ರಾಣಿಬೆನ್ನೂರು:
ಅತೀ ಹಿಂದುಳಿದ ಮತ್ತು ಬಡ ಸಮಾಜವಾಗಿರುವ ಮಡಿವಾಳ ಸಮಾಜವನ್ನು ಪ.ಜಾತಿಗೆ ಸೇರಿಸಬೇಕೆಂದು ಈಗಾಗಲೇ ರಾಜ್ಯಮಟ್ಟದಲ್ಲಿ ಸಂಘವು ಅನೇಕ ಹೋರಾಟಗಳನ್ನು ಮಾಡಿದ್ದು, ಶೀಘ್ರವೇ ರಾಜ್ಯ ಸರಕಾರವು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಚಿತ್ರದುರ್ಗದ ಬಸವ ಮಾಚಿದೇವ ಮಹಾಸ್ವಾಮಿಗಳು ಹೇಳಿದರು.
ರವಿವಾರ ಸ್ಥಳೀಯ ಅಗಸರ ಮಠದಲ್ಲಿ ಶಹರ ಮಡಿವಾಳ ಸಂಘ, ಶ್ರೀ ಅಗಸರ ಮಠ ಟ್ರಸ್ಟ್ ಸಮಿತಿ ಹಾಗೂ ಶಿವಶರಣೆ ಮಲ್ಲಿಗೆ ಮಾತಾ ಮಹಿಳಾ ಸಂಘ ಇವುಗಳ ಆಶ್ರಯದಲ್ಲಿ ಶ್ರೀ ವೀರಘಂಟಿ ಮಡಿವಾಳ ಮಾಚಿದೇವರ, ಶ್ರೀಕಾಶಿ ವಿಶ್ವನಾಥ, ಶ್ರೀಗುರು ಗೋವಿಂದಾನಂದ, ಶ್ರೀ ಬ್ರಹ್ಮಾನಂದ ಸ್ವಾಮಿಗಳ ಮೂರ್ತಿಗಳಿಗೆ ಶ್ರಾವಣ ಮಾಸದ ಪ್ರಯುಕ್ತ ಏರ್ಪಡಿಸಿದ್ದ ವಿವಿಧ ಧಾರ್ಮಿಕ ಪೂಜಾ, ಧಾರ್ಮಿಕ ಕಾರ್ಯಕ್ರಮ ಹಾಗೂ ಧರ್ಮಸಭೆಯ ಸಾನಿಧ್ಯ ವಹಿಸಿ ಮಾತನಾಡಿದರು.
ಶರಣರಲ್ಲಿಯೇ ಅಗ್ರಗಣ್ಯರಲ್ಲಿ ಓರ್ವರಾಗಿರುವ ಮಡಿವಾಳ ಮಾಚಿದೇವರ ಪ್ರಾಧಿಕಾರವನ್ನು ರಚಿಸಬೇಕು. ಮಾಚಿದೇವರ ಹುಟ್ಟೂರಾದ ದೇವರಹಿಪ್ಪರಗಿಯಲ್ಲಿ ಕೂಡಲ ಸಂಗಮ ಮಾದರಿಯಲ್ಲಿ ಅಭಿವೃದ್ಧಿಪಡಿಸಬೇಕು, ಸಮಾಜದಲ್ಲಿ ಯಾವುದೇ ಒಂದು ಜನಾಂಗವು ಸಂಘಟನೆಯೊಂದಿಗೆ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಮುಂದೆ ಬರಬೇಕಾದರೆ ಆ ಸಮಾಜದಲ್ಲಿನ ಎಲ್ಲಾ ಮಕ್ಕಳು ಶಿಕ್ಷಣವಂತರಾಗಬೇಕು ಎಂದರು.
ಇದರಿಂದ ಆ ಜನಾಂಗದ ಉದ್ಧಾರವಾಗಲು ಸಾಧ್ಯ. ಈ ದಿಸೆಯಲ್ಲಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಪಾಲಕರು ಮತ್ತು ಪೋಷಕರು ಸ್ವಯಂ ಪ್ರೇರಿತರಾಗಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಸದಾ ಮುಂದೆ ಬರುವುದು ಇಂದು ಬಹಳಷ್ಟು ಅನಿವಾರ್ಯವಾಗಿದೆ ಎಂದರು.
