ಹರಿಹರ:
ನಾಡಿನಲ್ಲಿ ಅನೇಕ ಸಾಂಸ್ಕತಿಕ ಸಂಘಗಳು ಚೆನ್ನಾಗಿ ಕಾರ್ಯನಿರ್ವಹಿಸುತ್ತಿದ್ದು ಅದರಲ್ಲಿ ಹರಿಹರದ ಸಾಹಿತ್ಯ ಸಂಗಮ ಸಂಸ್ಥೆ ಮೇಲ್ದರ್ಜೆಯಲ್ಲಿದೆ ಎಂದು ಸಂತೆಬೆನ್ನೂರು ಸ.ಪ್ರ.ದ.ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಬಿ.ಷಣ್ಮಖಪ್ಪ ಹೇಳಿದರು.
ನಗರದ ಸಾಹಿತ್ಯ ಸಂಗಮ ಸಂಸ್ಥೆ ಶ್ರೀ ಗುರುತಿಪ್ಪೇರುದ್ರಸ್ವಾಮಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ 2018ರ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು ಪ್ರತಿಭೆಯನ್ನು ಗುರ್ತಿಸಿ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.
ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿ ಇನ್ನೂ ಹೆಚ್ಚು ಅಂಕಗಳನ್ನು ಪಡೆಯಲು ಪ್ರತಿಭಾ ಪುರಸ್ಕಾರ ಸಹಾಯವಾಗುತ್ತದೆ. ಸಾಹಿತ್ಯ ಸಂಗಮದಿಂದ ಚೇತನಗಳ ಅನಾವರಣವಾಗುತ್ತಿದೆ. ಪೋಷಕರು ಮತ್ತು ಸಾಹಿತ್ಯಾಭಿಮಾನಿಗಳ ಸಹಕಾರದಿಂದ ಮಾತ್ರ ಇದು ಸಾಧ್ಯ ಎಂದು ತಿಳಿಸಿದರು
ಹಿಂದೆ ಗುರುಕುಲ ಪದ್ಧತಿ ಇತ್ತು. ಭಾರತೀಯ ಶಿಕ್ಷಣ ಮೌಲ್ಯಯುತವಾಗಿತ್ತು. ಬ್ರಿಟಿಷರ ಆಗಮನದ ನಂತರ ಪಾಶ್ಚಿಮಾತ್ಯ ಶಿಕ್ಷಣದಿಂದ ಭಾರತಿಯರ ಜೀವನ ಶಿಕ್ಷಣ ದೂರ ಹೋಗುತ್ತಿದೆ. ವಿದ್ಯಾವಂತರಿಂದಲೇ ಸಹಬಾಳ್ವೆ, ಸಾಮರಸ್ಯದ ಬದುಕಿಗೆ ತೊಂದರೆಯಾಗುತ್ತಿದೆ ಎಂದರು.
ವಿದ್ಯೆಯನ್ನು ಸಾಧನೆಯಿಂದ ಪಡೆದರೆ ಬದುಕಿನಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ವಿದ್ಯಾರ್ಥಿಗಳು ಧನಾತ್ಮಕ ಚಿಂತನೆಯನ್ನು ಸದಾ ಹೊಂದಿರಬೇಕು. ಕೌಶಲ್ಯತೆಯುತ ಜೀವನ ನಮ್ಮದಾಗಬೇಕು. ಆ ಆಧಾರದ ಮೇಲೆಯೇ ನಮ್ಮ ಪ್ರಗತಿ ರೂಪುಗೊಳ್ಳುತ್ತದೆ ಎಂದು ತಿಳಿಸಿದರು. ತುಕಾಮಣಿಸಾ ಭೂತೆ ಮಾತನಾಡಿ ಪ್ರತಿಭಾವಂತರನ್ನು ಸನ್ಮಾನಿಸುವುದರಿಂದ ಅವರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಿಕೊಂಡು ಸಮಾಜದಲ್ಲಿ ಗುರುತಿಸಿಕೊಳ್ಳುತ್ತಾರೆ ಎಂದರು. 25ವರ್ಷಗಳಿಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರ್ತಿಸಿ ಅವರನ್ನು ಗೌರವಿಸುತ್ತಾ ಬಂದಿದ್ದೇವೆ ಎಂದರು.
ಇನ್ನೂ ಹೆಚ್ಚು ಅಂಕಪಡೆದು ಉನ್ನತ ಸ್ಥಾನಗಳಿಸುವ ಪ್ರೇರಣೆ ವಿದ್ಯಾರ್ಥಿಗಳಲ್ಲಿ ಉಂಟಾಗಲಿ ಎಂಬುದು ನಮ್ಮ ಉದ್ದೇಶ. ವಿದ್ಯಾರ್ಥಿಗಳು ಸಾಂಸ್ಕತಿಕವಾಗಿ, ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು ಎಂದು ಹೇಳಿದರು.
