ಹೊಸಪೇಟೆ :
ದೇವೇಗೌಡ-ಸಿದ್ದರಾಮಯ್ಯನವರ ಸಂಬಂಧ ಜನ್ಮ ಜನ್ಮದ ಸಂಬಂಧ ಆಗಿದ್ದರೆ ಕುಮಾರಸ್ವಾಮಿಯನ್ನು ಸಿಎಂ ಸ್ಥಾನದಿಂದ ಇಳಿಸಿ, ಸಿದ್ದರಾಮಯ್ಯನವರನ್ನು ಸಿಎಂ ಮಾಡಲಿ ನೋಡೋಣ ಎಂದು ಶಾಸಕ ಸಿ.ಟಿ.ರವಿ ಸವಾಲು ಹಾಕಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಮುಂಚೆ ಸಿದ್ದರಾಮಯ್ಯನವರು ದೇವೇಗೌಡರನ್ನು ಧೃತರಾಷ್ಟ್ರ ಇದ್ದಂತೆ, ಮಕ್ಕಳ ಮೇಲೆ ವ್ಯಾಮೋಹ ಜಾಸ್ತಿ. ಹೀಗಾಗಿ ನಾನು ಸಿಎಂ ಆಗುವುದನ್ನು ತಡೆಯಲು ನಾಟಕವಾಡಿ, ಕೊನೆಗೆ ಮಗ ಕುಮಾರಸ್ವಾಮಿಯನ್ನು ಸಿಎಂ ಮಾಡಿದರು ಎಂದು ಆರೋಪಿಸಿದ್ದರು. ದೇವೇಗೌಡರು ನಾನು ಬೆಳೆಸಿದ ಸಿದ್ದರಾಮಯ್ಯ ಅತ್ಯಂತ ನೀಚ ಮುಖ್ಯಮಂತ್ರಿ ಅಂತ ಜರಿದಿದ್ದರು. ಈಗ ಅದೆಲ್ಲವನ್ನು ಮರೆತಂತೆ ನಾಟಕವಾಡುತ್ತಿದ್ದಾರೆ. ದೇವೇಗೌಡ-ಸಿದ್ದು ಸಂಬಂಧ ಜನ್ಮ ಜನ್ಮದ್ದೇ ಆಗಿದ್ದರೆ, ಆ ತಾಕತ್ತು ಇದ್ದರೆ ಸಿದ್ದರಾಮಯ್ಯನವರನ್ನು ಸಿಎಂ ಮಾಡಲಿ ಎಂದು ಸವಾಲು ಹಾಕಿದರು.
ಶ್ರೀರಾಮುಲು ಅವರಿಗೆ ಸರಿಯಾಗಿ ಕನ್ನಡ ಬರಲ್ಲ ಅಂತ ಸಿದ್ದು ಹೇಳ್ತಾರೆ. ಆದರೆ ತಮ್ಮ ನಾಯಕ ರಾಹುಲ್‍ಗಾಂಧಿಗೆ ಸರ್.ಎಂ.ವಿಶ್ವೇಶ್ವರಯ್ಯನವರ ಹೆಸರೇ ಹೇಳಲು ಬರುವುದಿಲ್ಲ. ಬಸವಣ್ಣನವರ ವಚನವನ್ನು ‘ಇವನಾರವ’ ಅನ್ನುವ ಬದಲು ‘ಇವನರ್ವ, ಇವನರ್ವ’ ಅಂತ ಹೇಳಿ ಅವಮಾನಿಸಿದ್ದಾರೆ.ಅದಕ್ಕಿಂತ ಇದೇ ಮೇಲಲ್ವಾ? ಎಂದ ಅವರು, ಶ್ರೀರಾಮುಲು ಏನು ಕನ್ನಡ ಪಂಡಿತರಲ್ಲ ಎಂದರು.
ಬಿಜೆಪಿ ರೈತ ವಿರೋಧಿ ಸರ್ಕಾರ ಎಂದು ಜರಿಯುತ್ತಾರೆ. ಆದರೆ ಬಿಜೆಪಿ ಸರ್ಕಾರ ಫಸಲ್ ಭೀಮಾ ಯೋಜನೆ, ಬೆಳೆಗೆ ಬೆಂಬಲ ಬೆಲೆ, ಸೈಕಲ್ ವಿತರಣೆ, ಸುವರ್ಣಭೂಮಿ ಯೋಜನೆ ಜಾರಿಗೆ ತಂದಿಲ್ಲವೇ? ಎಂದು ಸಮಜಾಯಿಸಿ ನೀಡಿದರು.
