ತಂತ್ರಜ್ಞಾನಕ್ಕೆ ತಕ್ಕಂತೆ ಕೌಶಲ್ಯ ವೃದ್ಧಿಸಿಕೊಳ್ಳಲು ಕರೆ

ದಾವಣಗೆರೆ:

  ಪ್ರಸ್ತುತ ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ತಕ್ಕಂತೆ ಛಾಯಾಗ್ರಾಹಕರು ಕೌಶಲ್ಯ ವೃದ್ಧಿಸಿಕೊಂಡು ಗುಣಮಟ್ಟದ ಸೇವೆ ನೀಡಬೇಕೆಂದು ಉತ್ತರ ಶಾಸಕ ಎಸ್.ಎ.ರವೀಂದ್ರನಾಥ್ ಕರೆ ನೀಡಿದರು.
ನಗರದ ಅಭಿನವ ರೇಣುಕ ಮಂದಿರದಲ್ಲಿ ಭಾನುವಾರ ಜಿಲ್ಲಾ ಫೋಟೋಗ್ರಾಫರ್ಸ್ ಮತ್ತು ವೀಡಿಯೋಗ್ರಾಫರ್ಸ್ ಸಂಘ ಹಾಗೂ ಫೋಟೋಗ್ರಾಫರ್ಸ್ ಯೂತ್ ವೆಲ್‍ಫೇರ್ ಅಸೋಸಿಯೇಷನ್ ವತಿಯಿಂದ ಏರ್ಪಡಿಸಿದ್ದ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಛಾಯಾಗ್ರಾಹಕರು ಆಧುನಿಕ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳುವ ಮೂಲಕ ಯಾವುದಕ್ಕೂ ಕೊರತೆ ಬಾರದ ರೀತಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಬೇಕೆಂದು ಸಲಹೆ ನೀಡಿದರು.

  ಛಾಯಾಚಿತ್ರಗಳನ್ನು ಸೆರೆ ಹಿಡಿಯುವ ಮೂಲಕ ಹಳೆಯ ನೆನಪುಗಳನ್ನು ಜೀವಂತವಾಗಿ ಇಡುವ ಛಾಯಾಗ್ರಾಹಕ ವೃತ್ತಿ ಅತ್ಯಂತ ವೈಶಿಷ್ಟ್ಯಪೂರ್ಣವಾಗಿದೆ. ಒಳ್ಳೆಯ ಛಾಯಾಚಿತ್ರ ಸೆರೆ ಹಿಡಿಯುವುದು ಕಷ್ಟದ ಕೆಲಸವಾಗಿದ್ದು, ಸಾಧ್ಯವಾದಷ್ಟು ಒಳ್ಳೆ ಫೋಟೋ ತೆಗೆಯುವ ಮೂಲಕ ಫೋಟೋಗ್ರಫಿ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆಗೈಯ್ಯಬೇಕೆಂದು ಕಿವಿಮಾತು ಹೇಳಿದರು.
ವಿಶ್ವ ಛಾಯಾಗ್ರಹಣ ದಿನಾಚರಣೆ ಪ್ರಯುಕ್ತ ಫೋಟೋಗ್ರಫಿಗೆ ಸಂಬಂಧಪಟ್ಟ ಎಲ್ಲವನ್ನೂ ಒಂದೇ ಸೂರಿನಡಿ ನೋಡಬಹುದಾದ ವಸ್ತು ಪ್ರದರ್ಶನ ಏರ್ಪಡಿಸಿರುವುದು ತುಂಬಾ ಉಪಯುಕ್ತವಾಗಿದೆ ಎಂದರು.

