ಬಳ್ಳಾರಿ:
ಪ್ರತಿ ಗ್ರಾಮ ಪಂಚಾಯತಿಯಲ್ಲಿ ಕನಿಷ್ಠ 100 ದನದ ಕೊಟ್ಟಿಗೆಗಳನ್ನು ನಿರ್ಮಿಸಲು ಪಶುಸಂಗೋಪನೆ ಇಲಾಖೆಯ ಪಶುವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಈಗಾಗಲೇ ಸೂಚಿಸಲಾಗಿದೆ. ಅರ್ಹ ರೈತರೆಲ್ಲರೂ ದನದ ಕೊಟ್ಟಿಗಳನ್ನು ನಿರ್ಮಿಸಿಕೊಳ್ಳುವಂತೆ ಪ್ರೇರೇಪಿಸಬೇಕು ಮತ್ತು ದನದ ಕೊಟ್ಟಿಗೆಗಳ ನಿರ್ಮಾಣವನ್ನು ಜಿಲ್ಲೆಯಲ್ಲಿ ಅಭಿಯಾನದ ಮಾದರಿಯಲ್ಲಿ ಕೈಗೊಂಡು ಒಂದು ತಿಂಗಳ ಅವಧಿಯಲ್ಲಿ ದನದ ಕೊಟ್ಟಿಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸಬೇಕು ಎಂದು ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ಅವರು ಹೇಳಿದರು.
ನಗರದ ತಾಪಂ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಮೇಸ್ತ್ರಿಗಳಿಗೆ ದನದ ಕೊಟ್ಟಿಗೆ, ಕುರಿ ದೊಡ್ಡಿ ಮತ್ತು ಕೋಳಿ ಶೆಡ್‍ಗಳ ನಿರ್ಮಾಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನರೇಗಾ ಯೋಜನೆಯಲ್ಲಿ ಗ್ರಾಮೀಣ ಪ್ರದೇಶದ ರೈತರಿಗೆ ಅನುಕೂಲವಾಗುವಂತೆ ದನದ ಕೊಟ್ಟಿಗೆ, ಕುರಿ ದೊಡ್ಡಿ ಮತ್ತು ಕೋಳಿ ಶೆಡ್‍ಗಳನ್ನು ತೆಗೆದುಕೊಳ್ಳಲು ಅವಕಾಶ ಇರುವುದರಿಂದ ಜಿಲ್ಲೆಯ ಗ್ರಾಮೀಣ ಪ್ರದೇಶದ ರೈತರಿಗೆ ಅನುಕೂಲವಾಗುತ್ತದೆ ಎನ್ನುವ ಉದ್ದೇಶದಿಂದ ಈ ಸಾಲಿನಲ್ಲಿ 5 ಸಾವಿರ ದನದ ದೊಡ್ಡಿಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ಅವರು ಈ ಮುಂಚೆ ತಿಳಿಸಿದಂತೆ ಗ್ರಾಪಂವಾರು 25 ದನದ ಕೊಟ್ಟಿಗೆಗಳನ್ನು ನಿರ್ಮಿಸುವ ಗುರಿ ಹೊಂದಲಾಗಿತ್ತು. ಆ ಗುರಿಗೆ ತಾವು ಸೀಮಿತರಾಗದೇ ಕನಿಷ್ಠ 100 ದನದ ಕೊಟ್ಟಿಗೆಗಳನ್ನು ನಿರ್ಮಿಸಲು ಮುಂದಾಗಬೇಕು ಎಂದು ಅವರು ಹೇಳಿದರು.
ದನದ ಕೊಟ್ಟಿಗೆಗಳ ನಿರ್ಮಾಣವು ಮನರೇಗಾ ಯೋಜನೆಯ ಮಾರ್ಗಸೂಚಿಗಳಿಗೆ ಅನುಗುಣವಾಗಿ ಆಗಬೇಕಾಗಿರುವುದರಿಂದ ದನದ ಕೊಟ್ಟಿಗೆಗಳ ತಾಂತ್ರಿಕ ವಿನ್ಯಾಸ ಮತ್ತು ನಿರ್ಮಾಣದ ವಿಧಾನದ ಬಗ್ಗೆ ಮೇಸ್ತ್ರಿಗಳಿಗೆ ತರಬೇತಿ ನೀಡಬೇಕಾಗಿರುವ ಅವಶ್ಯಕತೆಯನ್ನು ಮನಗಂಡು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಮೇಸ್ತ್ರಿಗಳಿಗೆ ದನದ ಕೊಟ್ಟಿಗೆ, ಕುರಿ ದೊಡ್ಡಿ ಮತ್ತು ಕೋಳಿ ಶೆಡ್‍ಗಳ ನಿರ್ಮಾಣದ ತರಬೇತಿಗಾಗಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಅವರು ವಿವರಿಸಿದರು.
