ಕೊಟ್ಟೂರು
ಪಟ್ಟಣದ ಗೊರ್ಲಿ ಶರಣಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪಿಯುಸಿ ಪರೀಕ್ಷಾ ಕೇಂದ್ರದಲ್ಲಿ ಒಬ್ಬ ವಿದ್ಯಾರ್ಥಿ ಮಾತ್ರ ಭೂಗೋಳ ಶಾಸ್ತ್ರ ಪರೀಕ್ಷೆ ಬರೆದಿದ್ದಾನೆ.ಹೊಸಪೇಟೆ ವಿಭಾಗದ ಪಿಯುಸಿ ಪರೀಕ್ಷಾ ಕೇಂದ್ರಗಳಲ್ಲಿ ಭೂಗೋಳ ಶಾಸ್ತ್ರ ಪರೀಕ್ಷೆ ಬರೆದ ಏಕೈಕ ವಿದ್ಯಾರ್ಥಿ ಜಿ.ಎ. ಪ್ರಕಾಶ.
ಮಂಗಳವಾರ ಹೊಸಪೇಟೆಯಿಂದ ತಹಶೀಲ್ದಾರ್, ಹಿರಿಯ ಪ್ರಾಚಾರ್ಯರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಪೊಲೀಸರ ಸುಪರ್ಧಿಯಲ್ಲಿ ಭೂಗೋಳ ಶಾಸ್ತ್ರ ಪರೀಕ್ಷಾ ಪ್ರಶ್ನೆ ಪತ್ರಿಕೆಯನ್ನು ತಂದು ಕೊಡಲಾಯಿತು.
ಈ ಏಕೈಕ ವಿದ್ಯಾರ್ಥಿ ಜಿ.ಎ. ಪ್ರಕಾಶ ಪರೀಕ್ಷೆ ಬರೆಯುತ್ತಿದ್ದರೆ, ಮುಖ್ಯ ಪರೀಕ್ಷಾ ಅಧೀಕ್ಷಕರು, ಸಹಾ ಮುಖ್ಯ ಪರೀಕ್ಷಕರು, ಇಬ್ಬರು ವಿಶೇಷ ಜಾಗೃತದಳ ಸಿಬ್ಬಂದಿ, ಮೂವರು ಜಿಲ್ಲಾ ವಿಶೇಷ ಜಾಗೃತದಳ ಸಿಬ್ಬಂದಿ, ಉತ್ತರ ಪತ್ರಿಕಾ ಪಾಲಕರು, ಕಚೇರಿ ಅಧೀಕ್ಷಕರು, ಇಬ್ಬರು ಪೊಲೀಸರು ಹಾಗೂ ಗೊರ್ಲಿ ಶರಣಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಕೊತ್ಲಮ್ಮ ಸೇರಿದಂತೆ 16 ಜನ ಸಿಬ್ಬಂದಿ ಕಾವಲಿದ್ದರು.
ಮನೆಯಲ್ಲಿ ಆರ್ಥಿಕ ಸಮಸ್ಯೆಯಿಂದಾಗಿ ಪ್ರಥಮ ಪಿಯುಸಿ ಮಾತ್ರ ಓದಿದ್ದ ಜಿ.ಎ. ಪ್ರಕಾಶ, ತನ್ನ ಸಹಪಾಠಿಗಳು ಶಿಕ್ಷಣದಲ್ಲಿ ಪ್ರಗತಿ ಸಾಧಿಸಿದ್ದನ್ನು ಕಂಡು ಓದುವ ಛಲದೊಂದಿಗೆ ಖಾಸಗಿ ಅಭ್ಯರ್ಥಿಯಾಗಿ ಇಲ್ಲಿನ ಗೊರ್ಲಿ ಶರಣಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜ್‍ನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಕಟ್ಟಿದ್ದರು.
ಗೊರ್ಲಿಶರಣಪ್ಪ ಪದವಿ ಪೂರ್ವ ಕಾಲೇಜ್‍ನ ಪಿಯುಸಿ ಪರೀಕ್ಷಾ ಕೇಂದ್ರದಲ್ಲಿ ಭೂಗೋಳ ಶಾಸ್ತ್ರ ವಿಷಯವನ್ನು ಯಾವ ವಿದ್ಯಾರ್ಥಿಯೂ ತೆಗೆದುಕೊಂಡಿರಲಿಲ್ಲ. ಜಿ.ಎ. ಪ್ರಕಾಶ ಮಾತ್ರ ಈ ವಿಷಯ ತೆಗೆದುಕೊಂಡಿದ್ದರಿಂದ ಈತನೊಬ್ಬನೇ ಪರೀಕ್ಷೆ ಬರೆದಿದ್ದಾನೆ.