ದುರ್ಗದಿಂದಲೇ ಕರ್ನಾಟಕ ಶಾಸನ ಇತಿಹಾಸ ಆರಂಭ

ಚಿತ್ರದುರ್ಗ:

        ಕರ್ನಾಟಕದ ಶಾಸನ ಇತಿಹಾಸ ಆರಂಭವಾಗಿದ್ದೆ ಚಿತ್ರದುರ್ಗ ಇತಿಹಾಸದಿಂದ ಎಂದು ಶಾಸನ ಸಂಶೋಧಕಿ ಹುಬ್ಬಳ್ಳಿಯ ಶ್ರೀಮತಿ ಹನುಮಾಕ್ಷಿ ಗೋಗಿ ಹೇಳಿದರು.

        ಚಿತ್ರದುರ್ಗ ಇತಿಹಾಸ ಕೂಟ ಇತಿಹಾಸ-ಸಂಸ್ಕತಿ-ಸಂಶೋಧನೆಗಳ ವಿಚಾರ ವೇದಿಕೆ ಹಾಗೂ ರೇಣುಕಾ ಪ್ರಕಾಶನ ಸಹಯೋಗದೊಂದಿಗೆ ಐ.ಎಂ.ಎ.ಹಾಲ್‍ನಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ಇತಿಹಾಸಕ್ಕೆ ಅಣ್ಣಿಗೇರಿ ಶಾಸನಗಳ ಕೊಡುಗೆ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು.

          ಚಿತ್ರದುರ್ಗ ಜಿಲ್ಲೆಯಲ್ಲಿ ಬ್ರಹ್ಮಗಿರಿ, ಸಿದ್ದಾಪುರ, ಜಟಂಗಿ ರಾಮೇಶ್ವರ ಶಾಸನಗಳ ಮೂಲಕ ಅಶೋಕನ ಶಾಸನದ ಲಿಖಿತ ಇತಿಹಾಸ ಆರಂಭಗೊಂಡಿತು. ಕ್ರಿ.ಪೂ.3 ರಿಂದ ಹಿಡಿದು ಇಪ್ಪತ್ತನೆ ಶತಮಾನದವರೆಗೆ ಬೆಳೆದು ಬಂದಿರುವ ಇತಿಹಾಸದಿಂದ ಅಶೋಕ ಶಾಸನಗಳಿಗೆ ಮಹತ್ವ ಪ್ರಾಪ್ತಿಯಾಯಿತು. ಬಿ.ಎಲ್.ರೈಸ್ ಇನ್ನು ಮುಂತಾದವರು ಇತಿಹಾಸ ಅಧ್ಯಯನ, ಶಾಸನ ಅಧ್ಯಯನಗಳಿಗೆ ಕೈಹಾಕಿದರು. ದೇಶಿ-ವಿದೇಶಿ ವಿದ್ವಾಂಸರ ಕಾರಣದಿಂದ ಕರ್ನಾಟಕದಾದ್ಯಂತ ಶಾಸನಗಳು ಪ್ರಕಟಗೊಂಡವು ಎಂದು ತಿಳಿಸಿದರು.

         ಇಡಿ ಭಾರತದಲ್ಲಿಯೇ ತಮಿಳುನಾಡಿನಲ್ಲಿ ಅತಿ ಹೆಚ್ಚು 35 ರಿಂದ 40 ಸಾವಿರ ಶಾಸನಗಳು ಪತ್ತೆಯಾಗಿದೆ. ಎರಡನೇ ಸ್ಥಾನ ಕರ್ನಾಟಕದಲ್ಲಿ 25 ಸಾವಿರ ಶಾಸನಗಳು ಪತ್ತೆಯಾಗಿದೆ. ಆದರೂ ಶಾಸನಗಳ ಓದುವಿಕೆ ಆಗುತ್ತಿಲ್ಲ. ತುಂಗಭದ್ರೆಯ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಅತಿ ಹೆಚ್ಚು ಸಂಶೋಧನೆಗಳನ್ನು ನಡೆಸಿರುವ ಬಿ.ಎಲ್.ರೈಸ್ ಎಂಟು ಸಾವಿರ ಶಾಸನಗಳನ್ನು ಪತ್ತೆ ಹಚ್ಚಿ ತೆಗೆದು ಓದಿದ್ದಾರೆ. ಅವರಿಗೆ ಸಹಾಯಕರಾಗಿ ಇನ್ನು ಕೆಲವರು ದುಡಿದಿದ್ದಾರೆ. ಓಂ ನಮಃಶಿವಾಯ ಪಿಳ್ಳೆ ಘನವಾದ ಕಾರ್ಯ ಮಾಡಿದ್ದಾರೆ. ತುಂಗಭದ್ರೆಯ ಉತ್ತರ ಜಿಲ್ಲೆಗಳಲ್ಲಿ ವ್ಯವಸ್ಥಿತ ಕ್ಷೇತ್ರ ಕಾರ್ಯ ನಡೆಯಲಿಲ್ಲ.

