ಶಿಗ್ಗಾವಿ :
ತಡಸ ಗ್ರಾಮ ಪಂಚಾಯತಿಯಲ್ಲಿ ಪಿಡಿಓನಿಂದ ಭ್ರಷ್ಟಾಚಾರ, ಕೂಡಲೇ ಅವರನ್ನು ಅಮಾನತು ಮಾಡಬೇಕು, ಕಬನೂರ ಗ್ರಾಮ ಪಂಚಾಯತಿಯಲ್ಲಿಯ ಆಸ್ತಿಗಳನ್ನು ಮನಬಂದಂತೆ ಪರಿವರ್ತನೆ ಮಾಡುತ್ತಿದ್ದಾರೆ, ಠರಾವು ಪುಸ್ತಕಗಳನ್ನು ತಾವೇ ಹೊಸದಾಗಿ ಸೃಷ್ಟಿ ಮಾಡುತ್ತಿದ್ದಾರೆ ತಾಲೂಕಿನಲ್ಲಿ ಪಿಡಿಓಗಳದೇ ಸರ್ವಾಧಿಕಾರವಾಗಿದೆ ಎಂದು ತಾಪಂ ಸದಸ್ಯ ಶ್ರೀಕಾಂತ ಪೂಜಾರ ಗಂಭೀರವಾಗಿ ಆರೋಪಿಸಿದ ಘಟನೆ ಜರುಗಿತು.
ಪಟ್ಟಣದ ತಾಲೂಕಾ ಪಂಚಾಯತ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು ತಾಲೂಕಿನಲ್ಲಿ ಪಿಡಿಓಗಳು ಮನಸಾ ಇಚ್ಚಾ ನಡೆದು ಕೊಳ್ಳುತ್ತಿದ್ದಾರೆ ಕೂಡಲೇ ಅದ್ಯಕ್ಷರು ಪಿಡಿಓ ಗಳ ಸಭೆಯನ್ನು ಕರೆಯಲು ಒತ್ತಾಯಿಸಿದರು.
ನೀರು ಮತ್ತು ನೈರ್ಮಲ್ಯ :
ನೀರು ಮತ್ತು ನೈರ್ಮಲ್ಯ ವಿಭಾಗಕ್ಕೆ ಸಂಬಂದಿಸಿದಂತೆ ಸದಸ್ಯೆ ವಿಜಯಲಕ್ಷ್ಮಿ ಮುಂದಿನಮನಿ ಮಾತನಾಡಿ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಎಷ್ಟು ವರ್ಷಕ್ಕೆ ಕೆಲಸವನ್ನು ಪೂರ್ತಿ ಮಾಡುತ್ತೀರಿ ? ಎಂಬುದನ್ನು ತಿಳಿಸಿ ನಾವು ಜನರಿಗೆ ತಿಳಿಸಬೇಕೆಂದು ಅಧಿಕಾರಿಯ ಮೇಲೆ ಹರಿಹಾಯ್ದರು, ತಾಲೂಕಿನಲ್ಲಿ ಗ್ರಾಮಗಳಿಂದ ದೂರವಿರುವ ಸರಕಾರಿ ಹೈಸ್ಕೂಲಗಳಿಗೆ ಇಲಾಖೆಯಿಂದ ಬೋರ್ ವೆಲ್ ಕೊರೆಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಬೇಕೆಂದು ಸದಸ್ಯ ಶ್ರೀಕಾಂತ ಪೂಜಾರ ತಾಕೀತು ಮಾಡಿದರು.
