ಚಿತ್ರದುರ್ಗ;
ನಾನು ಎಂದಿಗೂ ಪಕ್ಷ ರಾಜಕಾರಣ ಮಾಡಿಲ್ಲ, ಜಾತಿ ರಾಜಕಾರಣಕ್ಕೂ ಬೆಂಬಲಿಸಿಲ್ಲ, ನನ್ನದೇನಿದ್ದರೂ ಒಟ್ಟಾರೆ ನಗರಾಭಿವೃದ್ದಿಯ ಬಗೆಗಿನ ಬದ್ಧತೆಯ ರಾಜಕಾರಣ. ಚುನಾವಣೆಯ ವೇಳೆ ಅಷ್ಟೇ ಪಕ್ಷ ರಾಜಕೀಯ. ಗೆದ್ದ ಬಳಿಕ ಎಲ್ಲರೊಟ್ಟಿಗೆ ಕೈ ಜೋಡಿಸಿ ಅಭಿವೃದ್ದಿಗೆ ಸಂಕಲ್ಪ ಮಾಡಬೇಕು. ಇದು ಒಬ್ಬ ಚುನಾಯಿತ ಪ್ರತಿನಿಧಿಗೆ ಇರಬೇಕಾದ ಬದ್ದತೆ…
ಇದು ಚಿತ್ರದುರ್ಗ ನಗರಸಭೆಯ 23ನೇ ವಾರ್ಡಿನ ಕಾಂಗ್ರೆಸ್ ಅಭ್ಯರ್ಥಿ, ಹಾಲಿ ಹಿರಿಯ ಸದಸ್ಯರಾಗಿರುವ ಮಹಮದ್ ಅಹಮದ್ ಪಾಷ ( ಸರ್ದಾರ್) ಅವರ ಪ್ರತಿಪಾದನೆ.
ಮಹಮದ್ ಅಹಮದ್ ಪಾಷ ಕಾಂಗ್ರೆಸ್ಸಿನ ಹಿರಿಯ ಮುಖಂಡರು. ನಗರಸಭೆಯ ಹಿರಿಯ ಸದಸ್ಯರೂ ಆಗಿರುವ ಅವರು ಇದುವರೆಗಿನ ಎಲ್ಲಾ ಚುನಾವಣೆಯಲ್ಲಿ ಗೆದ್ದು ಸೋಲಿಲ್ಲದ ಸರದಾರ ಎಂದೇ ಖ್ಯಾತಿಗಳಿಸಿದವರು. ಸರ್ದಾರ್ ಹೆಸರಿನಿಂದಲೇ ಹೆಚ್ಚು ಜನಪ್ರೀಯರಾಗಿದ್ದು, ಒಟ್ಟು ನಾಲ್ಕು ಬಾರಿ ಗೆದ್ದಿದ್ದಾರೆ. ಇದೀಗ ಐದನೇ ಬಾರಿಗೆ ಮತ್ತೆ ಕಾಂಗ್ರೆಸ್‍ನಿಂದಲೇ 23ನೇ ವಾರ್ಡಿನ ಅಭ್ಯರ್ಥಿಯಾಗಿ ಅಖಾಡಕ್ಕಿಳಿದಿದ್ದಾರೆ.
ಚಿತ್ರದುರ್ಗ ನಗರಸಭೆಯಲ್ಲಿ ಸಂಭವಿಸುವ ರಾಜಕೀಯ ಘಟಾವಳಿಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಸಾಮಥ್ರ್ಯ ಅವರಲ್ಲಿದೆ. ಹೀಗಾಗಿಯೇ ಸದಸ್ಯರು ಪಕ್ಷ ಬೇಧ ಮರೆತು ಸರ್ದಾರ್ ಅವರ ಮಾತುಗಳಿಗೆ ಹೆಚ್ಚು ಮನ್ನಣೆ ನೀಡುತ್ತಾರೆ. ನಗರಸಭೆಯ ಸಾಮಾನ್ಯ ಸಭೆಗಳಲ್ಲಿ ಎದ್ದು ನಿಂತರೆ ಎಲ್ಲರೂ ಮೌನಕ್ಕೆ ಶರಣಾಗುತ್ತಾರೆ. ಮಹಮದ್ ಅಹಮದ್ ಪಾಷ ( ಸರ್ದಾರ್) ಖಡಕ್ ಮಾತುಗಾರರೂ ಹೌದು.
