ನಗರದಲ್ಲಿ ವರಮಹಾಲಕ್ಷ್ಮಿಹಬ್ಬದ ಸಂಭ್ರಮ

ತುಮಕೂರು:

              ವರಮಹಾಲಕ್ಷ್ಮಿ ಹಬ್ಬವನ್ನು ಸಾಂಪ್ರದಾಯಿಕವಾಗಿ ಅಲ್ಲಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ನಗರದ ಬಹುತೇಕ ಮನೆಗಳಲ್ಲಿ ಗುರುವಾರ ರಾತ್ರಿಯಿಂದಲೇ ಲಕ್ಷ್ಮೀಪೂಜೆಗೆ ಏರ್ಪಾಟುಗಳನ್ನು ಮಾಡಿಕೊಂಡಿದ್ದರು. ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಹಬ್ಬದ ಆಚರಣೆ ಜೋರಾಗಿಯೇ ನಡೆಯಿತು.

               ಶ್ರಾವಣ ಮಾಸದ ಆರಂಭದ ದಿನಗಳಲ್ಲಿ ಬರುವ ಈ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಹಿಂದಿನ ದಿನಗಳಲ್ಲಿ ಕೆಲವೇ ವರ್ಗಕ್ಕೆ ಸೀಮಿತವಾಗಿದ್ದ ಈ ಹಬ್ಬ ಕ್ರಮೇಣ ಎಲ್ಲ ವರ್ಗದವರನ್ನೂ ವ್ಯಾಪಿಸಿಕೊಂಡಿತು. ಹಬ್ಬದ ಹಿಂದಿನ ದಿನವೆ ಹೂವು ಮತ್ತು ಹಣ್ಣಿನ ಖರೀದಿಯ ಭರಾಟೆ ಜೋರಾಗಿಯೇ ನಡೆಯಿತು.

                ಶುಕ್ರವಾರ ಬೆಳಗಿನಿಂದಲೇ ಮಹಿಳೆಯರು ಹಬ್ಬದ ಸಡಗರದಲ್ಲಿ ಮುಳುಗಿ ಹೋಗಿದ್ದರು. ಕೆಲಸ ಕಾರ್ಯಗಳಿಗೆ ಹೋಗಬೇಕಿದ್ದ ಮಹಿಳೆಯರು ರಜೆ ಹಾಕಿ ಮನೆಯಲ್ಲಿ ಹಬ್ಬದ ಸಂಭ್ರಮದಲ್ಲಿ ತೊಡಗಿದ್ದರು. ಬೆಳಗ್ಗೆ ವರಮಹಾಲಕ್ಷ್ಮಿ ಪೂಜೆ ನಡೆದರೆ ಸಂಜೆಯ ವೇಳೆಗೆ ಮನೆ ಮನೆಗಳಿಗೆ ತೆರಳಿ ಪೂಜೆ ಸಲ್ಲಿಸುವ, ಅರಿಶಿನ ಕುಂಕುಮ ನೀಡುವ ಸಂಪ್ರದಾಯ ಎಂದಿನಂತೆ ನಡೆಯಿತು.

                 ಕೆಲವು ಮನೆಗಳಲ್ಲಿ ಲಕ್ಷ್ಮಿಯನ್ನು ಸಾಧಾರಣವಾಗಿ ಪೂಜಿಸಿದರೆ ಮತ್ತೆ ಕೆಲವು ಮನೆಗಳಲ್ಲಿ ವೈಭವಯುತವಾಗಿ ಚಿನ್ನಾಭರಣದೊಂದಿಗೆ ಲಕ್ಷ್ಮಿದೇವಿಯನ್ನು ಪೂಜಿಸಲಾಗಿತ್ತು. ನೋಟುಗಳ ಜೊತೆ ಚಿಲ್ಲರೆ ಹಣವನ್ನು ದೇವಿಯ ಮುಂದಿಟ್ಟು ಪೂಜಿಸುತ್ತಿದ್ದ ದೃಶ್ಯ ಕಂಡುಬಂದಿತು. ಅವರವರ ಶಕ್ತಾನುಸಾರ ದೇವಿಯ ಪೂಜೆ , ಹೂವಿನ ಅಲಂಕಾರಗಳು ಇತ್ಯಾದಿ ನಡೆದವು.

                 ನಗರದ ಲಕ್ಷ್ಮೀ ದೇವಾಲಯಗಳಲ್ಲಿ ಬೆಳಗಿನಿಂದಲೇ ವಿಶೇಷ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮಗಳು ಏರ್ಪಾಟಾಗಿದ್ದವು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಈ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದರು. ದಂಪತಿಗಳ ಸಮೇತ, ಕುಟುಂಬ ಸಮೇತ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದ ದೃಶ್ಯಗಳು ಕಂಡುಬಂದವು.

                 ಎಪಿಎಂಸಿ ಯಾರ್ಡ್ ಎದುರಿನ ಮಹಾಲಕ್ಷ್ಮಿನಗರದ ಶ್ರೀ ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ವರ ಮಹಾಲಕ್ಷ್ಮಿ ವ್ರತದ ಪ್ರಯುಕ್ತ ಶ್ರೀ ಮಹಾಲಕ್ಷ್ಮಿ ಅಮ್ಮನವರಿಗೆ ವಿಶೇಷ ಪೂಜೆ, ಅಲಂಕಾರ ಏರ್ಪಡಿಸಲಾಗಿತ್ತು. ದೇವರ ದರ್ಶನಕ್ಕೆ ಬಂದ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.

                  ಬಿ.ಎಚ್.ರಸ್ತೆಯಲ್ಲಿರುವ ಟಿ.ಜಿ.ಎಂ.ಸಿ. ಬ್ಯಾಂಕ್ ಆವರಣದಲ್ಲಿನ ಶ್ರೀ ಮಹಾಲಕ್ಷ್ಮಿ ದೇವಿ ಸನ್ನಿಧಿಯಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಯಿತು. ಸಾಕಷ್ಟು ಸಂಖ್ಯೆಯಲ್ಲಿ ಭಕ್ತಾದಿಗಳು ಅಲ್ಲಿಗೆ ಭೇಟಿ ನೀಡಿದ್ದರು. ಅದೇ ರೀತಿ ಶ್ರೀರಾಮನಗರದ ಶ್ರೀ ಲಕ್ಷ್ಮಿ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಮಹಾಲಕ್ಷ್ಮಿ ದೇವಿಗೆ ಪೂಜೆ, ಅಲಂಕಾರಗಳು ನಡೆದವು. ಕೆಲವು ಕಡೆಗಳಲ್ಲಿ ಬಂದ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.

                 ಕೊರಟಗೆರೆ ತಾಲ್ಲೂಕು ಗೊರವನಹಳ್ಳಿ ಶ್ರೀ ಮಹಾಲಕ್ಷ್ಮಿ ಸನ್ನಿಧಿಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡಿದ್ದರು. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ದೇವಾಲಯದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ದೇವಿಯನ್ನು ಅಲಂಕರಿಸಿ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು.

Recent Articles

spot_img

Related Stories

Share via
Copy link
Powered by Social Snap