ಪಿ.ಡಬ್ಲು.ಡಿ ಇಲಾಖೆ :
ತಾಲೂಕಿನಲ್ಲಿ ಶೀಥಿಲಾವಸ್ಥೆಯಲ್ಲಿರುವ ಶಾಲಾ ಕಟ್ಟಡಗಳನ್ನು ತೆರವುಗೊಳಿಸಲು ಯಾವ ಇಲಾಖೆಗೆ ಸಂಭಂದಿಸುತ್ತದೆ ಎಂದು ಸದಸ್ಯ ಸಾತಪ್ಪ ದೇಸಾಯಿ ಚರ್ಚಿಸುತ್ತ ಕೊನೆಯಲ್ಲಿ ಶಿಥಿಲಾವ್ಯವಸ್ಥೆಯಲ್ಲಿರುವ ಕಟ್ಟಡಗಳು ಬಿದ್ದು ಅನಾಹುತಗಳು ಸಂಭವಿಸಿದರೆ ಈ ಘಟನೆಗೆ ಶಾಲೆಯ ಮುಖ್ಯೋಪಾದ್ಯಾಯರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ನೇರವಾಗಿ ಹೊಣೆ ಮಾಡುವಂತೆ ಠರಾವಿನಲ್ಲಿ ನಮೂದಿಸಬೆಕೆಂದು ತಿಳಿಸಿ ಕೂಡಲೇ ತಾಲೂಕಿನಲ್ಲಿರುವ ಶಿಥಿಲಾವಸ್ಥೆಯ ಶಾಲಾ ಕಟ್ಟಡಗಳ ಸಂಪೂರ್ಣ ಮಾಹಿತಿಯನ್ನು ಒದಗಿಸುವಂತೆ ಸಭೆಯಲ್ಲಿ ಚರ್ಚಿಸಲಾಯಿತು. ಪಿಡಬ್ಲುಡಿಯ ಮ್ಯಾನೇಜರ್ ತಾಪಂ ಅಧಿಕಾರಿಗಳೋಂದಿಗೆ ಸರಿಯಾಗಿ ವರ್ತಿಸುತ್ತಿಲ್ಲ ಮತ್ತು ನರೇಗಾ ಯೋಜನೆಗೆ ಸಂಭಂದಿಸಿದಂತೆ ಪತ್ರವ್ಯವಹಾರವಾಗುತ್ತಿಲ್ಲ ಎಂದು ಇಓ ಚಂದ್ರು ಪೂಜಾರ ಹೇಳಿದರು.
ಹುಲಿಕಟ್ಟಿ ಮತ್ತು ಹೋತನಹಳ್ಳಿ ರಸ್ತೆ ಹಾಳಾಗಿದ್ದು ಕೂಡಲೇ ಸರಿಪಡಿಸಲು ಸದಸ್ಯ ವಿಶ್ವನಾಥ ಹರವಿ ಹೇಳಿದರು, ಸುರಬಗಟ್ಟಿ ಮತ್ತು ಚಿಕ್ಕಬೆಂಡಿಗೇರಿ ಒಳಗಿನ ರಸ್ತೆ ಯನ್ನು ಮಾಡಿದ ಎರಡು ತಿಂಗಳುಗಳಲ್ಲಿಯೇ ಕಳಪೆಯಾಗಿದೆ ಎಂಬ ಆರೋಪ ಕೆಳಿಬಂದಿದೆ ಕೂಡಲೇ ಸರಿಪಡಿಸಲು ಶ್ರೀಕಾಂತ ಪೂಜಾರ ತಿಳಿಸಿದರು.
ಕೃಷಿ ಇಲಾಖೆ :
ಕ್ಷೇತ್ರದಲ್ಲಿ ಶೇ100 ರಷ್ಟು ಬಿತ್ತನೆಯಾಗಿದೆ, ರಸ ಗೊಬ್ಬರದ ಕೊರತೆಯಿಲ್ಲ ಎಂದು ಸಭೆಗೆ ಕೃಷಿ ಅಧಿಕಾರಿ ಮಾಹಿತಿ ನೀಡುತ್ತಿದ್ದಾಗ ಮದ್ಯ ಪ್ರವೇಶಿಸಿದ ಸದಸ್ಯ ವಿಶ್ವನಾಥ ಹರವಿ ಎಲ್ಲಿಯೂ ಸರಿಯಾಗಿ ಬೆಳೆ ಬಂದಿಲ್ಲ ನೀವೂ ಸಭೆಗೆ ತಪ್ಪು ಮಾಹಿತಿ ನೀಡಬೇಡಿ, ಸರಿಯಾಗಿ ಪರಿಶೀಲಿಸಿಲ್ಲ ಬೆಳೆ ಪರಿಹಾರ ಸರಿಯಾಗಿ ಬಂದಿಲ್ಲ ಕೆಲ ರೈತರಿಗೆ ಕೇವಲ 80 ರೂ ಜಮೆ ಯಾಗಿದೆ, ನೀವು ಯಾವ ರೀತಿ ಸಮೀಕ್ಷೆ ಮಾಡಿದ್ದೀರಿ ಎಂಬುದನ್ನು ಸಭೆಗೆ ತಿಳಿಸಿ ಎಂದು ಹರವಿ ಪ್ರಶ್ನಿಸಿದರು.