ಸರ್ದಾರ್ ಅವರು ಒಂದು ರೀತಿಯ ಸೌಮ್ಯ ಸ್ವಭಾವದವರು. ಎಲ್ಲರೊಂದಿಗೂ ಬೆರೆಯುವ ವ್ಯಕ್ತಿತ್ವ ಬೆಳೆಸಿಕೊಂಡಿದ್ದು, ಸದಾ ಜನರ ಜೊತೆಯೇ ಇದ್ದು ಬೆಳೆದವರು. ಅವರ ಜನಪರ ಕಾಳಜಿಯನ್ನು ಎಲ್ಲರೂ ಮೆಚ್ಚುವಂತದ್ದು. ನೊಂದವರು, ಸಂಕಷ್ಟದಲ್ಲಿರುವವರು, ಬಡವರಿಗೆ ಸಾಕಷ್ಟು ನೆರವಾಗಿದ್ದಾರೆ.
ಚಿತ್ರದುರ್ಗ ನಗರದ ಅಭಿವೃದ್ದಿ ವಿಚಾರದಲ್ಲೂ ಸಾಕಷ್ಟು ಕಾಳಜಿ ಮತ್ತು ಬದ್ಧತೆಯನ್ನು ಪ್ರದರ್ಶಿಸಿದ ಉದಾಹರಣೆಗಳೂ ಇವೆ. ಸದಸ್ಯರಾಗಿ ಮತ್ತು ಅಧ್ಯಕ್ಷರಾಗಿಯೂ ಉತ್ತಮ ಕಾರ್ಯನಿರ್ವಹಿಸಿದ್ದಾರೆ. ಇದುವರೆಗೂ ತಾವು ಪ್ರತಿನಿಧಿಸಿದ ವಾರ್ಡ್‍ಗಳಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಕುಡಿಯುವ ನೀರು, ಚರಂಡಿ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆಯ ಜೊತೆಗೆ ಅಗತ್ಯವಾಗಿರುವ ಮೂಲಭೂತ ಸೌಲಬ್ಯಗಳನ್ನು ಸಮರ್ಪಕವಾಗಿ ಕಲ್ಪಿಸಿಕೊಟ್ಟಿದ್ದಾರೆ.
ಈಗ ಚಿತ್ರದುರ್ಗ ನಗರಸಭೆಯ 23ನೇ ವಾರ್ಡಿನಲ್ಲಿ ಸ್ಪರ್ದಿಸಿದ್ದು, ಕಾರ್ಯಕರ್ತರು ಮುಖಂಡರ ಜೊತೆಗೆ ಮನೆ ಮನೆಗೆ ತೆರಳಿ ಬಿರುಸಿನ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಪ್ರಚಾರದ ಮದ್ಯೆಯೇ ಪತ್ರಿಕೆಯೊಂದಿಗೆ ತಮ್ಮ ಮುಂದಿನ ಗುರಿ ಮತ್ತು ಅಭಿವೃದ್ದಿಯ ವಿಚಾರಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.
ಈ ಬಾರಿಯ ಚುನಾವಣೆ ಹೇಗೆ ಎದುರಿಸುತ್ತೀರಿ ?
ನನ್ನ ವಾರ್ಡಿನಲ್ಲಿ ಚುನಾವಣೆ ಎದುರಿಸಲು ಯಾವುದೇ ಸಮಸ್ಯೆಯಾಗದು. ಪ್ರತಿ ಮನೆಯ ಮತದಾರರೂ ತಮಗೆ ಮುಖಪರಿಚವಿದ್ದಾರೆ. ನಾನೂ ಇದೇ ವಾರ್ಡಿನಲ್ಲಿ ವಾಸವಿದ್ದು, ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲ ಇಲ್ಲಿಯೇ ವಾಸವಿದ್ದೇನೆ. ಈ ಕಾರಣಕ್ಕಾಗಿ ಹೆಚ್ಚು ರಿಸ್ಕ್ ತೆಗೆದುಕೊಳ್ಳುವ ಅವಶ್ಯಕತೆ ಕಾಣುತ್ತಿಲ್ಲ.
ವಾರ್ಡಿನಲ್ಲಿ ಎಲ್ಲಾ ಜಾತಿ, ಧರ್ಮಗಳ ಜನರೂ ವಾಸವಿದ್ದಾರೆ. ನಾನು ಸುಮಾರು 50 ವರ್ಷಗಳಿಂದ ಎಲ್ಲಾ ಧರ್ಮದವರ ಜೊತೆಯೇ ಒಡನಾಟ ಬೆಳೆಸಿಕೊಂಡು ಬೆಳೆದವನು. ನನ್ನನ್ನು ಎಲ್ಲರೂ ಗೌರವಿಸುತ್ತಾರೆ. ಆ ಗೌರವವನ್ನು ಉಳಿಸಿಕೊಂಡು ಬಂದಿದ್ದೇನೆ.
