ಕೆರೆ ತುಂಬಿಸುವ ಯೋಜನೆಗಾಗಿ 50 ಲಕ್ಷರೂ ವೆಚ್ಚದಲ್ಲಿ ಸಮೀಕ್ಷೆ ಕಾರ್ಯ :ಎನ್.ವೈ. ಗೋಪಾಲಕೃಷ್ಣ

ಕೂಡ್ಲಿಗಿ:

   ತಾಲ್ಲೂಕಿನ ಕೆರೆ ತುಂಬಿಸುವ ಯೋಜನೆ ಜಾರಿ ಮಾಡಿಸುವ ಮೊದಲ ಭಾಗವಾಗಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ಸಮೀಕ್ಷೆ ಕಾರ್ಯ ಮುಕ್ತಾಯವಾಗಿದೆ ಎಂದು ಶಾಸಕ ಎನ್.ವೈ. ಗೋಪಾಲಕೃಷ್ಣ ತಿಳಿಸಿದರು. ತಾಲ್ಲೂಕಿಗೆ ಸಮಗ್ರ ನೀರಾವರಿ ಕಲ್ಪಿಸುವ ಕುರಿತು ನೀರಾವರಿ ಹೊರಾಟ ಸಮಿತಿಯೊಂದಿಗೆ ಸೋಮವಾರ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

   ತುಂಗ ಭದ್ರ ನದಿಯ ಹೆಚ್ಚುವರಿ ನೀರು ಅಥವಾ ಡ್ಯಾಂನ ಹಿನ್ನೀರಿನಿಂದ ತಾಲ್ಲೂಕಿನ 67 ಕೆರೆಗಳಿಗೆ ನೀರು ತುಂಭಿಸುವ ಯೋಜನೆ ಹೊಂದಿದ್ದು, ಇದಕ್ಕಾಗಿ ಖಾಸಗಿ ಸಂಸ್ಥೆಯೊಂದರಿಂದ ಈಗಾಗಲೇ ಸಮೀಕ್ಷೆ ನಡೆಸಿ ಸಮಗ್ರ ಯೋಜನಾ ವರದಿ ಸಿದ್ದಪಡಿಸಲಾಗಿದೆ. ಇದರ ಪ್ರಕಾರ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸಲು 666 ಕೋಟಿ ರೂಪಾಯಿ ಯೋಜನ ವೆಚ್ಚ ನಿಗದಿಯಾಗಿದೆ.

     ಈ ಯೋಜನಾ ವರದಿಯನ್ನು ಇಆರ್‍ಸಿ ಸಮಿತಿ ಮುಂದೆ ತಂದು ಅನುಮೋದನೆ ಪಡೆದು, ನಂತರ ಸಂಬಂಧಿಸಿದ ಮಂತ್ರಿ ಹಾಗೂ ಮುಖ್ಯ ಮಂತ್ರಿಗಳ ಅನುಮೋದನೆ ಪಡೆದು, ಸಚಿವ ಸಂಪುಟದಲ್ಲಿ ಅಂಗೀಕರಿಸಿ ಬಜೆಟ್‍ನಲ್ಲಿ ಸೇರ್ಪಡೆ ಮಾಡಲಾಗುವುದು. ಆದರೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಆಡಳಿತದಲ್ಲಿದ್ದು, ವೈಯಕ್ತಿಕವಾಗಿ ನಾವು ಮುಖ್ಯ ಮಂತ್ರಿ ಹಾಗೂ ಬಾರಿ ನೀರಾವರಿ ಸಚಿವರನ್ನು ಭೇಟಿ ಮಾಡಿ ನಮ್ಮ ಬೇಡಿಕೆಯನ್ನು ಈಡೇರಿಸಿಕೊಳ್ಳಬೇಕಾಗಿದೆ. ಅದ್ದರಿಂದ ಹೋರಾಟ ಸಮಿತಿ ಕೈಗೊಂಡಿರುವ ತಾಲ್ಲೂಕು ಬಂದ್‍ನ್ನು ಕೈ ಬಿಡಬೇಕು. ಇಲ್ಲವಾದಲ್ಲಿ ಸರ್ಕಾರದ ಬಳಿ ನಾವು ಹೋಗುವುದು ಕಷ್ಟವಾಗುತ್ತದೆ ಎಂದು ತಿಳಿಸಿದರು.

