ಮತದಾನ ಶಾಂತಿಯುತ

ಹಾನಗಲ್ಲ :

           ಸ್ಥಳೀಯ ಸಂಸ್ಥೆಗಳ ಚುನಾವಣೆಯ ಅಂಗವಾಗಿ ಶುಕ್ರವಾರ ಹಾನಗಲ್ಲಿನ ಪುರಸಭೆ ಮತದಾನ ಶಾಂತಿಯುತವಾಗಿ ನಡೆದು, ಆಸಕ್ತಿಯಿಂದ ಮತದಾರರು ಪಾಲ್ಗೊಂಡಿದ್ದುದು ಕಂಡು ಬಂತು.
           ಪುರಸಭೆಯ ಎಲ್ಲ 23 ವಾರ್ಡುಗಳಲ್ಲಿ ಅತ್ಯಂತ ತುರುಸಿನಿಂದ ಮತದಾನ ಜರುಗಿತಲ್ಲದೇ, ಕಾಂಗ್ರೆಸ್-ಬಿಜೆಪಿ ಪಕ್ಷಗಳ ಅಭ್ಯರ್ಥಿಗಳು, ಕಾರ್ಯಕರ್ತರು ಉತ್ಸಾಹದಿಂದ ಪಾಲ್ಗೊಂಡಿದ್ದುದು ಸಾಮಾನ್ಯ ದೃಶ್ಯವಾಗಿತ್ತು. ಪಟ್ಟಣದ ಎಲ್ಲ ನಾಗರಿಕರ ಗಮನ 21ನೇ ವಾರ್ಡಿನತ್ತಲೇ ಕೇಂದ್ರೀಕೃತವಾಗಿದ್ದುದು ವಿಶೇಷವಾಗಿತ್ತು. ಪುರಸಭೆ ಮಾಜಿ ಅಧ್ಯಕ್ಷ ಬಿಜೆಪಿಯ ಕಲ್ಯಾಣಕುಮಾರ ಶೆಟ್ಟರ ಹಾಗೂ ಕಾಂಗ್ರೆಸ್ ಅಭ್ಯರ್ಥಿ ನಾಗಪ್ಪ ಸವದತ್ತಿ ಅವರ ನಡುವೆ ಜಿದ್ದಾಜಿದ್ದಿನ ಪೈಪೋಟಿ ಎದ್ದು ಕಾಣುತ್ತಿತ್ತು. ಉಳಿದ ವಾರ್ಡುಗಳಲ್ಲಿಯೂ ಅಭ್ಯರ್ಥಿಗಳು ಮತದಾರರನ್ನು ಮನೆ-ಮನೆಗೆ ತೆರಳಿ ಕರೆತರುವುದು ಸಾಮಾನ್ಯವಾಗಿತ್ತು. 21ನೇ ವಾರ್ಡಿನಲ್ಲಿ ವಿಕಲಚೇತನ ವೃದ್ಧ ವೆಂಕಟೇಶ ಜೋಶಿ ತಮ್ಮ ತ್ರಿಚಕ್ರ ವಾಹನದಲ್ಲಿ ಆಗಮಿಸಿ, ಟ್ರೈಸಿಕಲ್ ಮೂಲಕ ಮತಗಟ್ಟೆಯಲ್ಲಿ ಮತದಾನ ಮಾಡಿದರು.
            21ನೇ ವಾರ್ಡಿನ ಜನತಾ ಬಾಲಕಿಯರ ಪ್ರೌಢಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿದ ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಕೇಂದ್ರ ಸರ್ಕಾರ 14ನೇ ಹಣಕಾಸು ಯೋಜನೆಯಲ್ಲಿ ಸ್ಥಳೀಯ ಸಂಸ್ಥೆಗಳ ಆಡಳಿತಕ್ಕೆ ಹಿಂದಿನ ಯುಪಿಎ ಸರ್ಕಾರಕ್ಕಿಂತ ಕೇಂದ್ರದ ಮೋದಿ ಸರ್ಕಾರ ಹೆಚ್ಚು ಅನುದಾನ ಬಿಡುಗಡೆಗೊಳಿಸಿದೆ. ಇದು ಮತದಾರರಿಗೆ ಅರ್ಥವಾಗಿದೆ. ಹೀಗಾಗಿ ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಮತದಾರರು ಬೆಂಬಲ ವ್ಯಕ್ತಪಡಿಸಲಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ, ತಾಲೂಕಿನಲ್ಲಿಯೂ ಇದೇ ಪಕ್ಷದ ಶಾಸಕರಾಗಿ ಉದಾಸಿ ಆಯ್ಕೆಯಾಗಿದ್ದಾರೆ. ಅದರಂತೆ ಪುರಸಭೆಯಲ್ಲೂ ಬಿಜೆಪಿ ಆಡಳಿತಕ್ಕೆ ಬಂದರೆ ಅನುದಾನಗಳು ಸೋರಿಕೆಯಾಗದಂತೆ ನೇರವಾಗಿ ತಲುಪಲು ಸಹಾಯವಾಗುತ್ತದೆ ಎಂದರು.
