ಬಳ್ಳಾರಿ:
ಕೊಡಗು ಜಿಲ್ಲೆಯ ಸಂತ್ರಸ್ಥರ ನೆರವಿಗೆ, ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಯುವ ಸೇನೆ ಪದಾಧಿಕಾರಿಗಳು ಹಾಗೂ ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ಪದಾಧಿಕಾರಿಗಳು ನಗರದಲ್ಲಿ ದೇಣಿಗೆ ಹಾಗೂ ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಿ ಸಂತ್ರಸ್ಥರಿಗೆ ಮಂಗಳವಾರ ವಿತರಿಸಿದರು.
ನಗರದ ನಾನಾ ಪ್ರಮುಖ ರಸ್ತೆ ಸೇರಿದಂತೆ ನಾನಾ ಕಡೆ ತೆರಳಿ ಸಾರ್ವಜನಿಕರಿಂದ ದೇಣಿಗೆ ಹಾಗೂ ಅಗತ್ಯ ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಿ ಎರಡೂ ಸಂಘಟನೆಯ ಮುಖಂಡರು ಹಾಗೂ ಪದಾಧಿಕಾರಿಗಳು ಕೊಡಗು ಜಿಲ್ಲೆಗೆ ತೆರಳಿ ಸಂತ್ರಸ್ಥರಿಗೆ ವಿತರಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಯುವ ಸೇನೆ ಜಿಲ್ಲಾ ಅಧ್ಯಕ್ಷ ಡಿ.ವಿಜಯಕುಮಾರ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ ಅಲ್ಲಿನ ಜನ ಜೀವನ ಅಸ್ತವ್ಯಸ್ಥಗೊಂಡಿದ್ದು, ಆಹಾರ, ಶುದ್ಧ ನೀರು, ವಾಸಿಸಲು ನೆಲೆಯಿಲ್ಲದಂತಾಗಿದೆ. ಈ ಹಿನ್ನೆಲೆಯಲ್ಲಿ ಕೈಲಾದಷ್ಟು ಸಹಾಯ ಮಾಡಲು ನಗರದಲ್ಲಿ ಸಂಚರಿಸಿ ಸಾರ್ವಜನಿಕರಿಂದ ದೇಣಿಗೆ ಹಾಗೂ ಅಗತ್ಯ ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಿ ಕೊಡಗು ಜಿಲ್ಲೆಯ ಮಡಿಕೇರಿ, ಕುಶಾಲ್‍ನಗರ, ಸೊಂಟಿಕೊಪ್ಪ, ಮಾದಾಪೂರ ಸೇರಿದಂತೆ ನಾನಾ ಕಡೆ ತೆರಳಿ ವಿತರಿಸಲಾಗಿದೆ. ಪ್ರವಾಹಕ್ಕೆ ಸಿಲುಕಿದ ಜನರ ಜೀವನ ಅಯೋಮಯವಾಗಿದ್ದು, ನಾನಾ ಸಮಸ್ಯೆಗಳನ್ನು ಎದುರಿಸುವಂತಾಗಿದೆ.
ಸಾರ್ವಜನಿಕರಿಂದ ಸಂಗ್ರಹಸಿದ 48ಸಾವಿರ ರೂ.ನಗದು, 3 ಕ್ವಿ.ಅಕ್ಕಿ, 20ಮೂಟೆ ಮಂಡಕ್ಕಿ, 50ಕೇಜಿ ಗೋದಿ, 50ಕೇಜಿ ಉಪ್ಪಿಟ್ಟಿನ ರವ, ತರಕಾರಿ, 30ಕ್ಕೂ ಹೆಚ್ಚು ಬಿಸ್ಕೆಟ್ ಬಾಕ್ಸ್, ಬನ್, 150ಕ್ಕೂ ಹೆಚ್ಚು ಬೆಡ್‍ಶೀಟ್‍ಗಳನ್ನು ವಿತರಿಸಲಾಗಿದೆ. ಇದರ ಜೊತೆಗೆ ಸಂಘಟನೆಯ ವತಿಯಿಂದ 5ಕುಟುಂಬಗಳ ಸದಸ್ಯರಿಗೆ ತಲಾ 3ಸಾವಿರ ರೂ.ಗಳಂತೆ ಹಣ ವಿತರಿಸಲಾಗಿದೆ ಎಂದರು.
ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ಜಿಲ್ಲಾಧ್ಯಕ್ಷ ಎನ್.ರಾಘವೇಂದ್ರ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಪ್ರವಾಹ ಹಿನ್ನೆಲೆಯಲ್ಲಿ ಕೈಲಾದಷ್ಟು ಸಂತ್ರಸ್ಥರಿಗೆ ನೆರವಾಗಲೆಂದು ನಗರದಲ್ಲಿ ಸಂಗ್ರಹಿಸಿದ ಹಣ ಹಾಗೂ ಅಗತ್ಯ ಸಾಮಗ್ರಿಗಳನ್ನು ವಿತರಿಸಲಾಗಿದೆ. ಸಂತ್ರಸ್ಥರು ಸಿಲುಕಿರುವ ಸ್ಥಳಕ್ಕೆ ತೆರಳಿ ಕೈಲಾದಷ್ಟು ಅವರನ್ನು ರಕ್ಷಿಸುವ ಕೆಲಸ ಮಾಡಿದ್ದೇವೆ. ಮಾದಾಪೂರ ಗ್ರಾಮದಲ್ಲಿ ತೆರೆದ ನಿರಾಶ್ರಿತರ ಕೇಂದ್ರಕ್ಕೆ ತೆರಳಿ, ಅಲ್ಲಿಯೂ ಆಹಾರ ಸಾಮಗ್ರಿಗಳನ್ನು ನೀಡಲಾಗಿದೆ. ವಾಸಿಸುವ ಮನೆ ಕಳೆದುಕೊಂಡ ಕೆಲವರಿಗೆ ಸಂಘಟನೆ ವತಿಯಿಂದ ಹಣ ನೀಡಿ ನೆರವಾಗಿದ್ದೇವೆ ಎಂದರು. ಈ ಸಂದರ್ಭದಲ್ಲಿ ಕೊಡಗು ಜಿಲ್ಲೆಯ ಚಂದು, ಪ್ರಕಾಶ್, ವಂಡ್ರಿ, ಶಿವು, ಬಸವರಾಜ್, ರಾಮು ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