ಹೊಸಪೇಟೆ :
ಇಲ್ಲಿನ ಎಸ್‍ಆರ್‍ಆರ್ ನಗರ ಹಾಗು ಚಲುವಾದಿಕೇರಿಗಳಿಗೆ ಶಾಸಕ ಆನಂದಸಿಂಗ್ ಪೊಲೀಸ್ ಭದ್ರತೆಯೊಂದಿಗೆ ಸಿಎಎ ಕರಪತ್ರ ಹಂಚಲು ಹೋದಾಗ ಮಂಗಳವಾರ ಕೂಡ ಅಲ್ಲಿನ ನಿವಾಸಿಗಳು ಗೋ ಬ್ಯಾಕ್ ಭಿತ್ತಿಪತ್ರ ಪ್ರದರ್ಶಿಸಿದರು.
ದಲಿತರು ಹಾಗು ಮುಸ್ಲೀಮರು ಹೆಚ್ಚಿನ ಸಂಖ್ಯೆಯಲ್ಲಿರುವ ಚಲವಾದಿಕೇರಿ ಹಾಗು ಎಸ್‍ಆರ್‍ಆರ್ ನಗರದಲ್ಲಿ ಸೋಮವಾರ ಬಿಜೆಪಿ ಮುಖಂಡರು ಹಾಗು ಕಾರ್ಯಕರ್ತರು ಸಿಎಎ ಕರಪತ್ರ ಹಂಚಲು ಹೋಗಿದ್ದಾಗ ಅಲ್ಲಿನ ನಿವಾಸಿಗಳು ಭಾರಿ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದ ಕೆಲಕಾಲ ಗೊಂದಲ ಉಂಟಾಗಿ ಪೊಲೀಸರು ಮಧ್ಯೆ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದ್ದರು.
ಇಂದು ಮಂಗಳವಾರ ಶಾಸಕ ಆನಂದಸಿಂಗ್ ಅದೇ ವಾರ್ಡುಗಳಿಗೆ ಪೊಲೀಸ್ ಭದ್ರತೆಯೊಂದಿಗೆ ತೆರಳಿದಾಗ ವಾರ್ಡಿನ ಕೆಲ ಯುವಕರು ಆರಂಭದಲ್ಲಿ ಘೋಷಣೆಗಳನ್ನು ಕೂಗಿದರು. ಪೊಲೀಸರು ಅವರನ್ನು ಸಮಾಧಾನ ಪಡಿಸಿದ ಬಳಿಕ ಎಲ್ಲರು ಸುಮ್ಮನಾದರು. ನಂತರ ಘೋಷಣೆಗಳನ್ನು ಕೂಗದೇ, ಬರೀ ‘ಗೋ ಬ್ಯಾಕ್’ ಭಿತ್ತಿಪತ್ರ ಹಿಡಿದುಕೊಂಡು ನಿಂತಿದ್ದರು. ಜೊತೆಗೆ ಅಂಗಡಿ ಮುಂಗಟ್ಟುಗಳಿಗೆ ಹಾಗು ಎಲ್ಲೆಂದರಲ್ಲಿ “ವಿ ರಿಜೆಕ್ಟ್ ಸಿಎಎ, ಎನ್‍ಆರ್‍ಸಿ, ಎನ್‍ಪಿಆರ್” ಘೋಷಣೆಗಳುಳ್ಳ ಭಿತ್ತಿಪತ್ರಗಳನ್ನು ಅಂಟಿಸಿದ್ದರು. ಇದನ್ನು ಗಮನಿಸಿದ ಶಾಸಕರು ಕೂಡ ಮರು ಮಾತನಾಡದೇ ಅಲ್ಲಲ್ಲಿ ಕರಪತ್ರ ಹಂಚುತ್ತಾ ಸುಮ್ಮನೇ ಮುಂದಕ್ಕೆ ಸಾಗಿದರು. ಬಳಿಕ ತರಕಾರಿ ಮಾರುಕಟ್ಟೆ ಹಾಗು ಮುಖ್ಯರಸ್ತೆಗಳಲ್ಲಿ ಸಂಚರಿಸಿ ಸಿಎಎ ಪರ ಕರಪತ್ರ ಹಂಚಿದರು.
ಬಿಜೆಪಿ ಮಂಡಲ ಅಧ್ಯಕ್ಷ ಬಸವರಾಜ ನಾಲತವಾಡ, ಮಾಜಿ ಅಧ್ಯಕ್ಷ ಅನಂತ ಪಧ್ಮನಾಭ, ಕವಿತಾಸಿಂಗ್ ಸೇರಿದಂತೆ ಇನ್ನಿತರರು ಇದ್ದರು.ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಸೂಕ್ತ ಬಂದೋಬಸ್ತ್ ಒದಗಿಸಿದ್ದರು. ಬಿಜೆಪಿ ಕಾರ್ಯಕರ್ತರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರೇ ಕಂಡು ಬಂದಿದ್ದು ವಿಶೇಷವಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