ಕಳೆದ ಒಂದು ವಾರದಿಂದ ಪ್ರತಿ ಮನೆ ಮನೆಗೆ ಬೇಟಿ ನೀಡಿ ಪ್ರಚಾರ ಮಾಡುತ್ತಿದ್ದೇನೆ. ಎಲ್ಲಾ ಬೀದಿ, ರಸ್ತೆಗಳ ವ್ಯಾಪಾರಿಗಳು, ದೊಡ್ಡ ದೊಡ್ಡ ಉದ್ಯಮಿಗಳು, ಸರ್ಕಾರಿ ಮತ್ತು ಖಾಸಗಿ ಕಂಪೆನಿಗಳ ನೌಕರರು ಸೇರಿದಂತೆ ಎಲ್ಲಾ ವರ್ಗದ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ವಾರ್ಡಿನ ಮತದಾರರಿಗೆ ನಿಮ್ಮ ಭರವಸೆಗಳೇನು ?
ವಾರ್ಡಿನ ಜನರಿಗೆ ವಿಶೇಷ ಭರವಸೆಗಳನ್ನು ಕೊಡುವುದೇನೂ ಇಲ್ಲ. ಜನರಿಗೆ ನನ್ನ ಬಗ್ಗೆ ಗೊತ್ತಿದೆ. ಕೆಲಸ ಮಾಡುತ್ತಾರೆಂಬ ವಿಶ್ವಾಸ, ನಂಬಿಕೆ ಇದೆ. ದಶಕಗಳ ಕಾಲ ರಾಜಕೀಯ ಮಾಡಿದ್ದೇನೆ. ಜನರ ಕಷ್ಟ ಸುಖಗಳಿಗೆ ಸ್ಪಂದಿಸಿದ್ದೇನೆ.
ಬಡವರು ಯಾರೇ ಬರಲಿ ಅವರಿಗೆ ನನ್ನಿಂದ ಸಾಧ್ಯವಾದಷ್ಟು ಸಹಾಯವಾಗಿದೆ ವೈಯಕ್ತಿಕವಾಗಿಯೂ ಎಲ್ಲಾ ವರ್ಗದ ಜನರಿಗೂ ಸಹಾಯ ಮಾಡಿದ್ದೇನೆ. ವಾರ್ಡಿನಲ್ಲಿ ಜನರಿಗೆ ಬೇಕಾಗಿರುವ ಕುಡಿಯುವ ನೀರು, ರಸ್ತೆ, ಬೀದಿ ದೀಪಗಳ ನಿರ್ವಹಣೆ, ಸ್ವಚ್ಚತೆ ಮುಂತಾದ ನಾಗರೀಕ ಸೌಲಬ್ಯಗಳನ್ನು ಒದಗಿಸಿಕೊಡಲು ಶ್ರಮಿಸಿದ್ದೇನೆ. ನಾನು ಮಾಡಿರುವ ಅಭಿವೃದ್ದಿ ಕೆಲಸಗಳಿಗೆ ಜನರು ಮನ್ನಣೆ ನೀಡುತ್ತಾರೆಂಬ ನಂಬಿಕೆ ಇದೆ.
ಈ ಚುನಾವಣೆಯಲ್ಲಿ ಜನರು ಮತ್ತೊಮ್ಮೆ ಆಶೀರ್ವಾದ ಮಾಡಿ ಗೆಲ್ಲಿಸಿದರೆ ಮತದಾರರ ಆಶಯಗಳಿಗೆ ಸ್ಪಂದಿಸಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ವಾರ್ಡಿನ ಸಮಗ್ರ ಅಭಿವೃದ್ದಿಗೆ ಒತ್ತು ನೀಡಿ ಕೆಲಸ ಮಾಡುವ ಭರವಸೆ ಕೊಡುತ್ತೇನೆ
ವಾರ್ಡಿನಲ್ಲಿರುವ ಪ್ರಮುಖ ಸಮಸ್ಯೆಗಳೇನು ?
