ಲಿಂಗಾನುಪಾತ ಏರಿಳಿತದಿಂದ ಸಮಾಜದ ಮೇಲೆ ದುಷ್ಪರಿಣಾಮ:ರವಿಗೌಡ

 ಬಳ್ಳಾರಿ:

      ಭಾರತದಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳಗಳ ಜನಸಂಖ್ಯೆ ಅನುಪಾತದಲ್ಲಿ ಬಹಳಷ್ಠು ವ್ಯತ್ಯಾಸ ಇರುವುದರಿಂದ ಹೆಣ್ಣು ಮಕ್ಕಳ ರಕ್ಷಣೆಗೆ ಆದ್ಯತೆ ಮತ್ತು ಅವರ ಬೆಳವಣಿಗೆಗೆ ಪ್ರೋತ್ಸಾಹಿಸುವುದಕ್ಕೆ ಮುಂದಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಜಿ. ರವಿಗೌಡ ಕರೆ ನೀಡಿದರು. 

      ಕೇಂದ್ರ ಸರಕಾರದ ವಾರ್ತಾ ಪ್ರಸಾರ ಸಚಿವಾಲಯದ ಕ್ಷೇತ್ರ ಜನ ಸಂಪರ್ಕ ಕಾರ್ಯಾಲಯ, ಜಿಪಂ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ, ತಾಪಂ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ,ಸಾರ್ವಜನಿಕ ಶಿಕ್ಷಣ ಇಲಾಖೆ, ದೇಶನೂರು ಗ್ರಾಪಂ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ದೇಶನೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಭೇಟಿ ಬಚಾವೋ ಭೇಟಿ ಪಡಾವೋ ಕುರಿತ ವಿಶೇಷ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

      1991ರಲ್ಲಿ 1 ಸಾವಿರ ಪುರುಷರಿಗೆ 945 ಮಹಿಳೆಯರು ಇದ್ದರೆ, ಈಗ 2011ರಲ್ಲಿ ಅದು 1 ಸಾವಿರ ಪುರುಷರಿಗೆ 918 ಮಹಿಳೆಯರ ಜನಸಂಖ್ಯೆ ಇದೆ; ಇದೇ ರೀತಿ ಲಿಂಗಾನುಪಾತ ದಿನೇದಿನೆ ಕಡಿಮೆಯಾಗುತ್ತಾ ಹೋಗುತ್ತಿದ್ದು, ಇದರಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಿದರು.

      ಕೇಂದ್ರ ಸರಕಾರದ ಭೇಟಿ ಬಚಾವೋ ಭೇಟಿ ಪಡಾವೋ ಯೋಜನೆಯ ಅಂಗವಾಗಿ ಹೆಣ್ಣು ಮಕ್ಕಳಿಗಾಗಿ ಸುಕನ್ಯಾ ಸಮೃದ್ಧಿ ಯೋಜನೆ ಜಾರಿಗೊಳಿಸಿದ್ದು ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

      ತಾಪಂ ಸದಸ್ಯೆ ರತ್ನಮ್ಮ ಅವರು ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರು ಮೊದಲು ವಿದ್ಯಾವಂತರಾಗಿ ಸರಕಾರದ ಸೌಲಭ್ಯವನ್ನು ಪಡೆಯುವಲ್ಲಿ ತಿಳಿವಳಿಕೆ ಪಡಯಬೇಕೆಂದು ಸಲಹೆ ನೀಡಿದರು. ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಬಿ.ಯಂಕಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

      ಹೆಣ್ಣು ಮಗು ರಕ್ಷಿಸಿ ಶಿಕ್ಷಣ ನೀಡಿ ಎಂಬ ವಿಷಯವಾಗಿ ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ನಾಗರತ್ನ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಜಾತ ಮಾತನಾಡಿದರು.

      ಕ್ಷೇತ್ರ ಜನ ಸಂಪರ್ಕ ಕಾರ್ಯಾಲಯದ ಉಪನಿರ್ದೇಶಕ ಜಿ.ಡಿ.ಹಳ್ಳಿಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಪ್ರಚಾರ ಸಹಾಯಕ ಎನ್. ರಾಮಕೃಷ್ಣ ಅವರು ಸ್ವಾಗತಿಸಿ ವಂದಿಸಿದರು.

      ಕಾರ್ಯಕ್ರಮದಲ್ಲಿ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಜಾಜಿ ಈರಣ್ಣ, ಗ್ರಾಪಂ ಸದಸ್ಯ ವಿರೇಶ ಹೆಚ್, ಶಾಲಾ ಮುಖ್ಯೋಧ್ಯಾಯ ವೆಂಕಟೇಶ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

      ಜಾಗೃತಿ ಜಾಥಾ : ಭೇಟಿ ಬಚಾವೋ ಭೇಟಿ ಪಡಾವೋ ಯೋಜನೆಗೆ ಸಂಬಂಧಿಸಿದ ಜಾಗೃತಿ ಜಾಥಾವು ಗ್ರಾಮದ ವಿವಿಧ ಬೀದಿಗಳಲ್ಲಿ ಸಂಚರಿಸಿ ಅರಿವು ಮೂಡಿಸಿತು. ತಾಲೂಕು ಪಂಚಾಯತಿ ಸದಸ್ಯೆ ರತ್ನಮ್ಮ ಅವರು ಜಾಥಾಗೆ ಚಾಲನೆ ನೀಡಿದರು.

      ಕಾರ್ಯಕ್ರಮದ ಅಂಗವಾಗಿ ರಸಪ್ರಶ್ನೆ, ಛಾಯಚಿತ್ರ ಪ್ರದರ್ಶನ, ಪೌಷ್ಠಿಕಾಂಶ ಆಹಾರಗಳ ಪ್ರದರ್ಶನ ಹಾಗೂ ಕಲಾ ತಂಡದವರಿಂದ ಸಾಂಸ್ಕೃತಿಕ ಪ್ರದರ್ಶನ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link