ವಿದ್ಯುತ್ ಸೌಕರ್ಯ ಇಲ್ಲದ ಹಾಸ್ಟಲ್

ಹಾವೇರಿ :

     ಸಮಾಜ ಕಲ್ಯಾಣ ಇಲಾಖೆ ಒಂದು ಕೋಟಿಗೂ ಅಧಿಕ ಹಣ ಖರ್ಚು ಮಾಡಿ ಈ ಹಾಸ್ಟೇಲ್ ಕಟ್ಟಡ ನಿರ್ಮಿಸಿದೆ. ಉನ್ನತ ವ್ಯಾಸಂಗಕ್ಕಾಗಿ ಗ್ರಾಮೀಣ ಪ್ರದೇಶದಿಂದ ನಗರಕ್ಕೆ ಬರುವ ಬಾಲಕಿಯರಿಗಾಗಿ ಈ ಹಾಸ್ಟೇಲ್ ನಿರ್ಮಿಸಲಾಗಿದೆ. ಹಾಸ್ಟೇಲ್ ಕಟ್ಟಡ ನಿರ್ಮಾಣವಾಗಿ ಒಂದು ವರ್ಷವೇ ಕಳೆದು ಹೋಗಿದೆ.

       ಹಾಸ್ಟೇಲ್ ಕಟ್ಟಡದಲ್ಲಿ ಬಹುತೇಕ ಎಲ್ಲ ಸೌಕರ್ಯಗಳಿವೆ. ಆದ್ರೆ ಕಟ್ಟಡಕ್ಕೆ ಇನ್ನೂ ವಿದ್ಯುತ್ ಸೌಕರ್ಯ ಸಿಕ್ಕಿಲ್ಲ. ಹೀಗಾಗಿ ಕಟ್ಟಡ ಉದ್ಘಾಟನೆ ಆಗದೆ ಹಾಳು ಸುರಿಯುತ್ತಿದೆ. ಕಟ್ಟಡಕ್ಕೆ ವಿದ್ಯುತ್ ಸೌಕರ್ಯ ದೊರೆತಿಲ್ಲ ಅನ್ನೋ ಒಂದೇ ಒಂದು ಕಾರಣಕ್ಕೆ ಭವ್ಯವಾದ ಕಟ್ಟಡ ಭಯಾನಕವಾಗಿದೆ. ಇದು ತಾಲೂಕಿನ ದೇವಗಿರಿ ಯಲ್ಲಾಪುರ ಗ್ರಾಮದ ಬಳಿ ನಿರ್ಮಾಣವಾಗಿರುವ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ದುಸ್ಥಿತಿಯಾಗಿದೆ.

      ಇಷ್ಟಕ್ಕೂ ಈ ಕಟ್ಟಡ ಇರೋದು ಜಿಲ್ಲಾಡಳಿತ ಭವನದ ಸಮೀಪದ ದೂರದಲ್ಲಿದೆ. ಕೋಟ್ಯಂತರ ರುಪಾಯಿ ಖರ್ಚು ಮಾಡಿದ ಕಟ್ಟಡದ ಕಿಟಕಿ ಗಾಜು ಉದ್ಘಾಟನೆಗೆ ಮುನ್ನವೇ ಒಡೆದು ಹೋಗಿವೆ.ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಕಟ್ಟಿದ ಕಟ್ಟಡವಾಗಿದೆ. ಸುಂದರ ಕಟ್ಟಡದಲ್ಲಿ ಟ್ಯೂಬ್ ಲೈಟ್, ಪ್ಯಾನ್ ಸೇರಿದಂತೆ ಎಲ್ಲ ಸೌಲಭ್ಯ ಕಲ್ಪಿಸಲಾಗಿದೆ. ಆದ್ರೆ ಕಟ್ಟಡಕ್ಕೆ ಮಾತ್ರ ಈವರೆಗೂ ಕರೆಂಟ್ ಸಪ್ಲೈ ಸಿಕ್ಕಿಲ್ಲ. ಹೀಗಾಗಿ ಕಟ್ಟಡಕ್ಕೆ ಇನ್ನೂ ಉದ್ಘಾಟನೆ ಭಾಗ್ಯ ದೊರೆತಿಲ್ಲ. ಆಗಲೆ ಕಟ್ಟಡದ ಕಿಟಕಿ ಗಾಜುಗಳು ಪುಡಿಪುಡಿ ಆಗಿವೆ.

      ನಿರ್ಮಾಣವಾಗಿರುವ ಸುಂದರ ಕಟ್ಟಡ. ಕಟ್ಟಡದಲ್ಲಿ ಕಾಣುವ ಟ್ಯೂಬಲೈಟ್, ಪ್ಯಾನ್. ಸಂಪೂರ್ಣ ಜಖಂ ಆಗಿರುವ ಕಿಟಕಿ ಗಾಜು. ಕರೆಂಟ್ ಸಪ್ಲೈ ಇಲ್ಲದ ಕಟ್ಟಡ. ನಿರ್ಮಿಸುವ ಮುನ್ನ ಕಟ್ಟಡಕ್ಕೆ ಏನೇನು ಬೇಕು ಎಂಬುದನ್ನು ಇಲಾಖೆ ಮೊದಲೆ ಅರಿತುಕೊಂಡಿದ್ದರೆ ಕಟ್ಟಡಕ್ಕೆ ಈ ದುಃಸ್ಥಿತಿ ಬರ್ರುತ್ತಿರಲ್ಲಿಲ್ಲಾ ಎಂದು ಇಲಾಖೆಗೆ ಹಿಡಿಶಾಪ ಹಾಕುವಂತಾಗಿದ್ದು,ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಡೆಗೆ ಟೀಕೆ ವ್ಯಕ್ತವಾಗುತ್ತಿದೆ. 

        ಗ್ರಾಮೀಣ ಪ್ರದೇಶದ ಬಡ ಹೆಣ್ಣುಮಕ್ಕಳ ಉನ್ನತ ವ್ಯಾಸಂಗಕ್ಕೆ ಸರಕಾರ ಕೋಟಿ ಕೋಟಿ ಹಣ ಖರ್ಚು ಮಾಡುತ್ತಿದೆ. ಅದರ ಭಾಗವಾಗಿ ಒಂದು ಕೋಟಿಗೂ ಅಧಿಕ ಹಣ ಖರ್ಚು ಮಾಡಿ ಕಟ್ಟಡ ನಿರ್ಮಿಸಲಾಗಿದೆ. ಜಿಲ್ಲಾ ನಿರ್ಮಿತಿ ಕೇಂದ್ರದ ಮೂಲಕ ಸಮಾಜ ಕಲ್ಯಾಣ ಇಲಾಖೆ ಈ ಹಾಸ್ಟೇಲ್ ಕಟ್ಟಡ ನಿರ್ಮಿಸಿದೆ. ಆದರೆ ಇಷ್ಟೊಂದು ದೊಡ್ಡ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸೋಕೆ ಇಲಾಖೆಯಿಂದ ಈವರೆಗೂ ಸಾಧ್ಯವಾಗಿಲ್ಲ.

        ಮೇಲಾಗಿ ಈ ಹಾಸ್ಟೇಲ್ ಕಟ್ಟಡ ಇರೋದು ಹಾವೇರಿ ನಗರದಿಂದ ಎಂಟತ್ತು ಕಿ.ಮೀ ದೂರದಲ್ಲಿ. ಬಾಲಕಿಯರು ಕಾಲೇಜಿಗೆ ಹೋಗಿ ಇಲ್ಲಿಗೆ ಬರೋದು ದೂರದ ಮಾತು. ಆದ್ರೆ ಇಲಾಖೆ ಅಧಿಕಾರಿಗಳು ಎಲ್ಲವನ್ನು ಪರಿಶೀಲಿಸಿ ಕಟ್ಟಡ ನಿರ್ಮಾಣಕ್ಕೆ ಮುಖದಾಗಬೇಕಿತ್ತು. ಇದೆಲ್ಲವೂ ಗೊತ್ತಿದ್ದೋ, ಗೊತ್ತಿಲ್ಲದೆಯೋ ಕಟ್ಟಡ ನಿರ್ಮಾಣವಾಗಿದೆ. ಕಟ್ಟಡಕ್ಕೆ ವಿದ್ಯುತ್ ಸೌಲಭ್ಯ ಸಿಕ್ಕಿಲ್ಲ ಅನ್ನವ ಕಾರಣಕ್ಕೆ ಈವರೆಗೂ ಕಟ್ಟಡದ ಬಾಗಿಲು ತೆರೆದಿಲ್ಲ.

