ಹರಪನಹಳ್ಳಿ :
ಸೀಗೆ ಹುಣ್ಣಿಮೆಯ ಪ್ರಯುಕ್ತ ತಾಲ್ಲೂಕಿನ ಬಾಗಳಿ ಗ್ರಾಮದಲ್ಲಿ ಶ್ರೀ ದೋಣಿ ಕೆಂಚಮ್ಮನ ಉತ್ಸವವನ್ನು ಮಂಗಳವಾರ ಮದ್ಯಾರಾತ್ರಿ 2 ಗಂಟೆಯ ನಂತರ ಹೂವಿನ ಪಲ್ಲಕ್ಕಿಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಉತ್ಸವದ ಮೇರವಣಿಗೆ ನಡೆಸಲಾಯಿತು.
ಡೊಳ್ಳು, ಸಮಾಳ, ನಂದಿಕೋಲು ಹಾಗೂ ಕೋಲಾಟದೊಂದಿಗೆ ಸಕಲ ವಾದ್ಯಗಳೊಂದಿಗೆ ಹೂವಿನ ಪಲ್ಲಕ್ಕಿಯ ಉತ್ಸವದಲ್ಲಿ ದೋಣಿ ಕೆಂಚಮ್ಮ ದೇವಿಯು ಗ್ರಾಮದ ಮಹಿಳೆಯರಿಂದ ಉಡಿ ತುಂಬಿಸಿಕೊಂಡು, ಬಸವೇಶ್ವರ ದೇವಸ್ಥಾನದ ಬಳಿ ಇರುವ ಊರಮ್ಮ ಚೌತಿ ಕಟ್ಟಿಯನ್ನು ಸುತ್ತುವರೆದು ನಂತರ ಬುಧುವಾರ ಬೆಳಗಿನ ಜಾವ 6 ಗಂಟೆಗೆ ಚೌತಿ ಕಟ್ಟೆಗೆ ತರಲಾಯಿತು. ನಂತರ ಮದ್ಯಾಹ್ನ ದಿಂದ ಸಂಜೆ 5 ಗಂಟೆಯವರೆಗೂ ಮಹಿಳೆಯರು ಹಣ್ಣು, ಕಾಯಿ ಪೂಜೆಯನ್ನು ನೇರವೇರಿಸಿದರು.
ಸಂಜೆ6 ಗಂಟೆಗೆ ಕೆರೆಯಲ್ಲಿ ನೀರಿನಲ್ಲಿ ಆಟವಾಡುವ ವಾಡಿಕೆ ಇದೆ, ಆದರೆ ಈ ಭಾರಿ ಕೆರೆಯಲ್ಲಿ ನೀರಿಲ್ಲದ ಕಾರಣ ಗುಂಡಿಯಲ್ಲಿದ್ದ ನೀರಿನಲ್ಲಿ ಆಟವಾಡಿ ಬಳಿಕ ಹತ್ತಿರದಲ್ಲಿನ ಬನ್ನಿಮಂಟಪದ ಹತ್ತಿರ ವಿಸರ್ಜಿಸಲಾಯಿತು.
ಐತಿಹಾಸಿಕ ಹಿನ್ನೆಲೆ: ದಾವಣಗೆರೆ ಜಿಲ್ಲೆ ಹರಪನಹಳ್ಳಿ ಪಾಳೇಗಾರರಿಗೆ ಹೆಸರಾದ ತಾಲೂಕು ಪಾಳೇಗಾರಿಕೆಗಳು ಎತ್ತರದ ಗುಡ್ಡ ಬೆಟ್ಟಗಳಲ್ಲಿ ಕೋಟೆ ನಿರ್ಮಾಣ ಮಾಡಿ ಆಳ್ವಿಕೆ ನಡಿಸಿದರೆ ಹರಪನಹಳ್ಳಿ ಪಾಳೇಗಾರರು ಬಯಲು ಪ್ರದೇಶದಲ್ಲಿ ಕೋಟೆ ನಿರ್ಮಿಸಿ ಪಾಳೇಗಾರಿಕೆ ನಡೆಸಿದ ಅಪ್ರತಿಮ ವೀರರಾಗಿದ್ದರು. ಪಾಳೇಗಾರರಲ್ಲಿ ಕೆಲವರು ಬಾಗಳಿಯನ್ನು ಕೇಂದ್ರಸ್ಥಾನ ಮಾಡಿಕೊಂಡು ಆಳಿದ್ದುಂಟು. ಹೋಯ್ಸಳರ 2ನೇ ವೀರಬಲ್ಲಾಳರ ರಾಜಧಾನಿಯಾಗಿತ್ತು ಎಂಬ ಐತಿಹಾಸಿಕ ಹಿನ್ನೆಲೆ ಇದೆ.
ಕೆಂಚವ್ವೆ ಇಲ್ಲಿನ ಪಾಳೇಗಾರರ ಮಗಳಾಗಿದ್ದು, ದಂಡನಾಯಕನ ಕ್ರೂರದೃಷ್ಠಿಗೆ ಒಳಗಾಗಿ ಯುದ್ದ ನಡೆಯುವ ಸಂದರ್ಭ ಬಂದಾಗ ಕೆಂಚವ್ವೆ ಹುಣ್ಣೆಮೆ ದಿನದಂದು ಕೆರೆಗೆ ಹಾರಿ ಸೈನಿಕರ ಪತ್ನಿಯರ ಮಾಂಗಲ್ಯವನ್ನು ರಕ್ಷಣೆ ಮಾಡುತ್ತಾಳೆ. ಕೆಂಚವ್ವೆಯ ತ್ಯಾಗ ದೇವತೆಯ ಸ್ಥಾನಕ್ಕೆ ಹೊಲಿಸಿ ಜನಮನದಲ್ಲಿ ಶಾಶ್ವತವಾಗಿ ನಿಲ್ಲುತ್ತಾಳೆ ಇಂದಿನ ಸ್ವಾರ್ಥ ಪ್ರಪಂಚಕ್ಕೆ ಸ್ವ ಹಿತಕ್ಕಿಂತ ನಾಡಿನ ಹಿತ ಮುಖ್ಯ ಎಂಬ ಕೆಂಚವ್ವೆಯ ಸಂದೇಶ ಅನುಕರಣೀಯ ಈ ಹಿನ್ನೆಲೆಯಲ್ಲಿ ಹಬ್ಬ ಆಚರಿಸಲಾಗುತ್ತಿದೆ.
ಕೋಡಿಹಳ್ಳಿಯಲ್ಲೂ ಆಚರಣೆ :
ದೋಣಿ ಕೆಂಚವ್ವೆಯ ಹಬ್ಬವನ್ನು ಬಾಗಳಿ ಗ್ರಾಮದಲ್ಲಿ ಆಚರಿಸಿದಂತೆ ಪಕ್ಕದ ಕೋಡಿಹಳ್ಳಿ ಗ್ರಾಮದಲ್ಲೂ ಸಹ ಗ್ರಾಮಸ್ಥರು ಸಡಗರ, ಸಂಭ್ರಮದಿಂದ ಆಚರಿಸಿದರು. ಈ ಸಂದರ್ಭದಲ್ಲಿ ಊರಿನ ದೈವಸ್ಥರು, ಗ್ರಾಪಂ, ತಾಪಂ ಸದಸ್ಯರು, ಪಿಕಾರ್ಡ ಬ್ಯಾಂಕ್, ವಿಎಸ್‍ಎಸ್‍ಎನ್, ಕಲಾವಿದರು, ಯುವಕರು ಮತ್ತು ಗ್ರಾಮಸ್ಥರು, ಉತ್ಸವದಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾದರು.