ತುಮಕೂರು
“ಏಳೂವರೆ ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಪಾಲಿಕೆಯ 34 ಜನರಿಗೆ `ಉಂಗುರಭಾಗ್ಯ’ ಲಭಿಸಿದೆಯಂತೆ!” -ಹೀಗೊಂದು ವದಂತಿ ತುಮಕೂರು ಮಹಾನಗರ ಪಾಲಿಕೆ ಕಚೇರಿಯ ಒಳಗೆ ಮತ್ತು ಹೊರಗೆ ಇದೀಗ ರೆಕ್ಕೆಪುಕ್ಕ ಕಟ್ಟಿಕೊಂಡು ಹಬ್ಬಿದ್ದು, ಸಾರ್ವಜನಿಕರು ಮತ್ತು ಹೋರಾಟಗಾರರ ವಲಯದಲ್ಲಿ ಕೌತುಕದ ಚರ್ಚೆಗೆ ಎಡೆಮಾಡಿಕೊಟ್ಟಿದೆ.
ವದಂತಿ ಪ್ರಕಾರ, ಇದೇ ವರ್ಷದ ಮಾರ್ಚ್ ತಿಂಗಳಿನಲ್ಲಿ `ಉಂಗುರ ಭಾಗ್ಯ’ ಲಭಿಸಿದೆ. 34 ಜನರು ತುಟಿಕ್ ಪಿಟಿಕ್ ಅನ್ನದೆ, ಯಾರಿಗೂ ಗೊತ್ತಾಗದಂತೆ ತಲಾ 25,000 ರೂ. ಮೌಲ್ಯದ “ಚಿನ್ನದ ಉಂಗುರದ ಫಲಾನುಭವಿ”ಗಳಾಗಿಬಿಟ್ಟಿದ್ದಾರೆಂದು ಹೇಳಲಾಗುತ್ತಿದೆ.
`ಹಿರೀಕರು’ ಹಾಕಿದ ಸ್ಕೆಚ್!
ಇದು ಹೇಗೆ ಸಾದ್ಯವಾಯಿತೆಂಬುದನ್ನೂ ಅಷ್ಟೇ ಸ್ವಾರಸ್ಯವಾಗಿ ಬಣ್ಣಿಸಲಾಗುತ್ತಿದೆ. “ಅದೇನು ಕಷ್ಟ ಬಿಡಿ ಸಾರ್… ಇಂಥ ವಿಚಾರಗಳಲ್ಲಿ `ಪಳಗಿದವರು’ ಕೆಲವರಿದ್ದಾರೆ. `ಅನುಭವಿ ಹಿರೀಕರೂ’ ಇದ್ದಾರೆ. ಅವರಿಗೆ ಬೇರೇನು ಕೆಲಸವಿರುತ್ತದೆ? ಎಲ್ಲ್ಲಿಗೆ ಹೊಡೆದರೆ ಎಲ್ಲಿಗೆ ಏಟು ಬೀಳುತ್ತದೆಂಬುದು ಅವರಿಗೆ ಗೊತ್ತಿರುತ್ತೆ. ಅಂಥವರು ಕುಳಿತು ಸ್ಕೆಚ್ ಹಾಕುತ್ತಾರೆ. ಅದರ ಫಲ ಮಾರ್ಚ್ ತಿಂಗಳಿನಲ್ಲಿ 34 ಜನರಿಗೆ ದೊರೆತಿದೆ” ಎಂದು ಮುಸಿ-ಮುಸಿ ನಗುತ್ತ ಗೇಲಿ ಮಾಡಲಾಗುತ್ತಿದೆ.
ಸರ್ವರಿಗೂ ಸಮಪಾಲು!
`ಮಾರ್ಚ್ ತಿಂಗಳಿನಲ್ಲಿ ಗುತ್ತಿಗೆದಾರರೊಬ್ಬರಿಗೆ ಸಂಬಂಧಿಸಿದಂತೆ ಪಾಲಿಕೆಯಲ್ಲಿ ದೊಡ್ಡ ಮೊತ್ತದ ಒಂದು ಬಿಲ್ ಪಾಸ್ ಮಾಡಲಾಯಿ ತಂತೆ. ಇಂತಹ ಸಂದರ್ಭಕ್ಕೆಂದೇ ಹೊಂಚು ಹಾಕಿದ್ದ “ಹಿರೀಕರು“ ಸದ್ದಿಲ್ಲದಂತೆ ಒಂದು ಸ್ಕೆಚ್ ಹಾಕಿದ್ದಾರೆ. `ತಂಡ’ ರಚಿಸಿಕೊಂಡು ನೇರವಾಗಿ ಒಂದು ಜ್ಯುಯಲರಿ ಮಳಿಗೆಗೆ ತೆರಳಿದ್ದಾರೆ. ಅಲ್ಲಿ 25,000 ರೂ. ಮೌಲ್ಯದ ಚಿನ್ನದ ಉಂಗುರವನ್ನು ಸೆಲೆಕ್ಟ್ ಮಾಡಿದ್ದಾರೆ.
