ಹಾವೇರಿ
ಸ್ವಾಮಿ ವಿವೇಕಾಂದರ ತತ್ವಾದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಹಾಗೂ ವಿಶಾಲ ಮನೋಭಾವ ಬೆಳೆಸಿಕೊಳ್ಳುವ ಮೂಲಕ ನೆರೆಹೊರೆಯವರನ್ನು ಸಹೋದರರಂತೆ ಕಾಣಬೇಕು ಮತ್ತು ದೇಶದ ಅಭಿವೃದ್ಧಿಗೆ ಬಗ್ಗೆ ಚಿಂತನೆ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಎಸ್.ಎಚ್.ರೇಣುಕಾದೇವಿ ಅವರು ಹೇಳಿದರು.
ಬುಧವಾರ ನಗರದ ಜಿ.ಎಚ್.ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ನೆಹರು ಯುವ ಕೇಂದ್ರ(ಭಾರತ ಸರ್ಕಾರ), ಜನಸ್ಪಂದನ ಸಂಸ್ಥೆ, ಗುದ್ಲೆಪ್ಪ ಹಳ್ಳಿಕೇರಿ ಪದವಿ ಕಾಲೇಜ, ಎನ್.ಎಸ್. ಘಟಕ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಜರುಗಿದ ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ(ಮಾದಕ ಔಷಧ/ಮದ್ದು ದುರ್ಬಳಕೆಗೆ ಬಲಿಯಾದವರಿಗೆ ಕಾನೂನು ಸೇವೆಗಳು ಮತ್ತು ಮಾದಕ ವಿಪತ್ತಿನ ನಿರ್ಮೂಲನೆ) ಯೋಜನೆ2015ರ ಕುರಿತ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರು ಸಹ ಬಾಲ್ಯವನ್ನು ಎಲ್ಲರಂತೆ ಕಳೆದರು. ಆದರೆ ಅವರು ತಮ್ಮ ವಿವೇಚನಾ ಶಕ್ತಿ ಹಾಗೂ ವಿಚಾರಧಾರೆಯಿಂದ ಯುವಜನತೆಗೆ ಮಾದರಿಯಾಗಿದ್ದಾರೆ. ಕುವೆಂಪು ಅವರು ಸಹ ವಿವೇಕಾನಂದರಿಂದ ಪ್ರಭಾವಿತರಾಗಿದ್ದರು ಹಾಗೂ ವಿಶ್ವಮಾನವ ಗೀತೆ ರಚಿಸಿದರು. ಇದು ಓದು ಸಮಯ, ಈ ಸಮಯದಲ್ಲಿ ಆಸೆ, ಆಮಿಷಗಳಿಗೆ ಒಳಗಾಗದೆ, ದುಶ್ಚಟಗಳಿಗೆ ಬಲಿಯಾಗದೆ ಸರಿಯಾದ ಮಾರ್ಗದಲ್ಲಿ ನಡೆದು ಅತ್ಯಂತ ಉತ್ಕಷ್ಟ್ಟವಾದದ್ದನ್ನು ಪಡೆಯಿರಿ. ಓದುವುದರಲ್ಲಿ ಪೈಪೋಟಿ ಬೆಳೆಸಿಕೊಳ್ಳಿ ನಿಮ್ಮ ಗುರಿ ಮುಟ್ಟುವವರೆಗೆ ನಿಲ್ಲದಿರಿ ಎಂದು ಕರೆ ನೀಡಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಿ.ಎ.ಜಗದೀಶ್ ಅವರು ಮಾತನಾಡಿ, ಸ್ವಾಮಿ ವಿವೇಕಾನಂದರ ಜೀವನದ ಕುರಿತು ಪ್ರತಿಯೊಬ್ಬರ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ವಿದ್ಯಾರ್ಥಿ ಜೀವನ ಅತ್ಯಂತ ಮಹತ್ವದ ಘಟ್ಟವಾಗಿದೆ. ಈ ಹಂತದಲ್ಲಿ ವಿದ್ಯಾಭ್ಯಾಸದ ಬಗ್ಗೆ ಮಾತ್ರ ಗಮನಹರಿಸಬೇಕು. ಇಂದು ವಿದ್ಯಾರ್ಥಿಗಳು ಮೊಬೈಲ್ ಬಳಕೆಯಲ್ಲಿ ಕಾಲಕಳೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಗೂ ಇನ್ನೂ ಅನೇಕ ಮಾಹಿತಿ ಪಡೆದುಕೊಳ್ಳಬಹುದು. ಆದರೆ ಎಷ್ಟು ಬೇಕೋ ಅಷ್ಟು ಬಳಸದೆ ಅತಿಯಾದ ಬಳಕೆಯಿಂದ ಅನೇಕ ದುಷ್ಪರಿಣಾಮಗಳು ಉಂಟಾಗುತ್ತಿವೆ ಎಂದು ಉದಾಹರಣೆಗಳ ಮೂಲಕ ವಿವರಿಸಿದರು.
ವಿದ್ಯಾರ್ಥಿಗಳು ರಸ್ತೆ ಸಂಚಾರ ನಿಯಮಗಳನ್ನು ಪಾಲಿಸಬೇಕು ಹಾಗೂ ಲೈಸನ್ಸ್ ಮತ್ತು ಹೆಲ್ಮೆಟ್ ಇಲ್ಲದೆ ವಾಹನ ಓಡಿಸುವುದು ಅಪರಾಧವಾಗಿದೆ ಎಂದ ಅವರು, “ಪುಸ್ತಕ ತಲೆ ಎತ್ತುವಂತೆ ಮಾಡುತ್ತದೆ, ಮೊಬೈಲ್ ತಲೆ ಕೆಳಗೆ ಮಾಡುತ್ತದೆ” ಎಂಬ ಸ್ವರಚಿತ ಕವನ ವಾಚಿಸಿದರು.