ತಾಡಪತ್ರಿ ಹಂಚಿಕೆ ವಿಷಯದಲ್ಲಿ ಗೊಂದಲವನ್ನುಂಟು ಮಾಡುತ್ತೀದ್ದೀರಿ ಕೆಲವು ಕಡೆ ಲಾಟರಿ ಮೂಲಕ ಇನ್ನು ಕೆಲವು ಕಡೆ ಮನಸಾ ಇಚ್ಚೆ ನಿಗದಿ ಪಡಿಸಿದ ರೈತರಿಗೆ ಹಂಚುತ್ತಿದ್ದೀರಿ, ಮೇವು ಬೀಜ ಬಂದರೂ ಮತ್ತು ಎರೆ ಹುಳು ಗೊಬ್ಬರ ಬಂದರೂ ಯಾರಿಗೂ ಮಾಹಿತಿ ನೀಡಿಲ್ಲ, ಇಲಾಖೆಯಿಂದ ಸಬ್ಸಿಡಿಯಾಗಿ ಕೊಡುವ ಪರಿಕರಗಳನ್ನು ದುರುಪಯೋಗವಾಗುತ್ತಿವೆ, ಎಸ್‍ಸಿಎಸ್‍ಟಿ ಯವರಿಗೆ ಸೌಲಭ್ಯ ಮುಟ್ಟುತ್ತಿಲ್ಲ ಎಂದು ಕೆಲ ಸದಸ್ಯರು ಪ್ರಶ್ನಿಸಿದರು.
ಶಿಶು ಅಭಿವೃದ್ದಿ ಇಲಾಖೆ :
ಇಲಾಖೆಯಿಂದ ಬೀದಿ ವ್ಯಾಪಾರಸ್ಥರಿಗೆ 10 ಸಾವಿರ ರೂಗಳ ಧನಸಹಾಯವನ್ನು ತಾಪಂ ಅಧಿಕಾರಿಗಳಿಗೆ ಮಾಹಿತಿ ನೀಡದೇ ವಿತರಿಸಲಾಗಿದೆ, ಅಧಿಕಾರಿಗಳು ಅಂಗನವಾಡಿ ಕೇಂದ್ರಗಳಿಗೆ ಬೇಟಿ ನೀಡುತ್ತಿಲ್ಲ, ಬಸವನಕೊಪ್ಪ ಗ್ರಾಮದಲ್ಲಿ ಇಬ್ಬರೇ ಮಕ್ಕಳಿರುವ ಅಂಗನವಾಡಿ ಕೇಂದ್ರದಲ್ಲಿ ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ ಇದನ್ನು ಸಾರ್ವಜನಿಕರು ಪ್ರಶ್ನಿಸಿದ್ದಕ್ಕೆ ಶಿಕ್ಷಕರಿಂದ ಹಾಗೂ ಅಧಿಕಾರಿಗಳಿಗಳಿಂದ ಧಮಕಿ ಹಾಕಲಾಗುತ್ತಿದೆ ಎಂಬ ಪತ್ರಗಳು ತಾಪಂ ಸಭೆಯಲ್ಲಿ ಬಂದಿವೆ ಎಂದು ಇಓ ಚಂದ್ರು ಪೂಜಾರ ಸಭೆಗೆ ಮಾಹಿತಿ ನೀಡಿದರು, ಅಲ್ಲದೆ ಅಂಗನವಾಡಿ ಕೇಂದ್ರಗಳಿಗೆ ಕಲಪೆ ಮಟ್ಟದ ಅಹಾರಗಳನ್ನು ಪೂರೈಸಲಾಗುತ್ತಿದೆ ಎಂದು ಸಭೆಗೆ ಅಂಗನವಾಡಿ ಕೇಂದ್ರದಿಂದ ತಂದ ಆಹಾರದ ಪೊಟ್ಟಣಗಳನ್ನು ತೋರಿಸಲಾಯಿತು, ಆಹಾರ ವಿತರಿಸುವ ಏಜೇನ್ಸಿಯವರನ್ನು ಕೂಡಲೇ ಬದಲಾಯಿಸಬೇಕು ಧನವೂ ತಿನ್ನಲು ಬಾರದ ಆಹಾರವನ್ನು ಮಕ್ಕಳಿಗೆ ನೀಡುತ್ತಿದ್ದಾರೆ, ಅಲ್ಲದೇ ವಿತರಿಸುವ ಇಂಡೆಂಟ್ ಪ್ರಕಾರ ತೂಕದಲ್ಲಿ ಕಡಿಮೆ ಇದ್ದು ವಿತರಿಸುವ ಆಹಾರವೂ ಸಹಿತ ಕಡಿಮೆ ಬರುತ್ತಿದೆ ಅಲ್ಲದೇ ಅಧಿಕಾರಿಗಳು ಇಲ್ಲಿಯವರೆಗೂ ಆಹಾರ ಪರೀಕ್ಷೆ ಮಾಡಿದ ಬಗ್ಗೆ ಯಾವುದೇ ವರದಿಯನ್ನು ಸಭೆಗೆ ತೋರಿಸಿರುವುದಿಲ್ಲ ಎಂದು ಸಭೆಗೆ ಶ್ರೀಕಾಂತ ಪೂಜಾರ ಆರೋಪಿಸಿದರು, ಆಹಾರ ವಿತರಿಸುವ ಎಮ್,ಎಸ್,ಪಿ,ಸಿ ಕಮೀಟಿಯನ್ನು ವಿಸರ್ಜಿಸಿ ಗುಣಮಟ್ಟದ ಕಮೀಟಿ ರಚಿಸಬೇಕು, ಮಾತೃ ಪೂರ್ಣ ಯೋಜನೆಯ ಸಾಮಗ್ರಿಗಳ ಖರೀದಿಯಲ್ಲಿ ಅವ್ಯವಹಾರ ಇವೆ ಎಂಬುವುದು ಸಭೆಯಲ್ಲಿ ಕೇಳಿಬಂದಿತು.
ಸಭೆಯಲ್ಲಿ ವರದಿಗಾರ ಪಿ ಎಮ್ ಸತ್ಯಪ್ಪನವರ ಅದ್ಯಕ್ಷರ ಒಪ್ಪಿಗೆ ಪಡೆದು ಮದ್ಯಪ್ರವೇಶಿಸಿ ಮಾತನಾಡಿ ಆಹಾರ ಪ್ಯಾಕಿಂಗ್ ಮಾಡುವ ಮಹಿಳೆಯರು ಆ ಸ್ಥಳಗಳಲ್ಲಿ ಯಾರನ್ನೂ ಒಳಗೆ ಬಿಟ್ಟು ಕೊಳ್ಳುವುದಿಲ್ಲ ಸಿ ಸಿ ಕ್ಯಾಮರಾ ಇದೆ ಎಂದು ಹೇಳಿದರೂ ಅದರಲ್ಲಿ ಯಾವುದೇ ಡಾಟಾ ಇರುವುದಿಲ್ಲ ಒಳ್ಳೆಯ ಆಹಾರ ವಸ್ತುಗಳು ಬಂದರೂ ಕಮಿಷನ್‍ಗೋಷ್ಕರ ಕಳಪೆಯಾಗಿರುವ ಆಹಾರಪದಾರ್ಥಗಳನ್ನು ಮಿಶ್ರಣ ಮಾಡಿ ಪೂರೈಕೆ ಮಾಡುತ್ತಿದ್ದಾರೆ ಕೂಡಲೇ ಆ ಏಜೇನ್ಸಿಯವರನ್ನು ಬದಲಾಯಿಸಬೆಕೆಂದು ಮಾಹಿತಿ ನೀಡಿದರು.ಸಭೆಯಲ್ಲಿ ವಿವಿಧ ಇಲಾಖೆಗೆ ಸಂಭಂದಿಸಿದಂತೆ ಸುದೀರ್ಘ ಚರ್ಚೆಗಳು ನಡೆದವು.
ತಾಪಂ ಅದ್ಯಕ್ಷೆ ಪಾರವ್ವ ಆರೇರ ಅವರ ಅದ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾದ್ಯಕ್ಷೆ ಪದ್ಮಾವತಿ ಪಾಟೀಲ, ಸದಸ್ಯರಾದ ಬಿ ಎಸ್ ಹಿರೇಮಠ, ಯಲ್ಲಪ್ಪ ನರಗುಂದ, ಮಲ್ಲೆಶಪ್ಪ ದೊಡ್ಡಮನಿ, ರಾಜಕುಮಾರ ವೇರ್ಣೇಕರ, ಹಸಿನಾ ಬಾನು ಭಾಗವಾನ್, ಶಾಂತವ್ವ ಹಿರೇಮಠ, ತಾರಾಮತಿ ಧರಣೆಪ್ಪನವರ, ನೂತನ ಇಓ ಎಸ್ ಎಮ್ ಕಾಂಬ್ಳೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ತಾಪಂ ಸಿಬ್ಬಂದಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