ಎಲ್ಲ 34 ಜನರಿಗೂ ಒಂದೊಂದು ಚಿನ್ನದ ಉಂಗುರ ವಿತರಣೆಗೆ ಏರ್ಪಾಟು ಮಾಡಿದ್ದಾರೆ. ಒಟ್ಟಾರೆ ಏಳೂವರೆ ಲಕ್ಷ ರೂ. ಬಿಲ್ ಮೊತ್ತವನ್ನು ಸದರಿ ಗುತ್ತಿಗೆದಾರರಿಂದ ಪಡೆದುಕೊಳ್ಳುವಂತೆ ಜ್ಯುಯಲರಿ ಅಂಗಡಿ ಮಾಲೀಕರಿಗೆ ತಾಕೀತು ಮಾಡಿ ಗುತ್ತಿಗೆದಾರರ ವಿಳಾಸ, ಪೆÇೀನ್ ನಂಬರ್ ಇತ್ಯಾದಿ ನೀಡಿದ್ದಾರೆ. ಬಳಿಕ ಎಲ್ಲ 34 ಜನರೂ ಯಾವುದೇ ಭೇದ ಭಾವವಿಲ್ಲದಂತೆ, ಸದ್ದುಗದ್ದಲವಿಲ್ಲದಂತೆ ಖುಷಿಯಿಂದ `ಉಂಗುರ ಧಾರಿ’ಗಳಾಗಿದ್ದಾರೆ.
ಇತ್ತ ಜ್ಯುಯಲರಿ ಅಂಗಡಿ ಮಾಲೀಕರು ಸದರಿ ಗುತ್ತಿಗೆದಾರರಿಗೆ ಫೋನ್ ಮಾಡಿ ವಿಷಯ ತಿಳಿಸಿದಾಗ ಆ ಗುತ್ತಿಗೆದಾರರು `ಹೌದಾ’ ಎಂದು ಬೆಚ್ಚಿಬಿದ್ದಿದ್ದಾರೆ. ಆದರೆ ಪಾಲಿಕೆ ಕಚೇರಿಯಲ್ಲಿ ಅವರ ಬಿಲ್ ಸುಗಮವಾಗಿ, ಸುಸೂತ್ರವಾಗಿ ಪಾಸ್ ಆಗಬೇಕಾದರೆ ಈ ಬೇಡಿಕೆಗೆ ತಲೆದೂಗುವುದು ಅನಿವಾರ್ಯವೆಂಬುದನ್ನು ಅರಿತು, `ಆಯಿತು, ಉಂಗುರದ ಮೊತ್ತ ಕೊಡುತ್ತೇನೆ’ ಎಂದು `Àರವಸೆ ಕೊಟ್ಟಿದ್ದಾರೆ” ಎಂಬ ವದಂತಿ ವರ್ಣರಂಜಿತವಾಗಿ ಪಾಲಿಕೆಯಲ್ಲಿ ಕಿವಿಯಿಂದ ಕಿವಿಗೆ ಹರಡಿಬಿಟ್ಟಿದೆ.
ಆಹಾ….ಪಾಲಿಕೆಯ ಈ 34 ಜನರಲ್ಲಿ ಎಂತಹ ಐಕ್ಯಮತ್ಯ! `ಸರ್ವರಿಗೂ ಸಮಪಾಲು’ ತತ್ವವನ್ನು ಎಷ್ಟು ಚೆನ್ನಾಗಿ ಜಾರಿಗೆ ತಂದಿದ್ದಾರೆ” ಎಂದು ಕೆಲವರು ಮುಸಿ-ಮುಸಿ ನಗುತ್ತ ಮೂದಲಿಸುತ್ತಿದ್ದಾರೆ.
ಕೊಟ್ರು… ಇಸ್ಕೊಂಡೆ!
ಹೆಸರು ಬಹಿರಂಗಪಡಿಸಲಿಚ್ಛಿಸದ ಒಬ್ಬ ಫಲಾನು ಭವಿಯಂತೂ “ನಾನಂತೂ ಏನನ್ನೂ ಕೇಳಲಿಲ್ಲ… ನನಗೂ ಉಂಗುರ ಕೊಟ್ರು … ನಾನು ಇಸ್ಕೊಂಡೆ ಅಷ್ಟೇ” ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆಂಬುದು ಸಹ ಈಗ ಗುಟ್ಟಾಗಿ ಉಳಿದಿಲ್ಲ.