ಎಲ್ಲಾ 5 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಕಾಂಗ್ರೆಸ್‍ನವರು ನಮಗೆ ಸಹಕಾರ ನೀಡಲಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲವನ್ನು ಕಾದು ನೋಡಿ ಎಂದರು.
ಉಪ ಚುನಾವಣೆಗೆ ರಾಷ್ಟ್ರೀಯ ನಾಯಕರು ಯಾಕೆ ಪ್ರಚಾರಕ್ಕೆ ಬರ್ತಾ ಇಲ್ಲ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ‘ ದೇಶದಲ್ಲಿ ನಡೆದ ಯಾವುದೇ ಉಪ ಚುನಾವಣೆಗೆ ರಾಷ್ಟ್ರೀಯ ನಾಯಕರು ಬಂದಿಲ್ಲ. ಅದಕ್ಕಾಗಿ ಅದನ್ನು ನಾವೇ ನಿರ್ವಹಿಸುತ್ತೇವೆ ಎಂದು ತಿಳಿಸಿದರು.
ಸೋಲು :
ದೇಶದಲ್ಲಿ ನಡೆದ ಎಲ್ಲಾ ಉಪ ಚುನಾವಣೆಗಳಲ್ಲಿ ಬಿಜೆಪಿ ಸೋತಿದೆ. ಇದರಿಂದ ಬಿಜೆಪಿ ಪಾಠ ಕಲಿತಿಲ್ವಾ? ಎಂಬ ಸುದ್ದಿಗಾರರ ಪ್ರಶ್ನೆಗೆ ‘ ಹಾಗೇನಿಲ್ಲ ಸೋಲು-ಗೆಲುವು ಸಹಜ ಎಂದರು.
ದಲಿತ ವಿರೋಧಿ ಬಿಜೆಪಿ :
ಕಾಂಗ್ರೆಸ್ ಪಕ್ಷದಲ್ಲಿ ಎಲ್ಲಾ ಜಾತಿಯ ಜನ ಸಿಎಂ ಆಗಿದ್ದಾರೆ. ಆದರೆ ಬಿಜೆಪಿಯಲ್ಲಿ ಮೇಲ್ವರ್ಗಗಳು ಮಾತ್ರ ಸಿಎಂ ಆಗಲು ಅವಕಾಶವಿದೆ. ದಲಿತ, ಹಿಂದುಳಿದ, ಅಲ್ಪಸಂಖ್ಯಾರನ್ನು ಸಿಎಂ ಮಾಡಲು ಅವಕಾಶ ನೀಡುವುದಿಲ್ಲ. ಅವರಿಗೆ ಅಧಿಕಾರ ಸಿಕ್ಕುವುದಿಲ್ಲ. ಯಾಕೀ ತಾರತಮ್ಮ ಮಾಡಲಾಗುತ್ತಿದೆ ಎಂದಾಗ ‘ ಕಾಂಗ್ರೆಸ್ 125 ವರ್ಷ ಇತಿಹಾಸ ಇರುವ ಪಕ್ಷ. ಹೀಗಾಗಿ ಅವರಿಗೆ ಸಿಎಂ ಮಾಡಲು ಸಾಧ್ಯವಾಗಿದೆ. ಬಿಜೆಪಿ ಈಗ ಅಧಿಕಾರಕ್ಕೆ ಬಂದು ಕೆಲವೇ ವರ್ಷಗಳಾಗಿವೆ. ನಮಗೂ ಕಾಲಾವಕಾಶ ಬೇಕು’ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಎಚ್.ಆರ್.ಗವಿಯಪ್ಪ, ಜಿಲ್ಲಾಧ್ಯಕ್ಷ ಚನ್ನಬಸವನಗೌಡ, ಮುಖಂಡರಾದ ಕೆ.ಬಿ.ಶ್ರೀನಿವಾಸರೆಡ್ಡಿ, ಕಿಶೋರ ಪತ್ತಿಕೊಂಡ, ಬಸವರಾಜ ನಾಲತವಾಡ, ಕಟಿಗಿ ರಾಮಕೃಷ್ಣ, ಕೋರಿ ಪಕ್ಕೀರಪ್ಪ, ಚಂದ್ರಕಾಂತ ಕಾಮತ್, ಮೇಟಿ ಶಂಕರ್ ಇದ್ದರು,
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