          ಭಾರತಕ್ಕೆ ಸ್ವಾತಂತ್ರ ಬಂದ ನಂತರ ಉತ್ತರ ಕರ್ನಾಟಕದ ಕ್ಷೇತ್ರ ಕಾರ್ಯ ನಡೆಯದ ಕಾರಣ ಹಲವಾರು ಶಾಸನಗಳಿಗೆ ಇನ್ನು ಮುಕ್ತಿ ದೊರಕಿಲ್ಲ. ಆದಿಕವಿ ಪಂಪ 1965-66 ರ ಸುಮಾರಿಗೆ ಪರಬ್ರಹ್ಮ ಶಾಸ್ತ್ರಗಳ ಕುರ್ಕಿಯಾಳ ಶಾಸನ ಪ್ರಕಟಿಸಿದ್ದಾರೆ.ಪಂಪ ಪಂಪನ ತಮ್ಮನ ಕುರಿತಾಗಿ ಬರೆಯಲಾಗಿದೆ. ಪಂಪ ಹುಟ್ಟಿದ ಊರು ಅಣ್ಣಿಗೇರಿ ಎಂಬ ತೀರ್ಮಾಣಕ್ಕೆ ಜನ ಬಂದರೂ ಅಣ್ಣಿಗೇರಿಯಲ್ಲಿರುವ ಶಾಸನಗಳು ಪಂಪನ ಕುರಿತಾಗಿ ಏನು ದಾಖಲಿಸುತ್ತವೆ ಎನ್ನುವುದನ್ನು ನೋಡಿದರೆ ಪಂಪ ಅಣ್ಣಿಗೇರಿಯಲ್ಲಿ ಹುಟ್ಟಿಲ್ಲವೆನ್ನುವುದು ಗೊತ್ತಾಗುತ್ತದೆ.

           ರಾಷ್ಟ್ರಕೂಟರಿಗೆ ಸಂಬಂಧಿಸಿದ ವೀರಗಲ್ಲುಗಳು ಅಣ್ಣಿಗೇರಿಯಲ್ಲಿದೆ. ಕಲ್ಯಾಣ ಚಾಲುಕ್ಯರ ಶಾಸನಗಳು ಅಣ್ಣಿಗೇರಿಯಲ್ಲಿ ಹೆಚ್ಚು ಸಿಕ್ಕಿದೆ. ಹನ್ನೊಂದು ಶಾಸನಗಳು ಅಣ್ಣಿಗೇರಿಯಲ್ಲಿ ಸಿಗುತ್ತದೆ. ಅಚ್ಯುತದೇವರಾಯನಿಗೆ ಸಂಬಂಧಿಸಿದ ಒಂದು ಶಾಸನವೂ ಅಣ್ಣಿಗೇರಿಯಲ್ಲಿದೆ. ಗಂಗ ಪೆರುಮಾಳ್ ಬಸದಿ ಅಣ್ಣಿಗೇರಿಯಲ್ಲಿ ಉಳಿದಿರುವ ಏಕೈಕ ಬಸದಿ. ಕರ್ನಾಟಕ ಧರ್ಮ ಸಹಿಷ್ಣುತೆಗೆ ಹೆಸರಾದ ನಾಡು. ಆದರೆ ಇಲ್ಲಿ ಧರ್ಮ ಸಹಿಷ್ಣುತೆ ಇದೆಯೇ ಎನ್ನುವುದನ್ನು ಪ್ರಶ್ನಿಸುವಂತ ಪರಿಸ್ಥಿತಿಯಲ್ಲಿ ನಾವುಗಳೆಲ್ಲರೂ ಇದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ಹಲವಾರು ಧರ್ಮಗಳನ್ನು ಒಳಗೊಂಡಿದೆ.

          ಭಾರತದಲ್ಲಿ ಎಲ್ಲಾ ಧರ್ಮ ಪಂಥಗಳು ಇದೆ. ನಾಡನ್ನಾಳಿದ ಎಲ್ಲಾ ಧರ್ಮಗಳು ಅಣ್ಣಿಗೇರಿಯಲ್ಲಿ ಬರುತ್ತವೆ. ಜೈನರಿಗೆ ಸಂಬಂಧಿಸಿದ ಗುರುಪರಂಪರೆ ಅಣ್ಣಿಗೇರಿಯಲ್ಲಿ ಸಿಗುತ್ತದೆ. ಚಂಡಿಕಾದೇವಿಯ ಆವಾಸ ಸ್ಥಾನವೂ ಇಲ್ಲಿತ್ತು. ಜೈನರು, ಶೈವರು, ಕಾಳಾಮುಖಿಗಳು ಇಲ್ಲಿದ್ದರು ಎನ್ನುವುದನ್ನು ಶಾಸನಗಳು ಹೇಳುತ್ತವೆ. ಶಿಕ್ಷಣ ಕೇಂದ್ರಗಳು ಇದ್ದವು. ಶೈವ ದೇವಾಲಯ, ದಾನ ಮಾಡುವುದು, ಸ್ವೀಕಾರ ಮಾಡುವುದು, ಧಾರ್ಮಿಕ ಅಸಹಿಷ್ಣುತೆ ಕೂಡ ಅಲ್ಲಿತ್ತು ಎಂದು ಅಣ್ಣಿಗೇರಿ ಶಾಸನಗಳ ಕೊಡುಗೆ ಕುರಿತು ಮಾತನಾಡಿದರು.