ಎಲ್ಲ ಸಮಾಜಗಳಲ್ಲಿಯೂ ಪ್ರತಿಭಾನ್ವಿತ ಮಕ್ಕಳಿದ್ದಾರೆ. ಅಂತಹ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ಶಿಕ್ಷಕರ ಜೊತೆಗೆ ಪಾಲಕರು ಕೈಜೋಡಿಸಬೇಕು. ಪ್ರತಿಭಾನ್ವಿತರಿಗೆ ಅವಕಾಶಗಳು ಕಡಿಮೆ, ಬಹಳಷ್ಟು ಅವಕಾಶ ಮತ್ತು ಸೌಲಭ್ಯಗಳಿದ್ದರೂ ಪ್ರತಿಭೆಯೇ ಇರದ ಮಕ್ಕಳೂ ಸಹ ಇದ್ದಾರೆ. ಎಲ್ಲಾ ಮಕ್ಕಳನ್ನು ಏಕತಾ ಮನೋಬಾವನೆಯಿಂದ ಕಾಣುವುದರ ಮೂಲಕ ಅವರುಗಳಿಗೆ ಉತ್ತಮವಾದ ಬೋಧನೆಯ ಮೂಲಕ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಶ್ರೀಗಳು ನುಡಿದರು.
ಸಂಘದ ಅಧ್ಯಕ್ಷ ಅಶೋಕ ಮಡಿವಾಳರ, ಕಾರ್ಯದರ್ಶಿ ರಾಜು ಮಡಿವಾಳರ, ಪತ್ತಕರ್ತ ಎಂ.ಚಿರಂಜೀವಿ, ಚಂದ್ರಪ್ಪ ಚಳಗೇರಿ, ಕುಮಾರ ಮಡಿವಾಳರ, ಮಂಜುನಾಥ ಮಡಿವಾಳರ, ಗುಡ್ಡಪ್ಪ ಮಡಿವಾಳರ, ವೀರಣ್ಣ ಹುಲಿಹಳ್ಳಿ, ನಾಗರಾಜ ಮಡಿವಾಳರ, ಸುನಿತಾ ಮಡಿವಾಳರ, ಮಾಲತೇಶ ಮಡಿವಾಳರ, ಸುರೇಶ ಮಡಿವಾಳರ, ನಾಗರಾಜ ಮಡಿವಾಳರ, ಮಧುಕುಮಾರ ಮಡಿವಾಳರ, ಗಿರೀಶ ಮಡಿವಾಳರ, ಮಲ್ಲೇಶ ಮಡಿವಾಳರ, ಶಂಭು ಮಡಿವಾಳರ ಸೇರಿದಂತೆ ಮತ್ತಿತರರು ಇದ್ದರು.
ಇದಕ್ಕೂ ಮುನ್ನ ಬೆಳಿಗ್ಗೆಯಿಂದ ಶ್ರೀ ವೀರಘಂಟಿ ಮಡಿವಾಳ ಮಾಚಿದೇವರ, ಶ್ರೀ ಕಾಶಿ ವಿಶ್ವನಾಥ, ಶ್ರೀ ಗುರು ಗೋವಿಂದಾನಂದ, ಶ್ರೀ ಬ್ರಹ್ಮಾನಂದ ಸ್ವಾಮಿಗಳ ಮೂರ್ತಿಗಳಿಗೆ ಅಭಿಷೇಕ, ಸಾಮೂಹಿಕ ಸತ್ಯನಾರಾಯಣ ಪೂಜಾ, ರುದ್ರಾಭಿಷೇಕ, ಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಭಕ್ತಿಪೂರ್ವವಾಗಿ ನಡೆದವು. ನಂತರ ಮಹಾಪ್ರಸಾದ ನೆರವೇರಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
