ಪುರಸಭೆಯನ್ನು ಬಿಜೆಪಿ ಮಕ್ತ ಮಾಡುವುದೇ ನಮ್ಮ ಗುರಿ:ಖಂಡ್ರೆ

ಹಾನಗಲ್ಲ :

             ರಾಜ್ಯದಲ್ಲಿ ಬಿಜೆಪಿ ಮುಕ್ತ ಪುರಸಭೆ ಆಡಳಿತ ತರುವುದೇ ಕಾಂಗ್ರೇಸ್ಸಿನ ಗುರಿ, ಕಾಂಗ್ರೇಸ್ ಸರಕಾರದ ಅವಧಿಯಲ್ಲಿ ಹಾನಗಲ್ಲ ಪುರಸಭೆಗೆ ಅಭಿವೃದ್ಧಿ ಅನುದಾನ ನೀಡಿಲ್ಲ ಎಂದು ಸಾಬೀತಾದರೆ ರಾಜಕೀಯ ಸನ್ಯಾಸ ಸ್ವೀಕರಿಸುವುದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಘೋಷಣೆ ಮಾಡಿದರು.

              ಶನಿವಾರ ಪಟ್ಟಣದ ನೂರಾನಿ ಸಭಾಂಗಣದಲ್ಲಿ ಪುರಸಭಾ ಚುನಾವಣೆ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಹಿಂದಿನ ಕಾಂಗ್ರೇಸ್ ಸರಕಾರದಲ್ಲಿ ಕಾಂಗ್ರೇಸ್, ಬಿಜೆಪಿ, ಜೆಡಿಎಸ್ ಎಂದು ಪಕ್ಷ ಬೇಧ ಮಾಡದೆ ರಾಜ್ಯದ ಪುರಸಭೆ, ಪಟ್ಟಣ ಪಂಚಾಯತಿ, ನಗರಸಭೆ ಹಾಗೂ ನಗರಪಾಲಿಕೆಗಳಿಗೆ ಅಭಿವೃದ್ಧಿಗಾಗಿ ನಗರೋತ್ಥಾನ ಯೋಜನೆಯೊಂದರಲ್ಲೇ 3 ಸಾವಿರ ಕೋಟಿ ರೂ ಅನುದಾನ ನೀಡಲಾಗಿದೆ. ಹಾನಗಲ್ಲ ಪುರಸಭೆಗೆ ಇದೇ ಸಂದರ್ಭದಲ್ಲಿ 7.5 ಕೋಟಿ ರೂ ನೀಡಲಾಗಿದೆ. ಈ ಅನುದಾನದ ಕಾಮಗಾರಿಗಳು ಕೆಲವು ಮುಗಿದಿದ್ದು ಕೆಲವೆಡೆ ಇನ್ನೂ ನಡೆಯುತ್ತಿವೆ. ಆದರೆ ಹಿರಿಯ ರಾಜಕಾರಣಿ ಬಿಜೆಪಿಯ ಉಪಾಧ್ಯಕ್ಷರೂ ಆಗಿರುವ ಶಾಸಕ ಸಿ.ಎಂ.ಉದಾಸಿ ಹಾನಗಲ್ಲ ಪಟ್ಟಣಕ್ಕೆ ಅಭಿವೃದ್ಧಿ ಅನುದಾನವೇ ನೀಡಿಲ್ಲ ಎಂದು ಸುಳ್ಳು ಆರೋಪ ಮಾಡುತ್ತಿರುವುದು ಅತ್ಯಂತ ಖೇದದ ಸಂಗತಿ. ಅನುದಾನ ನೀಡಿರುವುದು ಸುಳ್ಳಾದರೆ ರಾಜಕೀಯ ಸನ್ಯಾಸ ತೆಗೆದುಕೊಳ್ಳುತ್ತೇನೆ ಎಂದರು.

               ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಅಪಪ್ರಚಾರದಿಂದ ಕಾಂಗ್ರೇಸ್ಸಿಗೆ ಹಿನ್ನಡೆಯಾಗಿ ಸಮ್ಮಿಶ್ರ ಸರಕಾರಕ್ಕೆ ಹೋಗಬೇಕಾಯಿತು. ಕಡಿಮೆ ಸಂಖ್ಯೆ ಇರುವ ಜೆಡಿಎಸ್‍ಗೆ ಅಧಿಕಾರ ಚುಕ್ಕಾಣಿ ನೀಡಲಾಯಿತು. ಕೋಮುವಾದಿಗಳನ್ನು ಸರಕಾರದಿಂದ ದೂರವಿಡಲು ಅನಿವಾರ್ಯವಾಗಿ ಕಾಂಗ್ರೇಸ್ ಇಂಥ ಕ್ರಮಕ್ಕೆ ಮುಂದಾಗಿದ್ದು ಅನಿವಾರ್ಯ. ಈಗ ರಾಜ್ಯದ ಜನತೆ ಎಲ್ಲ ಸ್ಥಾನಿಕ ಚುನಾವಣೆಗಳಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿ ಅತ್ಯುತ್ತಮ ಆಡಳಿತಕ್ಕೆ ಸಹಕರಿಸಬೇಕೆಂದು ಈಶ್ವರ ಖಂಡ್ರೆ ಮನವಿ ಮಾಡಿದರು.
 

