ಪಿಂಚಣಿಗೆ ಆಗ್ರಹಿಸಿ ಕಟ್ಟಡ ಕಾರ್ಮಿಕರ ಪ್ರತಿಭಟನೆ

ಚಿತ್ರದುರ್ಗ:

         ಅರವತ್ತು ವರ್ಷ ತುಂಬಿದ ಕಟ್ಟಡ ಕಾರ್ಮಿಕರಿಗೆ ತಿಂಗಳಿಗೆ ಮೂರು ಸಾವಿರ ರೂ.ಪಿಂಚಣಿ ನೀಡುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದಿಂದ ಚಿತ್ರದುರ್ಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

          ಹೊಳಲ್ಕೆರೆ ರಸ್ತೆಯಲ್ಲಿರುವ ಕಚೇರಿಯಿಂದ ಮೆರವಣಿಗೆ ಮೂಲಕ ಆಗಮಿಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಿದರು.

          ಚಿತ್ರದುರ್ಗ ಜಿಲ್ಲೆಯ ಕಾರ್ಮಿಕ ಇಲಾಖೆಗೆ ಕಾರ್ಮಿಕ ಅಧಿಕಾರಿ ಹಾಗೂ ಇಬ್ಬರು ಕಾರ್ಮಿಕ ನಿರೀಕ್ಷಕರನ್ನು ನೇಮಿಸಬೇಕು. ಕಾರ್ಮಿಕ ಇಲಾಖೆಯಲ್ಲಿ ಖಾಲಿಯಿರುವ 71 ಕಾರ್ಮಿಕ ನಿರೀಕ್ಷಕರ ಹುದ್ದೆಗಳನ್ನು ಕೂಡಲೆ ಭರ್ತಿ ಮಾಡಬೇಕು.
ಕಟ್ಟಡ ಕಾರ್ಮಿಕರ ಕೆಲಸಗಳನ್ನು ನಿರ್ವಹಿಸಲು ಕಚೇರಿ ಸಹಾಯಕರನ್ನು ನೇಮಿಸಬೇಕು.

          ನೊಂದಾಯಿತಿ ಕಟ್ಟಡ ಕಾರ್ಮಿಕರು ಸಹಜವಾಗಿ ನಿಧನರಾದರೆ ಐದು ಲಕ್ಷ ರೂ., ಅಪಘಾತದಲ್ಲಿ ಮೃತಪಟ್ಟರೆ ಕುಟುಂಬದವರಿಗೆ ಹತ್ತು ಲಕ್ಷ ರೂ.ಗಳ ಪರಿಹಾರವನ್ನು ನೀಡಬೇಕು.

         ಮಂಡಳಿಯಿಂದ ಕಾರ್ಮಿಕ ಇಲಾಖೆಗೆ ಅರ್ಜಿಗಳು, ಸ್ಟಾಂಪ್, ಬಿ.ಎಸ್.ಎನ್.ಎಲ್, ಡಾಟಾ ಬಿಲ್, ಜೆರಾಕ್ಸ್ ಬಿಲ್‍ಗಳನ್ನು ಪಾವತಿಸಲು ತ್ವರಿತವಾಗಿ ಹಣ ನೀಡುವಂತೆ ಆದೇಶಿಸಬೇಕು.ನರೇಗಾ ಕಾರ್ಮಿಕರನ್ನು ಕಾರ್ಮಿಕ ಮಂಡಳಿಗೆ ನೊಂದಣಿ ಮಾಡುವುದನ್ನು ಕೈಬಿಡಬೇಕು.ಕಾರ್ಮಿಕರಿಗೆ ಎಲ್ಲಾ ಅರ್ಜಿಗಳು ಕಾರ್ಮಿಕ ಇಲಾಖೆಯಲ್ಲಿಯೇ ದೊರೆಯಬೇಕು

            ನೊಂದಾಯಿತ ಕಟ್ಟಡ ಕಾರ್ಮಿಕರ ಗುರುತಿನ ಚೀಟಿ ನವೀಕರಣವನ್ನು ಒಂದು ವರ್ಷಗಳ ಬದಲಾಗಿ ಮೂರು ವರ್ಷಗಳಿಗೊಮ್ಮೆ ನವೀಕರಣಗೊಳಿಸುವಂತೆ ಆದೇಶಿಸಬೇಕು ಎಂದು ಪ್ರತಿಭಟನಾನಿರತ ಕಾರ್ಮಿಕರು ಸರ್ಕಾರವನ್ನು ಆಗ್ರಹಿಸಿದರು.

          ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್, ರಾಜ್ಯಾಧ್ಯಕ್ಷ ಎನ್.ರಮೇಶ್, ಉಪಾಧ್ಯಕ್ಷ ಸಿ.ಕೆ.ಗೌಸ್‍ಪೀರ್, ಡಿ.ಈಶ್ವರಪ್ಪ, ಕೆ.ಜಿ.ಬಸವರಾಜ್, ವೈ.ಬಸವರಾಜ್, ಸಲೀಂ, ವೈ.ನಾಗರಾಜು, ಎಸ್.ಸತೀಶ್, ಇಮಾಂ, ಎಂ.ಡಿ.ಜಮೀರ್, ಶಾರದಮ್ಮ, ಮಂಜು, ಬುಡೇನ್‍ಸಾಬ್, ನಾಗರಾಜು, ಬೈರೇಶ್ ಇನ್ನು ಮೊದಲಾದವರು ಪ್ರತಿಭಟನೆಯಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap