ಹಾನಗಲ್ಲ:
ಕಳೆದ ಚುನಾವಣೆಯಲ್ಲಿ ಶ್ರೀನಿವಾಸ್ ಮಾನೆ ಸೋತರೂ ಜನರ ಮನಸ್ಸು ಗೆದ್ದಿದ್ದಾರೆ. ತಾಲೂಕಿನ ಜನರ ಉತ್ಸಾಹ ನೋಡಿದರೆ ಚುನಾವಣೆಯನ್ನು ನಾವು ಗೆದ್ದಾಗಿದೆ ಎಂಬ ಭಾವ ಮೂಡಿದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಮ್ಮೆಯಿಂದ ನುಡಿದರು.
ಹಾನಗಲ್ಲ ಉಪ ಚುನಾವಣೆ ಹಿನ್ನೆಲೆಯಲ್ಲಿ ಮಾಸನಕಟ್ಟಿ ಮತ್ತು ಕಂಚಿನೆಗಳೂರು ಗ್ರಾಮಗಳಲ್ಲಿ ಭಾನುವಾರ ನಡೆದ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕರೊನಾ ಸಂದರ್ಭದಲ್ಲಿ ಸರ್ಕಾರ ಮಾಡಬೇಕಿದ್ದ ಕೆಲಸಗಳನ್ನು ಶ್ರೀನಿವಾಸ್ ಮಾನೆ ಮಾಡಿದ್ದಾರೆ.
ಕಷ್ಟದಲ್ಲಿ ಜೊತೆಗೆ ನಿಂತಿರುವ ಅವರನ್ನು ತಾಲೂಕಿನ ಆಪತ್ಭಾಂದವ ಎಂದು ಜನ ಪ್ರೀತಿಯಿಂದ ಕರೆಯುತ್ತಿದ್ದು, ಕ್ಷೇತ್ರದ ಜನ ಅವರನ್ನು ಮನೆ ಮಗ ಎಂದು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ ಅವರು, ಅನ್ನಭಾಗ್ಯ ಯೋಜನೆಯಿಂದ ಜನ ಸೋಮಾರಿಗಳಾಗುತ್ತಿದ್ದಾರೆ ಎನ್ನುವುದು ಹೊಟ್ಟೆ ತುಂಬಿದವರು ಆಡುವ ಮಾತು. ಇಂಥ ಮಾತುಗಳನ್ನಾಡುವವರಿಗೆ ಬಡತನದ ಪರಿಚಯವಿರಲಿಕ್ಕಿಲ್ಲ, ಹಾಗಾಗಿ ಮಹತ್ವಾಕಾಂಕ್ಷಿ ಅನ್ನಭಾಗ್ಯ ಯೋಜನೆಯ ಬಗೆಗೆ ಅಪಸ್ವರ ತೆಗೆಯುತ್ತಿದ್ದಾರೆ. ಉಚಿತ ಅಕ್ಕಿ ವಿತರಣೆ ಬಗ್ಗೆ ಬಡವರನ್ನು ಕೇಳಿ, ಹೊಟ್ಟೆ ತುಂಬಿದವರನ್ನಲ್ಲ. ರೈತನ ಮಗ ಎನ್ನುವ ಎಚ್.ಡಿ.ಕುಮಾರಸ್ವಾಮಿ ಎಂದೂ ನೇಗಿಲು ಹಿಡಿದಿಲ್ಲ, ಕೂಲೀನೂ ಮಾಡಿಲ್ಲ. ಅವರಿಗೆ ಬಡವನ ಹಸಿವಿನ ಅರಿವಿಲ್ಲ. ಈ ರೀತಿ ಉಡಾಫೆ ಮಾತನಾಡುವವರಿಗೆ ಮತ ಹಾಕುತ್ತಿರಾ ಎಂದು ನೆರೆದಿದ್ದ ಜನರನ್ನು ಪ್ರಶ್ನಿಸಿದರು.
ಆರ್‍ಎಸ್‍ಎಸ್‍ನವರೆಲ್ಲ ಸೇರಿ ಬೆಂಗಳೂರಿನ ವಿಮಾನ ನಿಲ್ದಾಣದ ಪಕ್ಕ 116 ಎಕರೆ ಜಾಗದಲ್ಲಿ ಚಾಣಕ್ಯ ವಿಶ್ವವಿದ್ಯಾಲಯ ಸ್ಥಾಪಿಸಲು ಮುಂದಾಗಿದ್ದಾರೆ. ಒಂದೊಂದು ಎಕರೆಗೆ ಕೆಐಎಡಿಬಿ 1.50 ಕೋಟಿರೂ. ನೀಡಿ ಆ ಜಾಗ ಖರೀದಿಸಿತ್ತು. ಅದರ ಬೆಲೆ ಈಗ ಸುಮಾರು ಒಂದು ಸಾವಿರ ಕೋಟಿಯಿದೆ. ಆದರೆ ಸರ್ಕಾರ ಈ ನಿವೇಶನವನ್ನು 50 ಕೋಟಿರೂ.ಗೆ ನೀಡಿ ಸರ್ಕಾರಕ್ಕೆ ಹಾನಿಯುಂಟುಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಮಾತನಾಡಿ, ನವ ಹಾನಗಲ್ಲ ನಿರ್ಮಾಣಕ್ಕೆ ಪ್ರಮಾಣ ಮಾಡಿದ್ದೇನೆ, ನಿಮ್ಮ ಒಂದೊಂದು ಮತಗಳೂ ಕೂಡ ಪರಿವರ್ತನೆಗೆ ನಾಂದಿ ಹಾಡಲಿವೆ. ಕ್ಷೇತ್ರದ ಸಮಸ್ಯೆಗಳಿಗೆಲ್ಲ ಪರಿಹಾರ ಕಂಡುಕೊಳ್ಳುವ ಸದವಕಾಶ ಇದೀಗ ಒದಗಿ ಬಂದಿದ್ದು, ಯೋಚಿಸಿ, ಚಿಂತಿಸಿ ಮತ ನೀಡುವಂತೆ ಮನವಿ ಮಾಡಿದ ಅವರು, ನೋವಿರಲಿ-ನಲಿವಿರಲಿ ಯಾರು ಜೊತೆಗೆ ನಿಲ್ಲುತ್ತಾg ಎನ್ನುವುದನ್ನು ಮತದಾರರು ಅಳೆದು ತೂಗಬೇಕಿದೆ. ಭಾವನಾತ್ಮಕ ಸಂಗತಿಗಳಿಗೆ ಮರುಳಾಗಿ ಭವಿಷ್ಯದ ಸುಂದರ ದಿನಗಳನ್ನು ಕಳೆದುಕೊಳ್ಳದೆ ಸಮರ್ಥ ನಾಯಕತ್ವಕ್ಕೆ ಮತ ನೀಡುವಂತೆ ಕೋರಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮಾತನಾಡಿ, ಕೇಂದ್ರದಿಂದ ರಾಜ್ಯಕ್ಕೆ ಅನುದಾನ ತರುವಲ್ಲಿ ಸಂಸದರು ವಿಫಲರಾಗಿದ್ದಾರೆ. ನಿರ್ಜೀವ ಸರ್ಕಾರಕ್ಕೆ ಮಾನವೀಯ ಮೌಲ್ಯವಿಲ್ಲ. ಎರಡೂ ಕ್ಷೇತ್ರಗಳಲ್ಲಿ ಗೆದ್ದು, ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ದಿಗ್ವಿಜಯ ಸಾಧಿಸುವುದು ಖಂಡಿತ ಎಂದು ಹೇಳಿದ ಅವರು, ಶ್ರೀನಿವಾಸ ಮಾನೆ ಪ್ರಾಮಾಣಿಕವಾಗಿ ಕ್ಷೇತ್ರದ ಅಭಿವೃದ್ಧಿಗೆ ದುಡಿದಿದ್ದಾರೆ. ಕ್ಷೇತ್ರದಲ್ಲೆ ಉಳಿದು ಜನರ ಕಣ್ಣೀರು ಒರೆಸಿದ್ದಾರೆ. ಜನಪರ ಕೆಲಸಗಳಲ್ಲಿಯೂ ತೊಡಗಿದ್ದಾರೆ ಎಂದರು.
ಮಾಜಿ ಸಚಿವರಾದ ಮನೋಹರ ತಹಶೀಲ್ದಾರ್, ಸಂತೋಷ್ ಲಾಡ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಮಾಜಿ ಶಾಸಕರಾದ ಜಿ.ಎಸ್.ಗಡ್ಡದೇವರಮಠ, ಸೋಮಣ್ಣ ಬೇವಿನಮರದ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ.ಹಿರೇಮಠ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆರ್.ಎಸ್.ಪಾಟೀಲ, ಪುಟ್ಟಪ್ಪ ನರೇಗಲ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಹಿಂದು, ಮುಸ್ಲಿಂ, ಕ್ರಿಶ್ಚನ್ ಸೇರಿದಂತೆ ಎಲ್ಲ ವರ್ಗದ ಜನರನ್ನು ಒಟ್ಟು ಗೂಡಿಸಿಕೊಂಡು ಹೋಗುವ ಯಾವುದಾದರೂ ಪಕ್ಷ ಇದ್ದರೆ ಅದು ಕಾಂಗ್ರೆಸ್ ಮಾತ್ರ. ಕಾಂಗ್ರೆಸ್ ಒಂದು ಜಾತಿಗೆ ಸೀಮಿತವಾಗಿಲ್ಲ……….ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ.
ಹಾನಗಲ್ಲ ತಾಲೂಕಿನ ಮಾಸನಕಟ್ಟಿಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
