ಬ್ಯಾಡಗಿ:
ಪಟ್ಟಣದ ತಾಲ್ಲೂಕ ಕಛೇರಿಯಲ್ಲಿ ಕಳೆದ ಮೂರು ವರ್ಷಗಳಿಂದ ಬೆಳೆವಿಮೆ ಬಾಕಿ ಕುರಿತು ಚರ್ಚಿಸಲು ಕರೆಯಲಾಗಿದ್ದ ಸಭೆಗೆ ವಿಮೆ ಕಂಪನಿಯ ಪ್ರತಿನಿಧಿಗಳು ಬಾರದೇ ಸಭೆಯನ್ನು ಅ.29 ಕ್ಕೆ ಮುಂದೂಡಲಾಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಅತೀವೃಷ್ಟಿ ಅನಾವೃಷ್ಟಿಗಳ ಕರಿನೆರಳು ಕೃಷಿ ಮೇಲೆ ಬಿದ್ದಿರುವ ಪರಿಣಾಮ ಮಾಡಿದ ಸಾಲ ತೀರಿಸಲಾಗದೇ ರೈತ ಆತ್ಮಹತ್ಯೆ ಹಾದಿ ಹಿಡಿದಿದ್ದಾನೆ ಇವುಗಳ ನಡುವೆಯೇ ಕಳೆದ2015-16 2016-17, 2017-18 ಮೂರು ವರ್ಷಗಳ ಜಿಲ್ಲೆಯ ಅಷ್ಟೂ ರೈತರಿಗೆ ನ್ಯಾಯ ಸಮ್ಮತವಾಗಿ ಸಿಗಬೇಕಾಗಿದ್ದ ಸುಮಾರು 11 ಕೋಟಿ ರೂ.ವಿಮೆ ಹಣ ಪಾವತಿಯಾಗಿಲ್ಲ ಎಂದು ಆರೋಪಿಸಿದರು.

ವಿಮೆ ಕಂಪನಿಗಳ ನಾಟಕ ನಡೆಯುವುದಿಲ್ಲ: ಶಶಿಧರ ಛತ್ರದಮಠ ಮಾತನಾಡಿ, ವಿಮಾ ಕಂಪನಿಗಳು ಬಹುದೊಡ್ಡ ನಾಟಕ ಕಂಪನಿಗಳಂತೆ ವರ್ತಿಸುತ್ತಿವೆ, ಅದರ ಪ್ರತಿನಿಧಿಗಳು ಕಳೆದ ಜು.6 ರಂದು ವಿಮಾ ಅದಾಲತ್ ನಡೆಸಿದರೂ ಸಹ ಇಂದಿಗೂ ರೈತರ ಖಾತೆಗಳಿಗೆ ಬಿಡಿಗಾಸು ನೀಡಿರುವುದಿಲ್ಲ ಇದಕ್ಕೆ ಉತ್ತರ ತಿಳಿಸಲಾ ಗದೇ ಉದ್ದೇಶಪೂರ್ವಕವಾಗಿಯೇ ಇಂದಿನ ಸಭೆಗೆ ಗೈರಾಗಿದ್ದಾರೆ ಹಾಗಾಗಿ ಸಭೆಯಲ್ಲಿ ಪಾಲ್ಗೊಂಡಿಲ್ಲ ಎಂದು ಆರೋಪಿಸಿದರು.
ವಿಮೆ ಕಂಪನಿಗಳ ಪ್ರತಿನಿಧಿಗಳನ್ನು ಸಮರ್ಥಿಸಿಕೊಳ್ಳಬೇಡಿ: ರುದ್ರಗೌಡ ಕಾಡನಗೌಡ್ರ ಮಾತನಾಡಿ, ರೈತರ ಬ್ಯಾಂಕ್ ವಿವರಗಳು ಸರಿಯಾಗಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಅಧಿಕಾರಿಗಳು ತಮ್ಮ ಅಸಹಾಯಕತೆಯನ್ನು ತೋರುತ್ತಿದ್ದಾರಲ್ಲದೇ ಅಪ್ರತ್ಯಕ್ಷವಾಗಿ ವಿಮೆ ಕಂಪನಿಗಳನ್ನು ಸಮರ್ಥಿಸಿಕೊಳ್ಳುವ ಕೆಲಸ ಅಧಿಕಾರಿಗಳಿಂದ ನಡೆಯುತ್ತಿದೆ, ಒಂದು ವೇಳೆ ಬ್ಯಾಂಕ್ ವಿವರ ಸರಿಯಾಗಿಲ್ಲದಿದ್ದರೇ ಸರಿಪಡಿಸಿಕೊಳ್ಳಲು ಸಾಧ್ಯವಿಲ್ಲವೇ, ನಿಮ್ಮಂತಹವರ ಕುಮ್ಮಕ್ಕಿನಿಂದಲೇ ವಿಮೆ ಕಂಪನಿಗಳು ರೈತರಿಗೆ ಮೋಸ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಆ.29 ರಂದು ನಡೆಯುವ ಸಭೆಗೂ ಮುನ್ನ ಹಣ ನೀಡಿ: ಗಂಗಣ್ಣ ಎಲಿ ಮಾತನಾಡಿ, ಯುನಿವರ್ಸಲ್ ಸ್ಯಾಂಪೋ ವಿಮೆ ಕಂಪನಿ ಅಧಿಕಾರಿಗಳು, ಮುಂದೆ ಬರುವ ಆ.29 ರಂದು ನಡೆಯುವ ಸಭೆಯೊಳಗೆ ಎಲ್ಲ ಹಣವನ್ನು ರೈತರ ಖಾತೆಗಳಿಗೆ ಜಮೆ ಮಾಡಿಯೇ ಬರಬೇಕು, ಇಲ್ಲದಿದ್ದಲ್ಲಿ ಸಭೆ ನಡೆಸುವ ಅವಶ್ಯಕತೆಯಿಲ್ಲ, ಒಂದು ವೇಳೆ ಇದಕ್ಕೆ ತಪ್ಪಿದಲ್ಲಿ ಮತ್ತೆ ಅಹೋರಾತ್ರಿ ಧರಣಿ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕಿರಣಕುಮಾರ ತಹಶೀಲ್ದಾರ ಶಿವಶಂಕರ ನಾಯಕ್, ಹಿರಿಯ ತೋಟಗಾರಿಕೆ ಇಲಾಖೆಯ ವಿಜಯಲಕ್ಷ್ಮೀ, ಸಹಾಯಕ ಕೃಷಿ ನಿರ್ದೇಶಕ ಅಮೃತೇಶ್,ಸಿಪಿಐ ಚಿದಾನಂದ, ಗಡಿಗೋಳ ಚಿಕ್ಕಪ್ಪ ಛತ್ರದ, ಮಲ್ಲೇಶಪ್ಪ ಡಂಬಳ, ನಿಂಗಪ್ಪ ಹೆಗ್ಗಪ್ಪನವರ, ಶೇಖಪ್ಪ ಕಾಶಿ, ಮಂಜುನಾಥ ಹಿರೇಮಠ. ಮೌನೇಶ ಬಡಿಗೇರ, ಈರಪ್ಪ ವತ್ಲಳ್ಳಿ ಹನುಮಂತಪ್ಪ, ವಿ.ಸಿ.ಹಾವೇರಿಮಠ, ಗಿರೀಶ್ ಮುದ್ದಶೆಟ್ಟಿ, ಅಶೋಕ ಮಾಳೇನಹಳ್ಳಿ ಇನ್ನಿತರರು ಸಭೆಯಲ್ಲಿ ಉಪಸ್ಥಿತರಿದ್ದರು.