           ಶಾಸಕ ಸಿ.ಎಂ.ಉದಾಸಿ ಮಾತನಾಡಿ, ಎಲ್ಲ ಹಂತಗಳಲ್ಲಿ ಒಂದೇ ಪಕ್ಷದವರು ಆಡಳಿತದಲ್ಲಿದ್ದರೆ ಅಭಿವೃದ್ಧಿಗಳು ವೇಗವಾಗಿ ಆಗಲು ಸಾಧ್ಯವಿದೆ. 2004 ರಿಂದ 2013ರ ಅವಧಿಯಲ್ಲಿ ಬಿಜೆಪಿ ಸರ್ಕಾರವಿದ್ದಾಗ ಬಹಳಷ್ಟು ಅಭಿವೃದ್ಧಿ ಕೈಗೊಳ್ಳಲಾಗಿತ್ತು. 2013 ರಿಂದ ಪುರಸಭೆಯಲ್ಲಿ ಬಿಜೆಪಿ ಆಡಳಿತವಿದ್ದುದರಿಂದ ಕಾಂಗ್ರೆಸ್ ಸರ್ಕಾರ ನಯಾಪೈಸೆ ಅನುದಾನವನ್ನೂ ಸಹಿತ ಬಿಡುಗಡೆಗೊಳಿಸಲಿಲ್ಲ ಎಂದು ಆರೋಪಿಸಿದ ಉದಾಸಿ, ಇದರಿಂದಾಗಿ ಪಟ್ಟಣದ ಅಭಿವೃದ್ಧಿ ಕುಂಠಿತವಾಗಿದ್ದಲ್ಲದೇ, ಪೌರಕಾರ್ಮಿಕರ ಸಂಭಾವನೆ ನೀಡುವುದೂ ಕೂಡ ಕಷ್ಟವಾದ ದುಸ್ಥಿತಿಗೆ ತಂದು ಮುಟ್ಟಿಸಿದ್ದರು. ಇದೆಲ್ಲಕ್ಕೂ ಈಗ ಬದಲಾವಣೆ ಕಾಲ ಬಂದಿದೆ ಎಂದರು.
            ಮಾಜಿ ಶಾಸಕ ಮನೋಹರ ತಹಸೀಲ್ದಾರ್ ಮಾತನಾಡಿ, ಸಿದ್ಧರಾಮಯ್ಯನವರು ಸಿಎಂ ಆಗಿದ್ದಾಗ ಪುರಸಭೆಯಲ್ಲಿ ಹತ್ತು ಹಲವು ಯೋಜನೆಗಳನ್ನು ಜಾರಿಗೊಳಿಸಿ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದೇವೆ. ಕುಡಿಯುವ ನೀರಿಗೆ ಬರಗಾಲದಲ್ಲೂ ತೊಂದರೆಯಾಗದಂತೆ ಕಾಳಜಿವಹಿಸಿದ್ದೇವೆ. ನಗರೋತ್ಥಾನ ಯೋಜನೆಯಲ್ಲಿ 7.5 ಕೋಟಿ ರೂಗಳನ್ನು ಬಿಡುಗಡೆಗೊಳಿಸಿ, 56 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಟ್ರೀಪಾರ್ಕ, 7 ಎಕರೆ ಜಮೀನಿನಲ್ಲಿ ವಸತಿ ನಿವೇಶನ ನೀಡಿದ್ದೇವೆ, ನವನಗರ ಬಡಾವಣೆಯಲ್ಲಿ 2.50 ಕೋಟಿ ರೂಗಳಲ್ಲಿ ಅಭಿವೃದ್ಧಿ ಕೈಗೊಂಡಿದ್ದೇವೆ. ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗಳು ಕಾಂಗ್ರೆಸ್ ಪಕ್ಷದ ಹೆಗ್ಗಳಿಕೆಗಳಾಗಿವೆ. ಪುರಸಭೆಯಲ್ಲಿ ನಮ್ಮ ಆಡಳಿತವಿಲ್ಲದಿದ್ದರೂ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದೇವೆ. ಇದೇ ಅಭಿವೃದ್ಧಿಗಳು ಮತಗಳಾಗಿ ಈಗ ಪರಿವರ್ತನೆಯಾಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link