ಹಾವೇರಿ :
ತಾಲೂಕಿನ ಗುತ್ತಲ ಪಟ್ಟಣದಲ್ಲಿ ಸಾಲದ ಬಾದೆಯಿಂದ ಓರ್ವ ರೈತ ಮಹಿಳೆ ಬಲಿಯಾಗಿದ್ದಾಳೆ. ಪಟ್ಟಣದ ಮೂವತ್ತೆಂಟು ವರ್ಷ ವಯಸ್ಸಿನ ಮಂಜವ್ವ ಹಾವೇರಿ ಮೃತ ಮಹಿಳೆ ಎಂದು ಗುರ್ತಿಸಲಾಗಿದೆ. ಕಳೆದ ಐದಾರು ತಿಂಗಳ ಹಿಂದಷ್ಟೇ ಮೃತ ಮಂಜವ್ವಳ ಪತಿ ಪುಟ್ಟಪ್ಪ ಮೃತಪಟ್ಟಿದ್ದ.
ಪತಿಯ ಸಾವಿನ ನಂತರ ನಾಲ್ವರು ಹೆಣ್ಣು ಮತ್ತು ಓರ್ವ ಗಂಡು ಮಗನನ್ನು ಕಟ್ಟಿಕೊಂಡು ಮಂಜವ್ವ ಬದುಕಿನ ಬಂಡಿ ಸಾಗಿಸುತ್ತಿದ್ದಳು. ಕುಟುಂಬಕ್ಕೆ ಮೂರೂವರೆ ಎಕರೆ ಜಮೀನಿತ್ತು. ಪತಿ ಬದುಕಿದ್ದಾಗಲೆ ಜಮೀನಿನ ಮೇಲೆ ಬ್ಯಾಂಕ್ ಮತ್ತು ಕೈಸಾಲ ಆರು ಲಕ್ಷ ರುಪಾಯಿಗೂ ಅಧಿಕ ಸಾಲವಿತ್ತು.
ಪತಿ ಮಾಡಿದ ಸಾಲ ತೀರಿಸಲಾಗದೆ ಬೇಸತ್ತಿದ್ದ ಮಂಜವ್ವ ಮನೆಯಿಂದ ಹೋಗಿ ತಾಲೂಕಿನ ಹರಳಹಳ್ಳಿ ಗ್ರಾಮದ ಬಳಿ ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ನದಿಯಲ್ಲಿ ಮಂಜವ್ವಳ ಮೃತದೇಹ ಪತ್ತೆಯಾಗಿದೆ. ಮಂಜವ್ವಳ ಸಾವಿಗೆ ಸಾಲಬಾಧೆಯೇ ಪ್ರಮುಖ ಕಾರಣ ಎನ್ನಲಾಗಿದೆ. ಈ ಸಂಬಂಧ ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತಳ ಶವವನ್ನು ಗುತ್ತಲದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ತವರುಮನೆ ಹಾವೇರಿ ತಾಲೂಕಿನ ಕಂಚಾರಗಟ್ಟಿ ಗ್ರಾಮಕ್ಕೆ ತೆಗೆದುಕೊಂಡು ಹೋಗಲಾಯಿತು ಎಂದು ಹೇಳಲಾಗುತ್ತಿದೆ.