ಧಾರ್ಮಿಕ ಕೇಂದ್ರಗಳು ಜಾತ್ಯತೀತ ಸಂಕೇತವಾಗಲಿ

ಬ್ಯಾಡಗಿ:

  ಧರ್ಮಗಳು ನೆಲೆಯೂರಬೇಕಾದಲ್ಲಿ ಧಾರ್ಮಿಕ ಮುಖಂಡರೂ ಸಾಮಾಜಿಕ ನ್ಯಾಯದ ಪರಿಪಾಲನೆ ಅಗತ್ಯವಾಗಿದ್ದು ಸ್ವಧರ್ಮದಲ್ಲಿ ಶ್ರದ್ಧೆ ಹಾಗೂ ಪರಧರ್ಮ ಸಹಿಷ್ಣುಗಳಾದಾಗ ಮಾತ್ರ ಧಾರ್ಮಿಕ ನಂಬಿಕೆಗಳಿಗೆ ಹೆಚ್ಚಿನ ಪ್ರಾಧಾನ್ಯತೆ ದೊರೆಯಲಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅಭಿಪ್ರಾಯ ವ್ಯಕ್ತಪಡಿಸಿದರು.

  ಶ್ರಾವಣ ಮಾಸದ ಅಂಗವಾಗಿ ಪಟ್ಟಣದ ಮುಪ್ಪಿನೇಶ್ವರ ಮಠದ ಆವರಣದಲ್ಲಿ 21 ದಿನಗಳ ಕಾಲ ಸತತವಾಗಿ ನಡೆಯಲಿರುವ “ಶ್ರೀ ಎಡೆಯೂರು ಸಿದ್ಧಲಿಂಗೇಶ್ವರ ಮಹಾತ್ಮೆ’ ಪುರಾಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಧಾರ್ಮಿಕ ಭಾವನೆಗಳಲ್ಲಿ ಕೀಳರಿಮೆ ತೋರುವುದು ಅಪಾಯಕಾರಿ ಬೆಳವಣಿಗೆ ಈ ನಿಟ್ಟಿನಲ್ಲಿ ಧಾರ್ಮಿಕ ಕೇಂದ್ರಗಳು ಜಾತಿ-ಮತ ಬಡವ-ಶ್ರೀಮಂತ ಮೇಲು-ಕೀಳು ಬೇಧವಿಲ್ಲದೇ ಸಮಾಜದಲ್ಲಿ ಜಾತ್ಯಾತೀತ ಮನೋಭಾವನೆ ಮೂಡಿಸುವ ಕಾರ್ಯದಲ್ಲಿ ತೊಡಗಿದಾಗ ಮಾತ್ರ ಅವುಗಳ ಮೇಲೆ ನಂಬಿಕೆ ಬರಲು ಸಾಧ್ಯವಾಗುತ್ತದೆ ಹಾಗೂ ಸಾರ್ವಜನಿಕರಿಂದಲೂ ಸಹ ಮನ್ನಣೆ ಸಿಗಲಿದೆ ಎಂದರು.

   ಪ್ರಸ್ತುತ ದಿನಗಳಲ್ಲಿ ತಂತ್ರಜ್ಞಾನದ ಬೆಳವಣಿಗೆಯಿಂದ ಪುರಾಣ, ಪ್ರವಚನ, ಧಾರ್ಮಿಕ ಕಾರ್ಯಗಳಿಂದ ಜನರು ವಿಮುಖವಾಗುತ್ತಿದ್ದಾರೆ, ದೇವರಲ್ಲಿ ನಂಬಿಕೆ ಹಾಗೂ ಭಕ್ತಿ ಕಡಿಮೆಯಾಗುತ್ತಾ ಸಾಗಿರುವುದು ವಿಷಾದಕರ ಸಂಗತಿ, ಈ ನಿಟ್ಟಿನಲ್ಲಿ ಜನರಲ್ಲಿ ಸಾತ್ವಿಕ ವಿಚಾರಗಳನ್ನು ಹುಟ್ಟು ಹಾಕುವಂತಹ ಧಾರ್ಮಿಕ ಕಾರ್ಯಕ್ರಮಗಳು ಹೆಚ್ಚು ನಡೆಸಬೇಕಿದೆ, ಅದರಲ್ಲೂ ಎಡೆಯೂರು ಸಿದ್ದಲಿಂಗೇಶ್ವರ ಜೀವನ ಚರಿತ್ರೆ ಹಾಗೂ ಪವಾಡಗಳನ್ನು ಕೇಳಿದರೇ ಪ್ರತಿಯೊಬ್ಬರ ಮನದಲ್ಲಿಯೂ ಭಕ್ತಿರಸ ಉಂಟಾಗಲಿದೆ ಎಂದರು.

