ಹಾವೇರಿ
ಆಣೂರ ಕೆರೆಗೆ ನೀರು ತುಂಬಿಸಬೇಕು ಎಂಬ ಬೇಡಿಕೆ ಮುಂದಿರಿಸಿ ಮತದಾನದಿಂದ ಹೊರಗುಳಿಯುವುದಾಗಿ ಹೇಳಿಕೆ ನೀಡಿದ ಆಣೂರ ಗ್ರಾಮದ ರೈತರನ್ನು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ, ಜಿಲ್ಲಾ ಪಂಚಾಯತ್ ಮುಖ್ಯ ನಿರ್ವಾಹಣಾಧಿಕಾರಿ ಶ್ರೀಮತಿ ಕೆ.ಲೀಲಾವತಿ ಹಾಗೂ ಇತರ ಅಧಿಕಾರಿಗಳ ತಂಡ ರೈತರನ್ನು ಭೇಟಿ ಮಾಡಿ ಕೆರೆ ತುಂಬಿಸುವ ಯೋಜನೆಯ ವಸ್ತುಸ್ಥಿತಿಯನ್ನು ರೈತರಿಗೆ ಮನವರಿಕೆ ಮಾಡಿಕೊಟ್ಟರು.
ಮತದಾನದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿಕೊಂಡರು.ಗುರುವಾರ ಮಧ್ಯಾಹ್ನ ಆಣೂರಿಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಭೇಟಿ ನೀಡಿದ ಅಧಿಕಾರಿಗಳ ತಂಡ ಕೆರೆಯ ದಡದಲ್ಲಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿತು.
ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಈಗಾಗಲೇ ಆಣೂರ ಕೆರೆ ತುಂಬಿಸುವ ಯೋಜನೆಗೆ ಸರ್ಕಾರ ಡಿಪಿಆರ್ ಹೊರಡಿಸಿದೆ. ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿ ಇರುವುದರಿಂದ ಈ ಸಂದರ್ಭದಲ್ಲಿ ಹಣ ಬಿಡುಗಡೆಗೆ ತಾಂತ್ರಿಕ ತೊಂದರೆಗಳಿವೆ. ಚುನಾವಣೆ ನೀತಿ ಸಂಹಿತೆ ಪೂರ್ಣಗೊಂಡ ಮೇಲೆ ಈ ಕುರಿತಂತೆ ಕ್ರಮ ವಹಿಸಲಾಗುವುದು. ಇಲ್ಲಿನ ರೈತರ ಪರಿಸ್ಥಿತಿ ಜಿಲ್ಲಾಡಳಿತದ ಗಮನದಲ್ಲಿದೆ. ಆದ್ಯತೆಯ ಮೇಲೆ ನಿಮ್ಮ ಸಮಸ್ಯೆಗೆ ಸ್ಪಂದಿಸಲಾಗುವುದು. ತಮ್ಮ ತೀರ್ಮಾನ ಬದಲಿಸಿ ಮತದಾನದಿಂದ ಹೊರಗುಳಿಯುವ ತೀರ್ಮಾನವನ್ನು ಕೈಬಿಡುವಂತೆ ಮನವಿ ಮಾಡಿಕೊಂಡರು.
ಗ್ರಾಮಸ್ಥರು ಈ ಭಾಗದ ಜನರ ಕುಡಿಯುವ ನೀರಿನ ಪರಿಸ್ಥಿತಿ ಹಾಗೂ ಆಣೂರ ಕೆರೆಯನ್ನು ತುಂಬಿಸುವುದರಿಂದ ಆಣೂರ ಸೇರಿದಂತೆ ಈ ಭಾಗದ ರೈತರಿಗೆ ಆಗುವ ಅನುಕೂಲಗಳು ಸರ್ಕಾರ ಮತ್ತು ಜಿಲ್ಲಾಡಳಿತ ಈ ಕೆರೆ ತುಂಬಿಸುವ ಯೋಜನೆಗೆ ಕೊಡಬೇಕಾದ ಮಹತ್ವ ಕುರಿತಂತೆ ವಿವರವಾಗಿ ಅಧಿಕಾರಿಗಳ ತಂಡದ ಎದುರು ಬಿಚ್ಚಿಟ್ಟರು.
ಚುನಾವಣೆಯನ್ನು ಬಹಿಷ್ಕರಿಸುವ ಉದ್ದೇಶ ಯಾವ ರೈತರಿಗೂ ಇಲ್ಲ. ಚುನಾವಣಾ ಕಾರ್ಯಗಳಿಗೆ ಯಾವುದೇ ಅಧಿಕಾರಿಗಳಿಗೆ ಅಡ್ಡಿಪಡಿಸುವುದಿಲ್ಲ. ಯಾರಿಗೂ ಮತದಾನ ಬಹಿಷ್ಕರಿಸುವಂತೆ ನಾವು ಹೇಳಿಲ್ಲ. ನಮ್ಮ ಸಂಕಷ್ಟವನ್ನು ಅರ್ಥಮಾಡಿಕೊಂಡು ಬಹುದಿನಗಳ ಬೇಡಿಕೆಯಾದ ಆಣೂರ ಕೆರೆಯನ್ನು ತುಂಬಿಸುವ ಕೆಲಸವಾಗಬೇಕಾಗಿದೆ. ಮತದಾನದ ದಿನದೊಳಗೆ ಕೆರೆ ತುಂಬಿಸುವ ಆದೇಶವನ್ನು ನಮಗೆ ನೀಡಿದರೆ ಎಲ್ಲರೂ ಮತದಾನದಲ್ಲಿ ಭಾಗವಹಿವುದಾಗಿ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ, ಜಿ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಕೆ.ಲೀಲಾವತಿ, ಬ್ಯಾಡಗಿ ಸಹಾಯಕ ಚುನಾವಣಾಧಿಕಾರಿ ಸಿದ್ಧರಾಜು, ಹಾವೇರಿ ಡಿ.ವೈ.ಎಸ್.ಪಿ. ಕುಮಾರಪ್ಪ ಹಾಗೂ ವಿವಿಧ ಅಧಿಕಾರಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.