ಮಕ್ಕಳಲ್ಲಿ ಸಂಸ್ಕತಿ, ನೈತಿಕಮೌಲ್ಯ ಬೆಳೆಸುವುದರಿಂದ ಅವರಲ್ಲಿ ಮಾನವೀಯತೆ ಗುಣ ಬೆಳೆಯುತ್ತದೆ. ಈ ದಿಸೆಯಲ್ಲಿ ಸಾಹಿತ್ಯ ಸಂಗಮ ಉತ್ತಮ ಕಾರ್ಯ ನಿರ್ವಹಿಸುತ್ತದೆ. ಪ್ರತಿವರ್ಷ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‍ಬುಕ್ ವಿತರಿಸುತ್ತಿದ್ದೇನೆ. ಎಲ್ಲಾ ಸೌಲಭ್ಯಗಳನ್ನು ಪಡೆದು ವಿದ್ಯಾರ್ಥಿಗಳು ಒಳ್ಳೆಯ ನಡತೆ ರೂಪಿಸಿಕೊಂಡು ಹೆಚ್ಚು ಅಂಕಗಳಿಸಿ ತಂದೆತಾಯಿಯರ ಹೆಸರು ಉಳಿಸಲಿ ಎಂದು ಆಶಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ನರಸಿಂಹಪ್ಪ ಮಾತನಾಡಿ ಸಾಹಿತ್ಯ ಸಂಗಮದಿಂದ ವಿದ್ಯಾರ್ಥಿಗಳಿಗೆ ಏರ್ಪಡಿಸಿರುವ ಪ್ರತಿಭಾ ಪುರಸ್ಕಾರ ಅತ್ಯಂತ ಶ್ಲಾಘನೀಯವಾದುದು. ಈ ಸಂಸ್ಥೆಯಿಂದ ಒಳ್ಳೆಯ ಕಾರ್ಯಕ್ರಮಗಳು ನಡೆಯುತ್ತಿವೆ. ಇನ್ನೂ ಹೆಚ್ಚಿನ ಕಾರ್ಯಕ್ರಮಗಳು ನಡೆಯಲಿ ಎಂದು ಹಾರೈಸಿದರು.
ವಾಣಿಜ್ಯೋದ್ಯಮಿಗಳಾದ ಶರದ್ ಕೊಣ್ಣೂರು ಮಾತನಾಡಿ, ಪ್ರತಿಭಾ ಪುರಸ್ಕಾರ ಹೊಂದಿದ ವಿದ್ಯಾರ್ಥಿಗಳು ಇನ್ನೂ ಹೆಚ್ಚಿನ ಜ್ಞಾನ ಸಂಪಾದಿಸಿಕೊಂಡು ಯಶಸ್ವಿ ವಿದ್ಯಾರ್ಥಿಜೀವನ ಹೊಂದುವಂತೆ ತಿಳಿಸಿದರು. ಸಂಸ್ಕತಿ, ಮೌಲ್ಯ ಜೀವನದಲ್ಲಿ ಮುಖ್ಯ. ಶಿಸ್ತು ನಿಮ್ಮನ್ನು ಕಾಪಾಡುತ್ತದೆ. ಇವೆಲ್ಲವನ್ನೂ ಹೊಂದಿ ಉತ್ತಮ ವಿದ್ಯಾರ್ಥಿಗಳಾಗಲು ಕರೆ ನೀಡಿದರು. ಡಿ.ಎಂಮಂಜುನಾಥಯ್ಯ ಪ್ರಾಸ್ತಾವಿಕವಾಗಿ ನುಡಿದು ಸಾಹಿತ್ಯ ಸಂಗಮ ನಡೆದು ಬಂದ ದಾರಿಯನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಸಾಹಿತ್ಯ ಸಂಗಮದ ಅಧ್ಯಕ್ಷ ವಿ.ಬಿ.ಕೊಟ್ರೇಶಪ ಸಾಹಿತ್ಯ ಸಂಗಮದ ಉಪಾಧ್ಯಕ್ಷ ಪಿ.ಎಂ.ಇಂದೂಧರಸ್ವಾಮಿ ಸ್ವಾಗತಿಸಿದರು. ಕಾರ್ಯದರ್ಶಿ ಸುಬ್ರಹ್ಮಣ್ಯ ನಾಡಿಗೇರ್ ವಂದಿಸಿದರು. ಎಸ್.ಹೆಚ್.ಹೂಗಾರ್, ಡಿ.ಟಿ.ತಿಪ್ಪಣ್ಣರಾಜು, ಎಸ್.ಬಿ.ಮಹಬೂಬ್‍ಬಾಷ, ಬಿ.ಕೆ.ದಿನೇಶ್. ಬಿ.ಬಿ.ರೇವಣನಾಯ್ಕ ಹಿ.ಗೂ.ದುಂಡ್ಯಪ್ಪ, ಶ್ರೀಮತಿ ಗಂಗಮ್ಮ ಸುರೇಶಪ್ಪ, ರವಿಕುಮಾರ್ ನವಲಗುಂದ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
