ಬ್ಯಾಡಗಿ:
ಮತದಾನದಿಂದ ದೂರ ಉಳಿಯುವುದು ಆತ್ಮವಂಚನೆಗೆ ಸಮ, ಈ ಕುರಿತು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ನಂಬಿಕೆ ಗಳನ್ನು ಉಳಿಸಿಕೊಳ್ಳುವಂತೆ ಪುರಸಭೆ ಮುಖ್ಯಾಧಿಕಾರಿ ವಿ.ಎಮ್.ಪೂಜಾರ ಮನವಿ ಮಾಡಿದರು.
ಮಂಗಳವಾರ ಪಟ್ಟಣದ ಪುರಸಭೆ ಸಭಾಭವನದಲ್ಲಿ, ಪುರಸಭೆ ಆಡಳಿತ ಮಂಡಳಿ, ಸೃಷ್ಟಿ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಸ್ತ್ರೀಶಕ್ತಿ ಸಂಘ, ಅಣ್ಣಾ ಹಜಾರೆ ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಅಣಕು ಮತದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮತದಾನ ನಮ್ಮ ಸಂವಿಧಾನ ಬದ್ಧವಾಗಿ ನೀಡಿರುವ ಹಕ್ಕು ಇದರ ಸಮರ್ಪಕ ಬಳಕೆ ಪ್ರಜಾಪ್ರಭುತ್ವಕ್ಕೆ ಕೊಟ್ಟ ದೊಡ್ಡ ಗೌರವ, ಕಾರಣ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ ತಪ್ಪದೇ ಮತದಾನ ಮಾಡುವಂತೆ ಕೋರಿದರು.
ಸರ್ಕಾರದ ಆಯ್ಕೆ ನಿಮ್ಮಕೈಯಲ್ಲಿ: ನಮ್ಮನ್ನಾಳುವ ಪ್ರಜೆಗಳನ್ನು ಎಂತಹವರಿರಬೇಕು, ಯಾರಿರಬೇಕು ಎಂಬಿತ್ಯಾದಿ ಆಯ್ಕೆ ಸೇರಿದಂತೆ ಸರ್ಕಾರ ಇಂತಹದ್ದೇ ಇರಬೇಕೆಂಬ ಆಯ್ಕೆ ಕೂಡ ನಮ್ಮ ಕೈಯಲ್ಲಿದೆ, ಹೀಗಿರುವಾಗ ಮತದಾನ ದಿನವನ್ನು ಮೋಜು ಮಸ್ತಿಗಾಗಿ ನೀಡುವಂತಹ ರಜೆ ಎಂದು ಭಾವಿಸದೇ ತಪ್ಪದೇ ಮತದಾನ ಮಾಡುವಂತೆ ಮನವಿ ಮಾಡಿದರು.
ಶಿಕ್ಷೆಯೂ ಇಲ್ಲಿಂದಲೇ: ನಿವೃತ್ತ ಸೈನಿಕ ಮಲ್ಲೇಶ ಚಿಕ್ಕಣ್ಣವರ ಮಾತನಾಡಿ, ಹಿಂದಿನ 5 ವರ್ಷಗಳಲ್ಲಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಜನಪರವಾದ ಯಾವುದೇ ಕೆಲಸ ಕಾರ್ಯಗಳನ್ನು ಮಾಡದೇ ನಿರ್ಲಕ್ಷ್ಯ ತೋರುವ ತಪ್ಪಿತಸ್ಥ ಜನಪ್ರತಿನಿಧಿಯ ವಿರುದ್ಧವೂ ಮತ ಚಲಾವಣೆ ಮಾಡುವ ಮೂಲಕ ಶಿಕ್ಷೆಯನ್ನು ನೀಡು ವಂತಹ ವ್ಯವಸ್ಥೆ ಕೂಡ ಇಲ್ಲಿಂದಲೇ ಆಗಲಿದೆ ಎಂದರು.
ಮತಗಟ್ಟೆ ನಿರ್ಮಾಣ: ಪುರಸಭೆ ಅವರಣದಲ್ಲಿ ಅಣುಕು ಮತದಾನವೆಂಬಂತೆ ಎಲ್ಲಿಯೂ ಕಂಡು ಬರದ ರೀತಿಯಲ್ಲಿ ಅಚ್ಚುಕಟ್ಟಾಗಿ ಎಲ್ಲ ರೀತಿಯ ವ್ಯವಸ್ಥೆಗಳನ್ನು ಆಯೋಜಿಸಲಾಗಿತ್ತು, ಕಚೇರಿ ಬಂದಂತಹ ಸಾರ್ವಜನಿಕರು ಮತದಾನ ಮಾಡುವ ಮೂಲಕ ತಮ್ಮ ಅನುಭವಗಳನ್ನು ಹಂಚಿಕೊಂಡರು, ಮತಗಟ್ಟೆ ಅಧಿಕಾರಿಗಳು ನಿರ್ವಹಿಸುವ ಕರ್ತವ್ಯದ ಅನುಭವವೂ ಕೂಡ ಪುರಸಭೆಯಲ್ಲಿರುವ ನೂತನ ಸಿಬ್ಬಂದಿಗೆ ತೋರಿಸಿಕೊಡಲಾಯಿತು, ಒಟ್ಟಾರೆಯಾಗಿ ನೈಜ ಮತಗಟ್ಟೆಗಿಂತಲೂ ಹೆಚ್ಚಿನ ಅನುಕೂಲತೆಗಳು ಇವೆ ಎಂದರೂ ತಪ್ಪಾಗಲಿಕ್ಕಿಲ್ಲ.
ಈ ಸಂದರ್ಭದಲ್ಲಿ ವ್ಯವಸ್ಥಾಪಕ ಎಲ್.ಶಂಕರ, ಆರೋಗ್ಯ ನಿರೀಕ್ಷಕ ರವಿಕೀರ್ತಿ, ತಬಸ್ಸುಮ್, ವಿದ್ಯಾಶೆಟ್ಟಿ, ರಾಜು ಮಡಿವಾಳರ ಮಹಾಂತೇಶ ಹಳ್ಳಿ, ವರದ ಸೇರಿದಂತೆ ಪುರಸಭೆ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