ಶೋಕಾಸ್ ನೋಟಿಸ್ :ಪ್ರತಿ ಕೈಗೆ ಸಿಕ್ಕ ನಂತರ ಉತ್ತರ : ಬಿ.ಕೆ ಹರಿಪ್ರಸಾದ್

ಬೆಂಗಳೂರು:

     ಸಿಎಂ ಸಿದ್ದರಾಮಯ್ಯ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ ಎಂಎಲ್ ಸಿ ಬಿ.ಕೆ ಹರಿಪ್ರಸಾದ್ ಅವರಿಗೆ ಎಐಸಿಸಿ ಶೋಕಾಸ್ ನೋಟಿಸ್ ನೀಡಿದೆ, ಪ್ರತಿ ಕೈಗೆ ಸಿಕ್ಕಿದ ನಂತರ ನಾನು ಉತ್ತರಿಸುತ್ತೇನೆ ಎಂದು ಹರಿಪ್ರಸಾದ್ ಹೇಳಿದ್ದಾರೆ.

    ಬುಧವಾರ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಎಐಸಿಸಿಯಿಂದ ಶೋಕಾಸ್ ನೋಟಿಸ್ ನೀಡಿರುವ ವಿಚಾರವನ್ನು ವಾಟ್ಸಾಪ್ ನಲ್ಲಿ ನೋಡಿದ್ದೇನೆ. ನಾನು ಇಂದು ಪ್ರತಿಯನ್ನು ಪಡೆಯಬಹುದು. ನೋಟೀಸ್ ನನ್ನ ಮತ್ತು ಪಕ್ಷದ ನಡುವೆ ಇದೆ. ನನ್ನ ಕೈಗೆ ನೋಟಿಸ್ ಬಂದಾಗ ಉತ್ತರಿಸುತ್ತೇನೆ. ಅವರು ಉತ್ತರಿಸಲು 10 ದಿನಗಳ ಕಾಲಾವಕಾಶ ನೀಡಿದ್ದಾರೆ ಎಂದು ನನಗೆ ಗೊತ್ತಾಯಿತು. ಎಐಸಿಸಿಗೆ ವಿವರಿಸುತ್ತೇನೆ  ಎಂದರು.

    ಕಳೆದ ಶನಿವಾರ ಅತಿ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೇ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದರು. ದೇವರಾಜ ಅರಸು ಕಾರಿನಲ್ಲಿ ಹೋದಾಕ್ಷಣ ಅರಸು ಆಗುವುದಿಲ್ಲ ಎಂದು ತಿವಿದಿದ್ದರು. ಅಷ್ಟೇ ಅಲ್ಲ ಎಲ್.ಕೆ.ಅಡ್ವಾಣಿಯನ್ನು ಸಿದ್ದರಾಮಯ್ಯ ಭೇಟಿಯಾಗಿದ್ದರು ಅಂತಲೂ ಪರೋಕ್ಷವಾಗಿ ಹೇಳಿದ್ದರು. ಇನ್ನು ಬಿ.ಕೆ.ಹರಿಪ್ರಸಾದ್ ಹೇಳಿಕೆ ವಿರುದ್ಧ ಸಿದ್ದರಾಮಯ್ಯ ಆಪ್ತ ಬಣ ತಿರುಗೇಟು ನೀಡಿತ್ತು. ಸಚಿವ ಎಂಬಿ.ಪಾಟೀಲ್, ಇಂಥಹ ಹೇಳಿಕೆ ಶೋಭೆ ತರುವುದಿಲ್ಲ. ಪಕ್ಷಕ್ಕಿಂತ ಯಾರು ದೊಡ್ಡವರಲ್ಲ ಎಂದು ಟಾಂಗ್ ಕೊಟ್ಟಿದ್ದರು.

    ಹಿರಿಯ ನಾಯಕ ಬಿ.ಕೆ ಹರಿಪ್ರಸಾದ್ ಕ್ಯಾಬಿನೆಟ್ ಹುದ್ದೆಯ ಆಕಾಂಕ್ಷಿಯಾಗಿದ್ದರು, ಹರಿಪ್ರಸಾದ್ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪಾಳೆಯದಲ್ಲಿದ್ದಾರೆ, ಹೀಗಾಗಿ ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿ ಅವಕಾಶ ನೀಡಿರಲಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

    ಸಿದ್ದರಾಮಯ್ಯ ಪಾಳಯದಲ್ಲಿ ಗುರುತಿಸಿಕೊಂಡಿರುವ ಕೆಲ ಸಚಿವರು, ಹರಿಪ್ರಸಾದ್ ನಡೆಸಿರುವ ವಾಗ್ದಾಳಿ ಸಂಬಂಧ ಕ್ರಮಕೈಗೊಳ್ಳುವಂತೆ ಎಚ್ಚರಿಕೆ ನೀಡಿದ್ದರು. ಈ ಎಲ್ಲಾ ಬೆಳವಣಿಗೆಗಳ ನಡುವೆ ಉಪ ಮುಖ್ಯಮಂತ್ರಿ ಹಾಗೂ ರಾಜ್ಯ ಪಕ್ಷದ ಅಧ್ಯಕ್ಷ ಡಿ.ಕೆ ಶಿವಕುಮಾರ್ ಈ ಸಂಬಂಧ ಮೌನ ವಹಿಸಿದ್ದಾರೆ.

    ಇದರಿಂದ ಪಕ್ಷದೊಳಗೆ ಎಲ್ಲವೂ ಸರಿಯಿಲ್ಲ ಎಂದು ತಿಳಿದು ಬಂದಿದೆ. ಸಿದ್ದರಾಮಯ್ಯ ಅವರ ವಿರುದ್ಧ ಹರಿಪ್ರಸಾದ್ ಅವರನ್ನು ಶಿವಕುಮಾರ್ ಎತ್ತಿಕಟ್ಟಿದ್ದಾರೆ ಎಂದು ಮೂಲಗಳು ವಿವರಿಸಿವೆ. ಹರಿಪ್ರಸಾದ್ ಅವರು ಕಳೆದ ಶನಿವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿವಿಧ ಹಿಂದುಳಿದ ವರ್ಗಗಳ ಮುಖಂಡರು ಹಾಗೂ ಧರ್ಮಗುರುಗಳ ಸಮಾವೇಶ ನಡೆಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಶಕ್ತಿ ಪ್ರದರ್ಶನ ಮಾಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link