           ಚಿತ್ರದುರ್ಗ ಇತಿಹಾಸ ಕೂಟದ ಸಂಚಾಲಕ ಡಾ.ಎನ್.ಎಸ್.ಮಹಂತೇಶ್ ಪ್ರಾಸ್ತಾವಿಕವಾಗಿ ಮಾತನಾಡಿ 18-19 ನೇ ಶತಮಾನದಲ್ಲಿ ಸಾವಿರಾರು ಶಾಸನಗಳಿವೆ. ಇಪ್ಪತ್ತನೆ ಶತಮಾನದಲ್ಲಿ ಸ್ಥಳೀಯ ಸಂಶೋಧಕರು ಶಾಸನಗಳಿಗೆ ಪ್ರವೇಶಿಸಿದರು. ಪುರಾತತ್ವ, ಸಾಹಿತ್ಯ, ಚಾರಿತ್ರಿಕ ಸಾಹಿತ್ಯ ಕ್ಷೇತ್ರಕ್ಕೆ ಶಾಸನಗಳನ್ನು ಬಳಸಿಕೊಳ್ಳಲಾಗುತ್ತಿದೆ. ಸುರಪುರ ತಾಲೂಕು ಶಾಸನ, ಕಲ್ಬುರ್ಗಿ ಜಿಲ್ಲೆ ಶಾಸನಗಳು, ಬೀದರ್, ಲಕ್ಕುಂಡಿ, ಹುಬ್ಬಳ್ಳಿ ತಾಲೂಕಿನ ಶಾಸನಗಳು ಪ್ರಮುಖವಾದುವುಗಳು ಎಂದು ಶಾಸನಗಳ ಕುರಿತು ಸಂಕ್ಷಿಪ್ತವಾಗಿ ಪರಿಚಯಿಸಿದರು.

           ಶಾಸನ ಸಂಶೋಧಕಿ ಶ್ರೀಮತಿ ಹನುಮಾಕ್ಷಿ ಗೋಗಿರವರ ಸಂಶೋಧನೆ, ಸಾಹಿತ್ಯ, ಇತಿಹಾಸಕ್ಕೆ ಹಲವಾರು ಪ್ರಶಸ್ತಿಗಳು ದೊರಕಿವೆ. ಸಹಕಾರ ಇಲಾಖೆಯಲ್ಲಿ ಕೆ.ಎ.ಎಸ್.ಅಧಿಕಾರಿಯಾಗಿದ್ದುಕೊಂಡು ಸಾಹಿತ್ಯ ಸಂಶೋಧನೆಗಳ ಬಗ್ಗೆ ಆಸಕ್ತಿ ಮೂಡಿಸಿಕೊಂಡು ಸಾಹಿತ್ಯ, ಶಾಸನ, ಇತಿಹಾಸ, ಪುರಾತತ್ವ ಇಲಾಖೆಯಲ್ಲಿಯೂ ಕೆಲಸ ಮಾಡಿದ್ದಾರೆ. ದಕ್ಷಿಣ ಭಾರತದ ಸಾಹಿತ್ಯ ಕ್ಷೇತ್ರಕ್ಕೆ ಇವರದು ಅಮೂಲ್ಯ ಸೇವೆ ಎಂದು ಗುಣಗಾನ ಮಾಡಿದರು.

           ಚಿತ್ರದುರ್ಗ ಇತಿಹಾಸ ಕೂಟದ ನಿರ್ದೇಶಕ ಪ್ರೊ.ಲಕ್ಷ್ಮಣ್‍ತೆಲಗಾವಿ, ರೇಣುಕ ಶಿವಣ್ಣ, ಸಾಹಿತಿ ಬಿ.ಎಲ್.ವೇಣು, ಮದಕರಿನಾಯಕ ಸಾಂಸ್ಕತಿಕ ಕೇಂದ್ರದ ಡಿ.ಗೋಪಾಲಸ್ವಾಮಿ ನಾಯಕ, ನ್ಯಾಯವಾದಿ ಅಹೋಬಲನಾಯಕ, ರಾಜಾಮದಕರಿನಾಯಕ, ಕೆ.ನಾಗರಾಜ್, ಎಸ್.ಆರ್.ಗುರುನಾಥ್, ಮೃತ್ಯುಂಜಯ ಸೇರಿದಂತೆ ಸ್ನಾತಕೋತ್ತರ ವಿದ್ಯಾರ್ಥಿಗಳು ಉಪನ್ಯಾಸ ಕಾರ್ಯಕ್ರಮದಲ್ಲಿ ಹಾಜರಿದ್ದರು.ಟಿ.ಶ್ರೀಕಾಂತಬಾಬು ನಿರೂಪಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link