  ಕರ್ನಾಟಕ ಫೋಟೋಗ್ರಾಫರ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಬಿ.ಎಸ್.ಶಶಿಧರ್ ಮಾತನಾಡಿ, ಫ್ರಾನ್ಸ್‍ನಲ್ಲಿ 1839ರ ಆಗಸ್ಟ್ 19ರಂದು ಫೋಟೋಗ್ರಫಿ ತಂತ್ರಜ್ಞಾನ ಮೊದಲ ಬಾರಿಗೆ ಬೆಳಕಿಗೆ ಬಂದಿತ್ತು. ಇದರ ಸ್ಮರಣಾರ್ಥ ಪ್ರತಿವರ್ಷ ವಿಶ್ವ ಛಾಯಾಗ್ರಹಣ ದಿನ ಆಚರಿಸಲಾಗುತ್ತಿದೆ. ಅಲ್ಲಿಂದ ಬೆಳೆದುಬಂದ ಈ ಕಲೆಯು ಇಂದು ನಮಗೆ ಜೀವನಾಧಾರವಾಗಿದೆ ಎಂದು ಹೇಳಿದರು.
ಅಸಂಘಟಿತ ವಲಯದಲ್ಲಿರುವ ಛಾಯಾಗ್ರಾಹಕರ ಕೂಗು ಸರ್ಕಾರಕ್ಕೆ ಕೇಳುತ್ತಿಲ್ಲ. ಆದ್ದರಿಂದಲೇ ಛಾಯಾಗ್ರಾಹಕರ ಬೇಡಿಕೆಗಳು ಈಡೇರದೆ ಹಾಗೆಯೇ ಉಳಿದಿವೆ. ನಾವು ಸಂಘಟಿತರಾಗಿ, ಶಕ್ತಿ ಪ್ರದರ್ಶನ ಮಾಡಿದಾಗ ಮಾತ್ರ ಸರ್ಕಾರ ನಮ್ಮೆಡೆಗೆ ಗಮನ ಹರಿಸಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ದಾವಣಗೆರೆಯಲ್ಲಿ ರಾಜ್ಯಮಟ್ಟದ ಸಮಾವೇಶ ಹಮ್ಮಿಕೊಳ್ಳುವ ಮೂಲಕ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಲಾಗುವುದು ಎಂದ ಅವರು, ಛಾಯಾಗ್ರಾಹಕರಿಗೆ ಯಾವುದೇ ಜಾತಿ-ಮತ ಇಲ್ಲ. ಛಾಯಾಗ್ರಹಣವೇ ನಮ್ಮ ಧರ್ಮ, ನಾವು ಎಲ್ಲರಿಗೂ ಬೇಕಾದವರು ಎಂಬುದನ್ನು ಯಾರೂ ಮರೆಯಬಾರದು ಎಂದರು.

  ಈ ಸಂದರ್ಭದಲ್ಲಿ ಛಾಯಾಗ್ರಾಹಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಛಾಯಾ ಸಾಧಕರಿಗೆ ಸನ್ಮಾನ ನೆರವೇರಿಸಲಾಯಿತು. ಇದೇ ವೇಳೆ ಉಚಿತ ಕ್ಯಾಮರಾ ಸರ್ವೀಸ್, ನುರಿತ ತಜ್ಞರಿಂದ ಕಾರ್ಯಾಗಾರವನ್ನು ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಫೋಟೋಗ್ರಾಫರ್ಸ್ ಯೂತ್ ವೆಲ್‍ಫೇರ್ ಅಸೋಸಿಯೇಷನ್‍ನ ತಾಲೂಕು ಅಧ್ಯಕ್ಷ ಶ್ರೀನಾಥ್ ಪಿ.ಅಗಡಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಫೋಟೋಗ್ರಾಫರ್ಸ್ ಅಸೋಸಿಯೇಷನ್ ರಾಜ್ಯ ಜಂಟಿ ಕಾರ್ಯದರ್ಶಿ ಪಿ.ಆರ್.ರಮೇಶ, ಜಿಲ್ಲಾಧ್ಯಕ್ಷ ಶಿಕಾರಿ ಶಂಭು, ಹೆಚ್.ಕೆ.ಸಿ.ರಾಜು, ಎಸ್.ಎಂ.ಪಂಚಾಕ್ಷರಯ್ಯ ಮತ್ತಿತರರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link
Powered by Social Snap