ಪಶುಸಂಗೋಪನೆ ಇಲಾಖೆಯ ಪಶುವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ಗ್ರಾಮ ಪಂಚಾಯತಿಗಳ ಸಹಯೋಗದೊಂದಿಗೆ ಈಗಾಗಲೇ ದನದ ಕೊಟ್ಟಿಗಳ ನಿರ್ಮಾಣಕ್ಕೆ ಸ್ಥಳವನ್ನು ಗುರುತಿಸಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಜಿಪಂ ಸಿಇಒ ಅವರು ಫಲಾನುಭವಿಗಳಿಗೆ ಅನುಕೂಲವಾಗುವಂತೆ ಜಿಲ್ಲಾ ಪಂಚಾಯತಿಯಿಂದ ಪ್ರಕಟಿಸಲಾದ ದನದ ಕೊಟ್ಟಿಗೆ/ಕುರಿ ದೊಡ್ಡಿ/ಕೋಳಿ ಶೆಡ್ ನಿರ್ಮಾಣದ ಕುರಿತು ಸಾರ್ವಜನಿಕರಿಗಾಗಿ ಮಾಹಿತಿ ಕೈಪಿಡಿ ಹಾಗೂ ಸನ್ಮಾನ್ಯ ಮುಖ್ಯ ಮಂತ್ರಿಯವರ 21 ಅಂಶಗಳ ಸಾರ್ವಜನಿಕರಿಗಾಗಿ ಮಾಹಿತಿ ಕೈಪಿಡಿಯನ್ನು ಬಿಡುಗಡೆ ಮಾಡಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ದನದ ಕೊಟ್ಟಿಗಳ ನಿರ್ಮಾಣಕ್ಕಾರಿ ರೂ.43 ಸಾವಿರ, ಹಾಗೂ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ರೂ.19,625 ಸಹಾಯಧನ ಲಭ್ಯವಿರುತ್ತದೆ. ಆದರೆ ಈ ಸಹಾಯಧನವನ್ನು ನಿಯಮಾನುಸಾರ ದನದ ಕೊಟ್ಟಿಗೆ ಕಟ್ಟಿಸಿಕೊಂಡರೆ ಮಾತ್ರ ನೀಡಲಾಗುತ್ತದೆ. ಅಲ್ಲದೆ ಗ್ರಾಮೀಣ ಪ್ರದೇಶದ ನಾಲ್ಕಾರು ರೈತರು ಸೇರಿ ಮುಂದೆ ಬಂದಲ್ಲಿ ಸಮಯದಾಯ ದನದ ಕೊಟ್ಟಿಗೆಯನ್ನು ನಿರ್ಮಿಸಿಕೊಳ್ಳಲು ಅವಕಾಶವಿದ್ದು ಅದಕ್ಕೆ ರೂ.1.71 ಲಕ್ಷಗಳ ಸಹಾಯಧನ ನೀಡಲಾಗುತ್ತದೆ ಎಂದರು.
ಗ್ರಾಮ ಪಂಚಾಯತಿಗಳು ಮತ್ತು ಪಶುಸಂಗೋಪನೆ ಇಲಾಖೆ ಅಧಿಕಾರಿ, ಸಿಬ್ಬಂದಿಯವರು ಗ್ರಾಮೀಣ ಪ್ರದೇಶದ ರೈತರಿಗೆ ಈ ಕುರಿತು ವ್ಯಾಪಕ ಪ್ರಚಾರ ನೀಡಬೇಕು ಎಂದು ಹೇಳಿದ ಜಿಪಂ ಸಿಇಒ ಅವರು, ಜಿಲ್ಲೆಯಲ್ಲಿ ಈಗಾಗಲೇ ಇಂದು ಇದ್ದಂತೆ 1560 ದನದ ಕೊಟ್ಟಿಗೆಗಳ ನಿರ್ಮಾಣ ಮಾಡಲಾಗಿದೆ ಎಂದರು.
ಈ ಕಾರ್ಯಾಗಾರದಲ್ಲಿ ಜಿಲ್ಲೆಯ 7 ತಾಲ್ಲೂಕುಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ಪಶುಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕರುಗಳು, ಪಶುವೈದ್ಯಾಧಿಕಾರಿಗಳು, ಮನರೇಗಾ ಸಹಾಯಕ ನಿರ್ದೇಶಕರು ಕಾರ್ಯಾಗಾರದಲ್ಲಿ ಪಾಲ್ಗೊಂಡು ಮೇಸ್ತ್ರಿಗಳಿಗೆ ತರಬೇತಿ ನೀಡಿದರು. ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿ ಮಾಹಿತಿ ಪಡೆದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