ಪ್ರಮುಖವಾಗಿ ಮೂಲಭೂತ ಸೌಲಬ್ಯಗಳ ಕೊರತೆ ಇದ್ದೇ ಇರುತ್ತದೆ. ಜನ ಸಂಖ್ಯೆ ಹೆಚ್ಚಾದಂತೆಲ್ಲಾ ವಸತಿ ಪ್ರದೇಶವೂ ಹೆಚ್ಚುತ್ತದೆ. ಇದರೊಟ್ಟಿಗೆ ಇಂತಹ ಸಮಸ್ಯೆಗಳೂ ಇರುತ್ತವೆ. ಇವುಗಳಿಗೆ ಹಂತ ಹಂತವಾಗಿ ಪರಿಹಾರ ಕಂಡುಕೊಳ್ಳಬೇಕಿದೆ.
ವಾರ್ಡಿನಲ್ಲಿ ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ನಡೆಸುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೂಲಿಕಾರ್ಮಿಕರಿದ್ದಾರೆ. ಕೆಲವರಿಗೆ ವಸತಿ ಸಮಸ್ಯೆಯೂ ಇದೆ. ಉತ್ತಮ ರಸ್ತೆ, ಚರಂಡಿ ವ್ಯವಸ್ಥೆ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನೇ ಜನರು ಹೆಚ್ಚು ನಿರೀಕ್ಷೆ ಮಾಡುತ್ತಾರೆ.
ನಿಮ್ಮ ಅವಧಿಯಲ್ಲಿ ಆಗಿರುವ ಅಭಿವೃದ್ದಿ ಬಗ್ಗೆ ಹೇಳಿ ?
ನನಗೆ ಇದುವರೆಗೂ ಆಯ್ಕೆ ಮಾಡಿದ ಮತದಾರರಿಗೆ ನ್ಯಾಯ ಕಲ್ಪಿಸಿಕೊಟ್ಟಿದ್ದೇನೆ ಎಂಬ ತೃಪ್ತಿಇದೆ. ನನ್ನ ಅವಧಿಯಲ್ಲಿ ಸಾಕಷ್ಟು ಕೆಲಸಗಳು ಆಗಿವೆ. ಕುಡಿಯುವ ನೀರು, ರಸ್ತೆಗಳ ಸುಧಾರಣೆ, ಚರಂಡಿಗಳ ವ್ಯವಸ್ಥೆಯೂ ಸೇರಿದಂತೆ ನಾಗರೀಕರಿಗೆ ಮೂಲಭೂತ ಸೌಲಬ್ಯಗಳನ್ನು ಪ್ರಾಮಾಣಿಕವಾಗಿ ದೊರೆಕಿಸಿಕೊಟ್ಟಿದ್ದೇನೆ.
ಕಳೆದ ಐದು ವರ್ಷಗಳಲ್ಲಿ ಸುಮಾರು ಐದು ಕೋಟಿಗೆ ಹೆಚ್ಚಿನ ಮೊತ್ತದಲ್ಲಿ ಅಭಿವೃದ್ದಿ ಕೆಲಸಗಳು ನಡೆದಿವೆ. ಕುಡಿಯುವ ನೀರಿನ ಸಮಸ್ಯೆಯನ್ನು ಬಗೆ ಹರಿಸುವ ಸಲುವಾಗಿ ಸುಮಾರು 12 ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ವೆಂಕಟೇಶ್ವರ ಚಿತ್ರಮಂದಿರ, ಮೇದೇಹಳ್ಳಿ ರಸ್ತೆ, ಪ್ರಸನ್ನ ಚಿತ್ರಮಂದಿರ ಬಳಿ, ಮಟನ್ ಮಾರುಕಟ್ಟೆ ಸೇರಿ ಇನ್ನಿತರೆ ಕಡೆ ಬೊರ್‍ಗಳನ್ನು ಕೊರೆಸಿ ಜನರಿಗೆ ನೀರು ಕೊಟ್ಟಿದ್ದೇನೆ.
ಕೊಳಚೆ ಪ್ರದೇಶದಲ್ಲಿ ಸುಮಾರು 20 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸಲಾಗಿದೆ. ಪ್ರಮುಖ ರಸ್ತೆಗಳನ್ನು ಅಭಿವೃದ್ದಿ ಪಡಿಸಲಾಗಿದೆ. ಇದರ ಜೊತೆಗೆ ಅನೇಕ ಬಡವರಿಗೆ ಸರ್ಕಾರ ಮತ್ತು ನಗರಸಭೆಯಿಂದ ಸಿಗುವ ವಿವಿಧ ಯೋಜನೆಗಳ ಸೌಲಬ್ಯಗಳನ್ನು ಒದಗಿಸಿಕೊಡಲಾಗಿದೆ.