        ಹಾಸ್ಟೇಲ್ ನ ಕಿಟಕಿ ಗಾಜು ಸಂಪೂರ್ಣ ಪುಂಡ ಪೋಕರಿಗಳ ಹೊಡೆತಕ್ಕೆ ಸಿಕ್ಕು ಒಡೆದು ಹೋಗಿವೆ. ಕೋಟ್ಯಂತರ ರುಪಾಯಿ ಖರ್ಚು ಮಾಡಿದ ಕಟ್ಟಡವನ್ನು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಆದಷ್ಟು ಬೇಗ ಉದ್ಘಾಟನೆ ಮಾಡಬೇಕು ಇಲ್ಲವಾದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಸ್ಎಫ್ಐ ಸಂಘಟನೆ ಮುಖಂಡ ಬಸವರಾಜ ಭೋವಿ ಎಚ್ಚರಿಸಿದ್ದಾರೆ. ಈ ಬಗ್ಗೆ ಇಲಾಖೆ ಅಧಿಕಾರಿಗಳನ್ನು ಕೇಳಿದರೆ ಹಾಸ್ಟೇಲ್ ಗೆ ಕರೆಂಟ್ ಸೌಲಭ್ಯ ಸಿಕ್ಕಿಲ್ಲ.

      ಇದರಿಂದ ಕಟ್ಟಡ ಉದ್ಘಾಟನೆ ಆಗಿಲ್ಲ. ಹಾಸ್ಟೇಲ್ ಗೆ ವಿದ್ಯುತ್ ಸೌಕರ್ಯ ಕಲ್ಪಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುನೋದನೆ ಸಿಕ್ಕ ಕೂಡಲೇ ಕಟ್ಟಡಕ್ಕೆ ವಿದ್ಯುತ್ ಸೌಕರ್ಯ ಒದಗಿಸಿ, ಕಟ್ಟಡಕ್ಕೆ ಉದ್ಘಾಟನೆ ಭಾಗ್ಯ ಕಲ್ಪಿಸಲಾಗುವುದು ಎನ್ನುತ್ತಾರೆ.
ಹಿಂದುಳಿದ ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಒತ್ತು ನೀಡಬೇಕಾಬೇಗಿದ್ದು,ಕೋಟಿ ಹಣ ಸುರಿದು ಬಾಲಕಿಯರಿಗಾಗಿ ಕಟ್ಟಡ ನಿರ್ಮಿಸಿದರೂ ಉಪಯೋಗ ಇಲ್ಲದಿರುವುದು ಖೇದಕರ ಸಂಗತಿ.

      ಕೇವಲ ವಿದ್ಯುತ್ ಸೌಕರ್ಯ ಇಲ್ಲ ಕಾರಣಕ್ಕೆ ಕಟ್ಟಡ ಹಾಳು ಸುರಿಯುತ್ತಿದೆ. ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಕಟ್ಟಡಕ್ಕೆ ಸರಕಾರ ಲಕ್ಷಾಂತರ ರುಪಾಯಿ ಖರ್ಚು ಮಾಡಿ ವಿದ್ಯುತ್ ಸೌಲಭ್ಯ ಕಲ್ಪಿಸದೆ ಇರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಆದಷ್ಟು ಬೇಗ ಕಟ್ಟಡಕ್ಕೆ ಕರೆಂಟ್ ಕಲ್ಪಿಸಿ ಕಟ್ಟಡ ಬಳಕೆಗೆ ಸಿಗುವಂತಾಗಬೇಕು ಎಂಬುವುದು ಎಲ್ಲರ ಅಭಿಪ್ರಾಯವಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪರಿಹಾರಕ್ಕೆ ಮುಂದಾಗತ್ತಾರಾ ?

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap