ಬೆಂಗಳೂರು:
ನಕಲಿ ಪಾಸ್‍ಪೊರ್ಟ್ ಬಳಸಿ ದುಬೈಗೆ ಪರಾರಿಯಾಗಲು ಯತ್ನಿಸುತ್ತಿದ್ದ ಮೂವರು ಬಾಂಗ್ಲಾ ಪ್ರಜೆಗಳನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.
ಕೋಡಿಪಾಳ್ಯದ ಸುಹೇಲ್ (21), ಗುರಪ್ಪನಪಾಳ್ಯದ ಅಲ್ಲಾವುದ್ದೀನ್ ಖಾಜಿ (34) ಹಾಗೂ ಅಬುಲ್ ಹಸನ್ (26) ಬಂಧಿತ ಆರೋಪಿಗಳಾಗಿದ್ದು ಇವರಿಂದ ಪಾಸ್ ಪೋರ್ಟ್ ಇನ್ನಿತರ ನಕಲಿ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಕಲಾ ಕೃಷ್ಣಸ್ವಾಮಿ ತಿಳಿಸಿದ್ದಾರೆ.
ಬಾಂಗ್ಲಾ ದೇಶದಿಂದ ನಗರಕ್ಕೆ ವಲಸೆ ಬಂದಿದ್ದ ಈ ಮೂವರೂ ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದರು. ಸುಹೇಲ್ ಖಾಸಗಿ ಕಂಪನಿಯಲ್ಲಿ ಸ್ವಚ್ಛತಾ ಕೆಲಸ ಮಾಡುತ್ತಿದ್ದರೆ, ಗುರಪ್ಪನಪಾಳ್ಯದಲ್ಲಿ ಪ್ಲಂಬರ್ ಕೆಲಸ ಮಾಡುತ್ತಿದ್ದ ಅಲ್ಲಾವುದ್ದೀನ್ ಖಾಜಿ ಹಾಗೂ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ಅಬುಲ್ ಹಸನ್, ನಕಲಿ ಪಾಸ್ ಪೋರ್ಟ್ ಮಾಡಿಕೊಂಡು ದುಬೈಗೆ ಹೋಗಲು ಯತ್ನಿಸುತ್ತಿದ್ದಾಗ ವಲಸೆ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ.
ಮೂವರನ್ನು ವಶಕ್ಕೆ ಪಡೆದುಕೊಂಡಿರುವ ವಲಸೆ ಅಧಿಕಾರಿಗಳು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರಿಗೆ ಒಪ್ಪಿಸಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಮಾದಕ ಮಾತ್ರೆ ಮಾರಾಟ
ಮಾದಕ ವಸ್ತುವಿನ ಮಾತ್ರೆಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾಣ ನಿಲ್ದಾಣ ಪೊಲೀಸರು ಬಂಧಿಸಿದ್ದಾರೆ.
ಬಾಂಗ್ಲಾದೇಶ ಮೂಲದ ಸುಮನ್ ಶೇಖ್ (28) ಬಂಧಿತ ಆರೋಪಿಯಾಗಿದ್ದಾನೆ,ಮಾಧಕ ವಸ್ತು ಒಳಗೊಂಡ ಮಾತ್ರೆಗಳನ್ನು ಬಾಂಗ್ಲಾದೇಶದಿಂದ ಕೋಲ್ಕತ್ತಾ ಮುಖಾಂತರ ಬೆಂಗಳೂರಿಗೆ ತಂದು ಮಾರುತ್ತಿದ್ದ.
ಪ್ರತಿಷ್ಠಿತ ಕಾಲೇಜುಗಳು ಯುವಕ- ಯುವತಿಯರು ಸೇರಿದಂತೆ ಐಟಿಬಿಟಿ ಉದ್ಯೋಗಿಗಳಿಗೆ ಮಾತ್ರೆ ರೂಪದ ಡ್ರಗ್ಸ್ ನೀಡುತ್ತಿದ್ದ. ಇದನ್ನು ಸೇವಿಸಿದ 16 ಗಂಟೆಗಳ ಕಾಲ ಫುಲ್ ಕಿಕ್ಕೇರುವ ಮಾದಕ ಮಾತ್ರೆ ಇದಾಗಿದೆ ಎನ್ನುವ ಅಂಶ ಬೆಳಕಿಗೆ ಬಂದಿದೆ. ಈ ಒಂದು ಡ್ರಗ್ಸ್ ಮಾತ್ರೆಗೆ 500 ರೂ. ಚಾರ್ಜ್ ಮಾಡುತ್ತಿದ್ದ.
ಕೆಐಎಎಲ್ ಪೊಲೀಸರು ಕಾರ್ಯಾಚರಣೆ ನಡೆಸಿ ಖತರ್ನಾಕ್ ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ 50 ಸಾವಿರ ಮೌಲ್ಯದ ಮಾತ್ರೆಗಳ ರೂಪದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾಣ ನಿಲ್ದಾಣ ಪೊಲೀಸರು ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








