ಪೌರಕಾರ್ಮಿಕರಿಗೆ ಮೊದಲ ಆಧ್ಯತೆಯಾಗಿ 28 ನಿವೇಶನ..!

ಜಗಳೂರು

     ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಜನ ಸಂಖ್ಯೆ ಬೆಳೆಯುತ್ತಿದ್ದು, ಪಟ್ಟಣಪಂಚಾಯಿತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು.ಪಟ್ಟಣದ ಗುರುಭವನದಲ್ಲಿ ಪಟ್ಟಣ ಪಂಚಾಯ್ತಿ ವತಿಯಿಂದ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

      ಪಟ್ಟಣದ ಸ್ವಚ್ಚತೆ ಕಾಪಾಡುವ ಮೂಲಕ ಸಾರ್ವಜನಿಕರ ಆರೋಗ್ಯವನ್ನು ಕಾಪಾಡುವ ಮೊದಲ ವೈದ್ಯರಾದ ಪೌರಕಾರ್ಮಿಕರಿಗೆ ಲಭ್ಯವಿರುವ ಮೂರುವರೆ ಎಕರೆ ಜಾಗದಲ್ಲಿ 90 ನಿವೇಶನಗಳನ್ನು ವಿಂಗಡಿಸಿ ಮೊದಲ ಆಧ್ಯತೆಯಾಗಿ 28 ನಿವೇಶನ ನೀಡಲಾಗುವುದು ಭರವಸೆ ನೀಡಿದರು.

      ದಿನನಿತ್ಯ ಸ್ವಚ್ಚತಾ ಕಾರ್ಯದಲ್ಲಿ ತೊಡಗಿ ಪಟ್ಟಣದ ಸೌಂದರ್ಯವನ್ನು ಕಾಪಾಡುವ ಪೌರ ಕಾರ್ಮಿಕರಿಗೆ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಹೊಸ ಬಡಾವಣೆಗಳ ನಿರ್ಮಾಣಕ್ಕೆ ಅವಕಾಶ ನೀಡದೇ ಈಗಿರುವ ಖಾಸಗಿ ಬಡಾವಣೆಗಳ ಮೂಲಭೂತ ಸೌಲಭ್ಯಗಳನ್ನು ಅವಲೋಕಿಸಿ ಪರವಾನಗಿ ನೀಡಬೇಕು. ನಿಯಮ ಉಲ್ಲಂಘಿಸಿದ ಬಡಾವಣೆಗಳ ಪರವಾನಗಿ ರದ್ದು ಮಾಡಿ ಎಂದು ಮುಖ್ಯಾಧಿಕಾರಿಗೆ ಸೂಚಿಸಿದರು.

      ತಾಲೂಕಿನ 22 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಅವ್ಯವಹಾರ ಹಿನ್ನೆಲೆ ರಾಜ್ಯ ತಂಡವು ಈಗಾಗಲೇ ತನಿಖಾ ಕಾರ್ಯ ನಡೆಸುತ್ತಿದೆ. ತನಿಖಾ ಕಾರ್ಯದಲ್ಲಿ ನಮ್ಮಹಸ್ತಕ್ಷೇಪವಿಲ್ಲ. ತನಿಖೆಗೆ ಅಡ್ಡಿಪಡಿಸುವುದಿಲ್ಲ. ತಪ್ಪು ಯಾರೇ ಮಾಡಿದ್ದರೂ ಅದಕ್ಕೆ ಶಿಕ್ಷೆಯಾಗಬೇಕು. ಆಪ್ತ ಅಭಿವೃದ್ದಿ ಅಧಿಕಾರಿಗಳನ್ನು ರಕ್ಷಣೆ ಮಾಡುತ್ತಿದ್ದೇನೆ ಎನ್ನುವುದು ಕೇವಲ ಊಹಪೋಹ. ಪಟ್ಟಣ ಪಂಚಾಯ್ತಿಯಲ್ಲಿಯೂ ಸಹ ಭ್ರಷ್ಟಚಾರ ನಡೆಸಿದ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಅದ್ದುಬಸ್ತು ಮಾಡಲಾಗಿದೆ ಎಂದರು.

     ಮುಖ್ಯಾಧಿಕಾರಿ ರಾಜುಬಣಕಾರ್ ಮಾತನಾಡಿ, ನಮ್ಮ ಅಧಿಕಾರ ಅವಧಿಯಲ್ಲಿ ಪೌರ ಕಾರ್ಮಿಕರ ಹಿತಕಾಯಲು ಸರ್ಕಾರದ ವತಿಯಿಂದ ಜಾರಿಯಾದ ಎಲ್ಲಾ ಯೋಜನೆಗಳನ್ನು ಪೌರ ಕಾರ್ಮಿಕರಿಗೆ ಕಲ್ಪಿಸಲು ಆಸಕ್ತಿವಹಿಸಲಾಗಿದೆ. ಕಾರ್ಮಿಕರು, ಕಾಯಕ ಜೊತೆಗೆ ಆರೋಗ್ಯದ ಬಗ್ಗೆ ಜಾಗೃತಿವಹಿಸಲು ಪಟ್ಟಣ ಪಂಚಾಯ್ತಿ ವತಿಯಿಂದ ಉಚಿತ ಚಿಕಿತ್ಸೆ ಹಾಗೂ ಸ್ವಚ್ಚತಾ ಕಾರ್ಯದ ಸಲಕರಣಗಳನ್ನು ನೀಡಲಾಗುವುದು ಎಂದರು.

     ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯೆ ಶಾಂತಕುಮಾರಿ, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಪಾಪಣ್ಣ, ಪಟ್ಟಣ ಪಂಚಾಯ್ತಿ ಸದಸ್ಯರಾದ ರವಿಕುಮಾರ್, ರಮೇಶ್, ಲುಕ್ಮಾನ್‍ಖಾನ್, ಮಂಜಣ್ಣ, ಅಹಮದ್‍ಅಲಿ, ಶಖೀಲ್‍ಅಹಮದ್, ನಿರ್ಮಲಕುಮಾರಿ, ವಿಶಾಲಾಕ್ಷಿ, ಲೋಕಮ್ಮ, ಮಂಜಮ್ಮ, ಆರೋಗ್ಯ ನಿರೀಕ್ಷಕ ಕಿಫಾಯತ್, ಆರೋಗ್ಯಾಧಿಕಾರಿ ಅಂಬ್ರಿನ್‍ತಾಜ್, ಪತ್ರಕರ್ತ ರಾಜಪ್ಪ ಸೇರಿದಂತೆ ಪೌರಕಾರ್ಮಿಕರು ಇತರರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link