಶ್ ನಾಯ್ಕ್ ತಹಶೀಲ್ದಾರರಿಗೆ ತಾಕೀತು ಮಾಡಿದರು. ಸ್ಥಳೀಯ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿವಿಧ ಜಯಂತಿ ಆಚರಣೆ ಮಾಡುವ ಸಂದರ್ಭದಲ್ಲಿ ಅದ್ದೂರಿಯಾಗಿ ನಡೆಸಲು ಇಲಾಖೆಯ ಮುಖ್ಯಸ್ಥರಿಂದ ವಂತಿಗೆ ಪಡೆಯಲಾಗುತ್ತದೆ. ಆದರೆ ಅಧಿಕಾರಿಗಳಿಗೆ ಆಚರಣೆಗೆಂದು ನೀಡಿದ ಹತ್ತು ಪಟ್ಟು ಹೆಚ್ಚು ಹಣವನ್ನು ಇಲಾಖೆಯ ಲೆಕ್ಕದಲ್ಲಿ ತೋರಿಸುತ್ತಾರೆ. ರಾಷ್ಟ್ರೀಯ ಹಬ್ಬವೊಂದಕ್ಕೆ ತಾಲ್ಲೂಕು ಪಂಚಾಯ್ತಿಯಲ್ಲಿ 21 ಸಾವಿರ ಹಣ ಲೆಕ್ಕ ಬರೆಯಲಾಗಿದೆ. ಆದರೆ ಅವರು ಬರೆದಿರುವುದರಲ್ಲಿ ಯಾವುದನ್ನು ಮಾಡಿಲ್ಲ. ಅದ್ದರಿಂದ ಮುಂದಿನ ದಿನಗಳಲ್ಲಿ ಸರ್ಕಾರದಿಂದ ಬರುವ ಹಣವನ್ನು ಮಾತ್ರ ಬಳಸಿಕೊಂಡು ಸರಳವಾಗಿ ಆಚರಣೆ ಮಾಡಬೇಕು. ಇಲ್ಲವಾದಲ್ಲಿ ಸಂಬಂಧಿಸಿದ ಸಮಾಜದವರು ಅಥವಾ ರಾಜಕಾರಣಿಗಳು ಹಣ ಹಾಕಿಕೊಂಡು ಅದ್ದೂರಿಯಾಗಿ ಮಾಡಲಿ ಎಂದು ಹೇಳಿದರು.
ನಂತರ ನಡೆದ ಚರ್ಚೆಯಲ್ಲಿ ತಾಲ್ಲೂಕಿನ ಅನೇಕ ಭಾಗಗಳಲ್ಲಿ ಸಮರ್ಪಕವಾಗಿ ಮಳೆಯಾಗಿರುವುದಿಲ್ಲ. ಆದರೆ ಕೃಷಿ ಇಲಾಖೆಯ ಅಧಿಕಾರಿಗಳು ಮಳೆ ಬಂದ ಕಡೆ ಬೆಳೆ ಸಮೀಕ್ಷೆ ಮಾಡಿ ವರದಿ ನೀಡುತ್ತೀರಿ. ಇದರಿಂದ ರೈತರಿಗೆ ವಿಮೆ ಬಾರದೆ ನಷ್ಟ ಅನುಭವಿಸುವಂತಾಗುತ್ತದೆ ಎಂದು ಸದಸ್ಯ ಸರೋಜಮ್ಮ ಹೇಳಿದರೆ, ಕಾನಹೊಸಹಳ್ಳಿ ಹಾಗೂ ಗುಡೇಕೋಟೆ ಹೋಬಳಿಗಳಲ್ಲಿ ಶೇಂಗಾವೇ ಮುಖ್ಯ ಬೆಳೆಯಾಗಿದ್ದರೂ ವಿಮೆ ಪಟ್ಟಿಯಲ್ಲಿ ಅದನ್ನು ಉಪ ಬೆಳೆ ಎಂದು ನಮೂದು ಮಾಡಿದ್ದೀರಿ. ಇದರಿಂದ ಬೆಳೆ ನಷ್ಟ ಪಡೆಯಲು ತೊಂದರೆಯಾಗುತ್ತದೆ. ಅದ್ದರಿಂದ ತಕ್ಷಣ ಉಪ ಬೆಳೆ ಎಂದು ತೆಗೆದು ಪ್ರಮುಖ ಬೆಳೆ ಎಂದು ನಮೂದು ಮಾಡಿ ಎಂದು ಸದಸ್ಯ ಪಾಪನಾಯಕ ಕೃಷಿ ಅಧಿಕಾರಿಗೆ ಒತ್ತಾಯಿಸಿದರು.
ಈ ಬಗ್ಗೆ ಸ್ಪಷ್ಟನೆ ನೀಡಿದ ಕೃಷಿ ಸಹಾಯಕ ಅಧಿಕಾರಿ ಹಾಲಪ್ಪ, ತಾಲ್ಲೂಕಿನ 32 ಸಾವಿರ ಪ್ರದೇಶದಲ್ಲಿ ಬೆಳೆ ನಷ್ಟವಾಗಿದ್ದು, ಈ ಬಗ್ಗೆ ವರದಿ ನೀಡಲಾಗುವುದು. ಅಲ್ಲದೆ ಗುಡೇಕೋಟೆ ಹಾಗೂ ಕಾನಹೊಸಹಳ್ಳಿ ಹೋಬಳಿಗಳಲ್ಲಿ ಶೇಂಗಾವನ್ನೆ ಪ್ರಮುಖ ಬೆಳೆ ಎಂದು ತಿದ್ದುಪಡಿ ಮಾಡಲಾಗುವುದು ಎಂದು ಹೇಳಿದರು.
ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಹಣ ನೀಡಿದರೆ ಮಾತ್ರ ರೈತರು ಉಳುಮೆ ಮಾಡುತ್ತಿರುವ ಜಮೀನುಗಳ ಪಹಣಿಗಳಲ್ಲಿ ಹೆಸರುಗಳು ಬದಲಾಗುತ್ತವೆ. ಇಲ್ಲ ಎಂದರೆ ತಿಂಗಳು ಕಳೆದರೂ ಕಂದಾಯ ಇಲಾಖೆಯಲ್ಲಿ ಕೆಲಸಗಳಾಗುವುದಿಲ್ಲ ಎಂದು ಸದಸ್ಯ ಕೊಟ್ರೇಶ್ ಆರೋಪಿಸಿದರು. ಇದಕ್ಕೆ ದ್ವನಿಗೂಡಿಸಿದ ಮತ್ತೊಬ್ಬ ಸದಸ್ಯ ಗುರುಮೂರ್ತಿ ಶಾನಬೋಗರ ಕಂದಾಯ ಇಲಾಖೆಯಲ್ಲಿ ಮಧ್ಯವರ್ತಿಗಳಿಲ್ಲದೆ ಯಾವುದೇ ಕೆಲಸವಾಗುವುದಿಲ್ಲ ಎಂದು ದೂರಿದರು.
ತಾಲ್ಲೂಕು ಪಂಚಾಯ್ತಿಗೆ ಸಂಬಂಧಿಸಿದ ಮಳಿಗೆಗಳನ್ನು ಮರು ಹರಾಜು ಹಾಕುವಂತೆ ಅನೇಕ ಬಾರಿ ಸಭೆಯಲ್ಲಿ ಪ್ರಸ್ತಾಪ ಮಾಡಲಾಗಿತ್ತು. ಆದರೆ ಅಧಿಕಾರಿಗಳು ಈ ಬಗ್ಗೆ ಏಕೆ ಕ್ರಮ ಕೈಗೊಂಡಿಲ್ಲ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಬಿ. ವೆಂಕಟೇಶ್ ಅವರನ್ನು ಪ್ರಶ್ನಿಸುತ್ತ, ತಕ್ಷಣ ಎಲ್ಲಾ ಮಳಿಗೆಗಳ ಬಾಡಿಗೆದಾರರಿಗೆ ಖಾಲಿ ಮಾಡುವಂತೆ ನೋಟೀಸ್ ನೀಡಿ ಎಂದು ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಸದಸ್ಯ ಪಾಪ ನಾಯಕ, ಗ್ರಾಮ ಪಂಚಾಯ್ತಿಗಳಲ್ಲಿ ಮನೆಗಳ ಜಿಪಿಎಸ್ ಮಾಡಲು ಪಂಚಾಯ್ತಿ ಅಧಿಕಾರಿಗಳು ಫಲಾನುಭವಿಗಳಿಂದ ಸಾವಿರಾರು ರೂಪಾಯಿ ಹಣ ಪಡೆಯುತ್ತಾರೆ. ಕೇಳಿದರೆ ತಾಲ್ಲೂಕು ಪಂಚಾಯ್ತಿಯಲ್ಲಿ ಕೊಡಬೇಕು ಎಂದು ಹೇಳುತ್ತಾರೆ. ಅವರು ತಂದು ಕೊಡುವ ಹಣ ಯಾರ ಜೇಬು ಸೇರುತ್ತದೆ ಎಂದು ಸ್ಪಷ್ಟವಾಗಲಿ ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಜಿ.ಎಂ. ಬಸಣ್ಣ ನಿರ್ಧಿಷ್ಟವಾಗಿ ದೂರು ಬಂದರೆ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಹಾಲಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಕೆಇಬಿ ಬಸವರಾಜ, ಗ್ರೇಡ್-2 ತಹಶೀಲ್ದಾರ್ ಅರುದಂತಿ ನಾಗವಿ ವೇದಿಕೆಯಲ್ಲಿದ್ದರು. ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.
ಸಭೆ ಆರಂಭಕ್ಕೂ ಮುನ್ನ ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ ಆಟಲ್ ಬಿಹಾರಿ ವಾಜಪೇಯಿ ಅವರಿಗೆ ಮೌನಾಚರಣೆ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು. ನಂತರ ಕೊಡುಗು ಜಿಲ್ಲೆಯ ನೆರೆ ಸಂತ್ರಸ್ಥರಿಗೆ ನೆರವು ನೀಡಲು ಅಧಿಕಾರಿಗಳು ಹಾಗೂ ಸದಸ್ಯರಿಂದ ಹಣ ಸಂಗ್ರಹ ಮಾಡಲಾಯಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