     ಭದ್ರ ಮೇಲ್ದಂಡೆ ಯೋಜನೆ ಜಾರಿಗಾಗಿ ನೀವು ಹೋರಾಟ ಮಾಡುತ್ತಿದ್ದೀರಿ. ಆದರೆ ನಮ್ಮ ಭಾಗಕ್ಕ ಬರುವಷ್ಟು ನೀರಿನ ಲಭ್ಯತೆ ಈ ಯೋಜನೆಯಲ್ಲಿ ಸಿಗಲ್ಲ. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಭೇಟಿ ಮಾಡಿ ಮಾಹಿತಿ ಪಡೆಯಿರಿ ಎಂದು ಹೇಳಿದ ಅವರು, ನಮ್ಮ ಯೋಜನಾ ವರದಿ ಬೋರ್ಡ್ ಕಮಿಟಿ ಮುಂದೆ ಬಂದಾಗ, ನಾವು ತಾಲ್ಲೂಕಿನಿಂದ ನಿಯೋಗ ತೆಗೆದುಕೊಂಡು ಹೋಗಿ ಮುಖ್ಯ ಮಂತ್ರಿ ಹಾಗೂ ಬಾರಿ ನೀರಾವರಿ ಸಚಿವರನ್ನು ಭೇಟಿ ಮಾಡಿ ಯೋಜನೆ ಜಾರಿಗಾಗಿ ಮನವಿ ಮಾಡಿ, ಮನವೊಲಿಸಬೇಕು. ಅದ್ದರಿಂದ ನಿಮ್ಮ ಬಂದ್ ನಂತಹ ಹೋರಾಟವನ್ನು ಕೈಬಿಟ್ಟು, ನಮ್ಮೊಂದಿಗೆ ಸಹಕರಿಸಬೇಕು. ಇಲ್ಲವಾದಲ್ಲಿ ಸರ್ಕಾರ ಮಟ್ಟದಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಹೇಳಿದರು.

      ಈ ಸಂದರ್ಭದಲ್ಲಿ ನೀರಾವರಿ ಹೋರಾಟ ಸಮಿತಿಯ ಕಕ್ಕುಪ್ಪಿ ಬಸವರಾಜ್ ಮಾತನಾಡಿ, ತಾಲ್ಲೂಕಿನಲ್ಲಿ ಕುಡಿಯುವ ನೀರಿಗೂ ಸಾಕಷ್ಟು ಸಮಸ್ಯೆಯಾಗುತ್ತದೆ. ತಾಲ್ಲೂಕಿಗೆ ಭದ್ರ ಮೇಲ್ದಂಡೆ ಯೋಜನೆಯನ್ನು ಜಾರಿ ಮಾಡುವಂತೆ ಅನೇಕ ವರ್ಷಗಳಿಂದ ಹೊರಾಟ ನಡೆಸುತ್ತ ಬಂದಿದ್ದೇವೆ. ಆದರೆ ಈ ಬಗ್ಗೆ ಯಾವ ಶಾಸಕರು ಇದುವರೆಗೂ ಈ ಬಗ್ಗೆ ವಿಧಾನ ಸಭೆಯಲ್ಲಿ ಧ್ವನಿ ಎತ್ತಿಲ್ಲ ಎಂದು ದೂರಿದ ಅವರು, ಯೋಜನೆ ಜಾರಿ ಮಾಡುವವರೆಗೂ ಹೊರಾಟ ಮಾಡಲು ನಾವು ಮುಂದಾಗಿದ್ದೇವೆ ಎಂದು ಹೇಳಿದರು.

        ಕೆ.ಎಚ್.ಎಂ. ಸಚಿನ್ ಕುಮಾರು ಮಾತನಾಡಿ, ನಮ್ಮ ಹೊರಾಟದ ಬಗ್ಗೆ ಪಕ್ಷಾತೀತವಾಗಿ ಬೆಂಬಲ ವ್ಯಕ್ತವಾಗಿದೆ. ಅದ್ದರಿಂದ ಒಂದೆರಡು ದಿನಗಳಲ್ಲಿ ನಮ್ಮ ಹೊರಾಟಕ್ಕೆ ಬೆಂಬಲ ನೀಡಿರುವ ಎಲ್ಲರ ಅಭಿಪ್ರಾಯ ಪಡೆದು ನಮ್ಮ ಮುಂದಿನ ತೀರ್ಮಾನ ತಿಳಿಸುವುದಾಗಿ ಹೇಳಿದರು.

        ಜಿಲ್ಲಾ ಪಂಚಾಯ್ತಿ ಸದಸ್ಯರಾದ ಎಚ್. ರೇವಣ್ಣ, ಎಸ್. ವೆಂಕಟೇಶ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಶ ಕೆ.ಎಂ. ತಿಪ್ಪೇಸ್ವಾಮಿ, ಸೂರ್ಯಪಾಪಣ್ಣ, ಟಿ.ಜಿ. ಮಲ್ಲಿಕಾರ್ಜುನಗೌಡ, ಬಂಗಾರು ಹನುಮಂತು, ರಾಜಣ್ಣ, ಎಂ. ಶಿವಣ್ಣ, ಮಂಡಲಾ ಅಧ್ಯಕ್ಷ ಕೆ.ಎಚ್. ವೀರನಗೌಡ, ಕಾರ್ಯದರ್ಶಿ ಪಿ. ಮಂಜುನಾಥ ನಾಯಕ, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಪಾಪ ನಾಯಕ, ಚಿನ್ನಾಪ್ರಪ್ಪ ಸೇರಿದಂತೆ ಅನೇಕರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link