ದಾವಣಗೆರೆ:
ಬಾಕಿ ಇರುವ ಶಿಷ್ಯವೇತನಕ್ಕಾಗಿ ಆಗ್ರಹಿಸಿ, ಸರ್ಕಾರಿ ಆಸ್ಪತ್ರೆಗಳ ಕಿರಿಯ ವೈದ್ಯರು ಮತ್ತು ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು ಜಿಲ್ಲಾ ಸಾರ್ವಜನಿಕರ ಆಸ್ಪತ್ರೆಯ ಆವರಣದಲ್ಲಿ ನಡೆಸುತ್ತಿರುವ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಬುಧವಾರ ನಗರಕ್ಕೆ ಆಗಮಿಸಿದ್ದ ಜಿಲ್ಲಾ ವಸ್ತುವಾರಿ ಸಚಿವ ಎಸ್.ಆರ್.ಶ್ರೀನಿವಾಸ್ ಧರಣಿನಿರತ ವೈದ್ಯರನ್ನು ಭೇಟಿ ಮಾಡಿ, ಸಮಸ್ಯೆಯನ್ನು ಆಲಿಸಿದರು.
ಈ ವೇಳೆಯಲ್ಲಿ ಧರಣಿನಿರತ ಕಿರಿಯ ವೈದ್ಯರು ಸಚಿವರಿಗೆ ಮನವಿ ಸಲ್ಲಿಸಿ, ಕಳೆದ ಎಂಟು ತಿಂಗಳಿಂದ ಶಿಷ್ಯ ವೇತನ ಬರುತ್ತಿಲ್ಲ. ಈ ಕುರಿತು ಹಲವಾರು ಬಾರಿ ಮನವಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜವಾಗಿಲ್ಲ. ಶಿಷ್ಯ ವೇತನ ಬಾರದ ಕಾರಣ ಸರ್ಕಾರಿ ಕೋಟಾದಲ್ಲಿ ಸೀಟು ಪಡೆದಿರುವ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗಿದೆ ಎಂದು ಸಚಿವರ ಬಳಿ ಅಲವತ್ತುಕೊಂಡರು.
ನಮ್ಮ ಕುಟುಂಬಗಳು ತೀವ್ರವಾದ ಆರ್ಥಿಕ ತೊಂದರೆ ಅನುಭವಿಸುತ್ತಿದ್ದು, ಇದರಿಂದ ಅನಿವಾರ್ಯವಾಗಿ ಬೀದಿಗಳಿದು ಪ್ರತಿಭಟನೆ ಮಾಡುವಂತಾಗಿದೆ ಎಂದು ತಮ್ಮ ನೋವನ್ನು ತೋಡಿಕೊಂಡರು.
ಸಮಸ್ಯೆ ಆಲಿಸಿ ಮಾತನಾಡಿದ ಉಸ್ತುವಾರಿ ಸಚಿವ ಎಸ್.ಆರ್.ಶ್ರೀನಿವಾಸ್, ರಾಜ್ಯದ ಮಂಗಳೂರಿನ ಕೆಎಂಸಿ ಹಾಗೂ ದಾವಣಗೆರೆಯ ಆಸ್ಪತ್ರೆ ಹೊರತು ಪಡಿಸಿ, ಬೇರೆಲ್ಲೂ ಶಿಷ್ಯವೇತನ ನೀಡಲಾಗುತ್ತಿಲ್ಲ. ಸರ್ಕಾರಿ ಆಸ್ಪತ್ರೆಗಳ ವೈದ್ಯಕೀಯ ಆದಾಯ ಸುಮಾರು 1.5 ಕೋಟಿ ರೂ.ಗಳಷ್ಟು ಬರುತ್ತಿದೆ. ಆದರೆ, ಶಿಷ್ಯ ವೇತನಕ್ಕಾಗಿ ಸುಮಾರು 8ರಿಂದ 10 ಕೋಟಿ ರೂ.ಗಳಷ್ಟು ಖರ್ಚು ಆಗುತ್ತಿದೆ. ಇದು ಸರಕಾರಕ್ಕೆ ಹೊರೆಯಾಗುತ್ತಿದೆ ಎಂದು ಸರ್ಕಾರಿ ಲೆಕ್ಕ ಪರಿಶೋಧನಾ ವರದಿಯಲ್ಲಿ ಆಕ್ಷೇಪ ಬಂದ ಹಿನ್ನಲೆಯಲ್ಲಿ ಶಿಷ್ಯ ವೇತನ ತಡೆಹಿಡಿಯಲಾಗಿದೆ. ಇದಕ್ಕೆ ಸಂಬಂಧಿಸಿದಂದತೆ ವರದಿ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಪ್ರಸ್ತಾಪ ಮಾಡುತ್ತೇನೆ. ಶಿಷ್ಯವೇತನ ಕೊಡಿಸುವ ಕುರಿತು ಮಾನವೀಯತೆ ದೃಷ್ಠಿಯಿಂದ ತಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ನಿಮ್ಮ ಸಮಸ್ಯೆಗಳು, ಮನವಿಗಳು ಸರಕಾರದ ಗಮನಕ್ಕೆ ಬಂದಿದೆ. ಈ ಕುರಿತು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ. ಆದ್ದರಿಂದ ಧರಣಿ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕೆಂದು ಸಚಿವರು ಮನವಿ ಮಾಡಿದರು. ಆದರೆ, ನಮ್ಮ ಬೇಡಿಕೆ ಈಡೇರುವ ವರೆಗೂ ಧರಣಿ ಹಿಂಪಡೆಯುವುದಿಲ್ಲ. ನೀವು ಸಮಸ್ಯೆ ಬಗೆಹರಿಸುವುದಾಗಿ ಬರವಣಿಗೆಯಲ್ಲಿ ಕೊಡಿ ಎಂದು ಪಟ್ಟು ಹಿಡಿದಿದ್ದರ ಪರಿಣಾಮ ಸಚಿವರು ದಾರಿ ತೋಚದಂತಾಗಿ ವಾಪಾಸ್ ತೆರಳಿದರೆ, ಕಿರಿಯ ವೈದ್ಯರು ಧರಣಿ ಸತ್ಯಾಗ್ರಹ ಮುಂದುವರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಗೌತಮ್ ಬಗಾದಿ, ಎಸ್‍ಪಿ ಆರ್.ಚೇತನ್, ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ, ಜಿಲ್ಲಾ ಆಸ್ಪತ್ರೆ ಅಧೀಕ್ಷಕಿ ಡಾ.ನೀಲಾಂಬಿಕೆ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