ಉಪವಿಭಾಗಾಧಿಕಾರಿ ಎನ್.ತಿಪ್ಪೇಸ್ವಾಮಿ ಅವರು ಮಾತನಾಡಿ, ವಿದ್ಯೆ ಮತ್ತು ಬುದ್ದಿ ಮದ್ಯ ಸಮನ್ವಯತೆ ಇರಬೇಕು. ಮನಸ್ಸಿನ ಮೇಲೆ ಹಿಡಿತವಿರಬೇಕು. ಮನಸ್ಸು ಚಂಚಲ ಸ್ವಭಾವದಾಗಿದ್ದು, ಮನಸ್ಸು ನಿಗ್ರಹಿಸಬೇಕು. ಉತ್ತಮ ಜೀವನ ಶೈಲಿ ಒಳವಡಿಸಿಕೊಳ್ಳುವ ಮೂಲಕ ಜ್ಞಾನ ಸಂಪಾದಿಸಬೇಕು ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀಮತಿ ವೈ.ಎಲ್.ಲಾಡಖಾನ್ ಪ್ರಾಸ್ತಾವಿಕವಾಗಿ ಮಾತನಾಡಿ, ಮನುಷ್ಯ ಸಮಾಜ ಜೀವಿ, ನಾಗರಿಕ ಸಮಾಜದಲ್ಲಿ ಎಲ್ಲರಿಗೂ ಸ್ವಾಭಿಮಾನದಿಂದ ಹಾಗೂ ಗೌರವದಿಂದ ಬದುಕುವ ಹಕ್ಕಿದೆ. ಸಮಾಜದಲ್ಲಿ ಬದುಕಲು ನೀತಿ ನಿಯಮಗಳನ್ನು ಪಾಲಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರು, ಕೋಮುಗಲಭೆ ಸಂತ್ರಸ್ಥರು, ನೆರೆ ಸಂತ್ರಸ್ಥರು ಹಾಗೂ ಒಂದು ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿದವರು ತಾಲೂಕು, ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದಿಂದ ಉಚಿತ ಕಾನೂನು ಸೇವೆ ಪಡೆಯಬಹುದು. ಕಾನೂನು ಎಲ್ಲರಿಗೂ ಒಂದೆ ಆಗಿರುತ್ತದೆ. ಜೀವನದ ಪ್ರತಿ ಹಂತದಲ್ಲೂ ಕಾನೂನಿನ ಅವಶ್ಯಕತೆ ಇದೆ ಹಾಗೂ ಎಲ್ಲರೂ ಕಾನೂನು ಪಾಲನೆ ಮಾಡಬೇಕು. ಯುವ ಜನಾಂಗ ರಾಷ್ಟ್ರದ ಸಂಪತ್ತು. ಜೀವನದಲ್ಲಿ ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು. ರಾಷ್ಟ್ರದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಹೇಳಿದರು.
ಕೆ.ಎಲ್.ಇ.ಸಂಸ್ಥೆ ಉಪಾಧ್ಯಕ್ಷ ಎಂ.ಸಿ.ಕೊಳ್ಳಿ ಅವರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆ.ಸಿ.ಪಾಟೀಲ, ಕಾರ್ಯದರ್ಶಿ ಪಿ.ಎಂ.ಬೆನ್ನೂರ, ಪಿ.ಯು.ಕಾಲೇಜ ಪ್ರಾಚಾರ್ಯ ಜೆ.ಆರ್.ಶಿಂಧೆ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಗದೀಶ ಪಾಟೀಲ ಉಪಸ್ಥಿತರಿದ್ದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪೆನಲ್ ವಕೀಲಾರದ ಕುಮಾರಿ ರಾಜೇಶ್ವರಿ ಚಕ್ಕಲೇರ ಅವರು ಮಾನವ ಹಕ್ಕುಗಳ ಕುರಿತು, ವಕೀಲರು ಹಾಗೂ ಜನಸ್ಪಮದ ಸಂಸ್ಥೆ ಕಾರ್ಯದರ್ಶಿ ಶಂಕರ ಮಹರವಾಡೆ ಅವರು ಮಾದಕ ಔಷಧ/ಮದ್ದು ದುರ್ಬಳಕೆಗೆ ಬಲಿಯಾದವರಿಗೆ ಕಾನೂನು ಸೇವೆಗಳು ಮತ್ತು ಮಾದಕ ವಿಪತ್ತಿನ ನಿರ್ಮೂಲನೆ) ಯೋಜನೆ2015 ಕುರಿತು, ಜಿಲ್ಲಾ ಆಸ್ಪತ್ರೆ ಮನೋರೋಗ ತಜ್ಞೆ ಡಾ.ಲೀಲಾ ಪಿ ಅವರು ಮಾದಕ ಔಷಧದ ಸೇವನೆಯಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳು ಹಾಗೂ ಜಿಲ್ಲಾ ಅಪರಾಧ ತನಿಖಾ ದಳದ ಪಿ.ಆಯ್. ಸಂತೋಷ ಪವಾರ ಅವರು ಪೊಲೀಸ್ ದೂರು ಪ್ರಾಧಿಕಾರದ ರಚನೆ, ಮಹತ್ವ ಮತ್ತು ಕಾರ್ಯ ವೈಖರಿ ಕುರಿತು ಉಪನ್ಯಾಸ ನೀಡಿದರು. ಪ್ರೊ.ಎಸ್.ವಿ.ಮಡಿವಾಳ ಸ್ವಾಗತಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