   ಅವರೊಬ್ಬ ಪವಾಡ ಪುರುಷರು: ಪುರಾಣ ಪ್ರವಚನಗಳೆಂದರೇ ಯಾರೋ ಒಬ್ಬರು ಹೇಳುವಂತಹ ಕಟ್ಟು ಕಥೆಯಲ್ಲ, ಸಿದ್ದಲಿಂಗೇಶ್ವರರು ತಮ್ಮ ದೈವಶಕ್ತಿಯಿಂದ ಕುಷ್ಟರೋಗಿ ಯೊಬ್ಬನಿಗೆ ನೀರು ಬೇಕಾದಾಗ ತಮ್ಮ ಕಾಲುಗಳಿಂದ ಬಂಡೆಗಳನ್ನೇ ಒದ್ದು ನೀರು ತರಿಸಿದಂತಹುದನ್ನು ಅವರ ಪವಾಡಗಳಲ್ಲಿ ಉಲ್ಲೇಖಿಸಲಾಗಿದೆ, ಒಬ್ಬ ವ್ಯಕ್ತಿ ಸನ್ಯಾಸತ್ವ ಸ್ವೀಕರಿಸದ ಬಳಿಕ ತನ್ನಲ್ಲಿರುವ ಭಕ್ತಿಯಿಂದ ದೇವರನ್ನು ಒಲಿಸಿಕೊಂಡಿದ್ದಲ್ಲದೇ ಸಾಕ್ಷಾತ್ ಸ್ವರೂಪನಾಗಿ ಸಮಾಜದಲ್ಲಿ ಜನರ ಸಲುವಾಗಿ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದು ಅವರ ಪವಾಡಗಳನ್ನು ಕೇಳಿದ ಕಿವಿಗಳೇ ಧನ್ಯವಾಗಲಿವೆ ಎಂದರು.

  21 ದಿವಸಗಳ ಕಾಲ ಪುರಾಣ:ಸತತವಾಗಿ 21 ದಿನಗಳ ಕಾಲ ಸಂಜೆ 7 ಗಂಟೆಯಿಂದ ರಾತ್ರಿ 8.30 ರವರೆಗೆ ಹಾವೇರಿ ತಾಲ್ಲೂಕಿನ ಚನ್ನೂರ ಗ್ರಾಮದ ಶಿವಬಸಯ್ಯ ಹಿರೇಮಠ ಅವರಿಂದ ಪುರಾಣ ಕಾರ್ಯಕ್ರಮ ನಡೆಯಲಿದೆ.. ಮುಪ್ಪಿನೇಶ್ವರ ಮಠದ ಚನ್ನಮಲ್ಲಿಕಾರ್ಜುನಶ್ರೀಗಳು ಸಾನಿಧ್ಯ ವಹಿಸಿದ್ದರು, ಜಯದೇವಪ್ಪ ಕಬ್ಬೂರ ಅಧ್ಯಕ್ಷತೆ ವಹಿಸಿದ್ದರು, ಪುರಸಭೆ ಸದಸ್ಯರಾದ ಮುರಿಗೆಪ್ಪ ಶೆಟ್ಟರ, ಪ್ರಶಾಂತ್ ಯಾದ್ವಾಡ, ಕೆಸಿಸಿ ಬ್ಯಾಂಕ್ ನಿರ್ದೇಶಕ ಚಂದ್ರಣ್ಣ ಶೆಟ್ಟರ, ಎಪಿಎಂಸಿ ಮಾಜಿ ನಿರ್ದೇಶಕ ರವೀಂದ್ರ ಪಟ್ಟಣಶೆಟ್ಟಿ, ಸಿದ್ದಲಿಂಗಪ್ಪ ಕಬ್ಬೂರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link