            ಮಾಜಿ ಸಚಿವ ಮನೋಹರ ತಹಶೀಲ್ದಾರ ಮಾತನಾಡಿ, ಇದು ಪ್ರತಿಷ್ಠೆಯ ಚುನಾವಣೆ. ಆನಪರ ಕಾರ್ಯಕ್ರಮಗಳ ಮೂಲಕ ಹಾನಗಲ್ಲ ಪುರಸಭೆಗೆ ಸರಕಾರದ ಎಲ್ಲ ಸೌಲಭ್ಯ ಒದಗಿಸಿದ್ದೇವೆ. ಆದರೆ ಈ ಹಿಂದಿನ ಎರಡೂ ಅವಧಿ ಬಿಜೆಪಿ ಆಡಳಿತದಲ್ಲಿ ಇದ್ದ ಪುರಸಭೆ ಜನತೆಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ವಿಫಲವಾಗಿದೆ. ಜನತೆ ಬದಲಾವಣೆ ಬಯಸಿದ್ದಾರೆ. ಈ ಬಾರಿ ಕಾಂಗ್ರೇಸ್ಸಿಗೆ ಸ್ಪಷ್ಟ ಬಹುಮತ ನೀಡುವಂತೆ ವಿನಂತಿಸಿದರು.

         ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಮಾತನಾಡಿ, ಪುರಸಭೆಯ ಮುಖ್ಯ ಕರ್ತವ್ಯ ಜನತೆಗೆ ಕುಡಿಯುವ ನೀರು ಒದಗಿಸುವುದು ಹಾಗೂ ಸ್ವಚ್ಛತೆ ಕಾಪಾಡುವುದು ಆದ್ಯತೆಯಾಗಬೇಕು. ಆದರೆ ಬಿಜೆಪಿ ಆಡಳಿತದಲ್ಲಿರುವ ಎರಡು ಅವಧಿಯ ಹಾನಗಲ್ಲ ಪುರಸಭೆ ಈ ಕೆಲಸಗಳಿಗೆ ನಿರಾಸಕ್ತಿ ತೋರಿದೆ. ಸ್ವಚ್ಛತೆಗಾಗಿ ಉತ್ತಮ ಚರಂಡಿ ನಿರ್ಮಾಣ ಆಗಿಲ್ಲ. ಕುಡಿಯುವ ನೀರಿಗಾಗಿ ಜನತೆ ಕೂಗಾಡಬೇಕಾಗಿದೆ. ಇಂತಹ ನಿರ್ಲಕ್ಷದ ಬಿಜೆಪಿ ಆಡಳಿತವನ್ನು ತಿರಸ್ಕರಿಸಿ ಈ ಬಾರಿ ಕಾಂಗ್ರೆಸ್ಸಗೆ ಬಹುಮತ ನೀಡಿ ಅಭಿವೃದ್ಧಿಗೆ ಬೆಂಬಲಿಸಿ ಸುಂದರ, ಸಂತೃಪ್ತ, ಸಮೃದ್ಧ ಪುರಸಭೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಿ ಎಂದರು.

             ಕೆಪಿಸಿಸಿ ಕಾರ್ಯದರ್ಶಿ ಪ್ರಕಾಶಗೌಡ ಪಾಟೀಲ, ಸದಸ್ಯ ಸತೀಶ ದೇಶಪಾಂಡೆ, ಮಾಜಿ ಸಂಸದ ಐ.ಜಿ.ಸನದಿ, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಶಂಕ್ರಣ್ಣ ಶಿಡೇನೂರ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಆರ್.ಎಸ್.ಪಾಟಿಲ, ನಗರಾಧ್ಯಕ್ಷ ಎಂ.ಕೆ.ಹುಬ್ಬಳ್ಳಿ, ತಾಪಂ ಅಧ್ಯಕ್ಷ ಸಿದ್ದಪ್ಪ ಹಿರಗಪ್ಪನವರ, ಮುಖಂಡರಾದ ಎ.ಎಂ.ಪಠಾಣ, ವಿಷ್ಣುಕಾಂತ ಜಾಧವ, ಯಲ್ಲಪ್ಪ ಕಿತ್ತೂರ, ಎಸ್.ಕೆ.ಪೀರಜಾದೆ, ಟಾಕನಗೌಡ ಪಾಟೀಲ, ಎನ್.ಐ.ಸವಣೂರ, ಯಾಶೀರಖಾನ ಪಠಾಣ, ನಿಯಾಜ ಶೇಖ ಮೊದಲಾದವರು ಈ ಸಂದರ್ಭದಲ್ಲಿದ್ದರು.

Recent Articles

spot_img

Related Stories

Share via
Copy link