ಶ್ರೀವಿಶ್ವಕರ್ಮ ಜಯಂತೋತ್ಸವ ಉದ್ಘಾಟನೆ

ರಾಣಿಬೆನ್ನೂರ:

              ಯಾವುದೇ ಸಮಾಜ ಅಭಿವೃದ್ಧಿ ಹೊಂದಬೇಕಾದರೆ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು, ಅಲ್ಲದೆ ಅವರಿಗೆ ನೀತಿ ಶಿಕ್ಷಣ ಇನ್ನೂ ಉತ್ತಮ ಎಂದು ತಾಪಂ ಅಧ್ಯಕ್ಷ ನೀಲಕಂಠಪ್ಪ ಕುಸಗೂರ ಹೇಳಿದರು.

                 ನಗರದ ಶ್ರೀಮೌನೇಶ್ವರ ದೇವಸ್ಥಾನದ ಸಭಾಭವನದಲ್ಲಿ ತಾಲೂಕಾ ಆಡಳಿತ, ತಾಲೂಕ ಪಂಚಾಯತ, ನಗರಸಭೆ, ವಿವಿಧ ಇಲಾಖೆ ಹಾಗೂ ವಿಶ್ವಕರ್ಮ ಸಮಾಜದ ಸಂಯುಕ್ತಾಶ್ರಯದಲ್ಲಿ ಸೋಮವಾರ ಶ್ರೀವಿಶ್ವಕರ್ಮ ಜಯಂತೋತ್ಸವ ಉದ್ಘಾಟಿಸಿ ಅವರು ಮಾತನಾಡಿದ ಅವರು, ಮಹಾಪುರುಷರ, ಶರಣರ ಜಯಂತಿಗಳು ಒಂದು ಕೋಮು ಮತ್ತು ಒಂದು ಜಾತಿಗೆ ಸೀಮಿತವಾಗದೆ ಎಲ್ಲರೂ ಆಚರಿಸುವಂತಾದರೆ ಅದಕ್ಕೆ ಅರ್ಥ ಬರುವುದು ಎಂದರು.

                 ದಿವ್ಯ ಸಾನಿಧ್ಯ ವಹಿಸಿದ್ದ ಅಂತರವಳ್ಳಿ ಮುರುಘಾಮಠದ ನಿರಂಜನಾ ಮಹಾಸ್ವಾಮಿಜಿ ಮಾತನಾಡಿ, ವಿಶ್ವಕರ್ಮ ಪರಂಪರೆ ಎಂದರೆ ಕೇವಲ ಒಂದು ಜಾತಿಯ ಪರಂಪರೆಯಲ್ಲ, ಸ್ವಯಂಭೂ ವಿಶ್ವಕರ್ಮನ ಪರಂಪರೆ, ಪಂಚ ಬ್ರಹ್ಮರ್ಷಿಗಳ, ಪಂಚಶಿಲ್ಪರ್ಷಿಗಳ, ಪಂಚವೇದಗಳ, ಪಂಚ ಶಿಲ್ಪಗಳ, ಪಂಚ ವಿಜ್ಞಾನಗಳ ಪರಂಪರೆ, ಇದುವೇ ವಿಶ್ವಸಂಸ್ಕತಿಯ ಪರಂಪರೆ, ಸ್ವಯಂಭೂ ವಿಶ್ವಕರ್ಮನೇ ವಿಶ್ವಕರ್ಮ ಪರಮೇಶ್ವರನೇ ವಿಶ್ವಕರ್ಮ ಬ್ರಾಹ್ಮಣರ ಮೂಲ ಆರಾದ್ಯನಾಗಿದ್ದಾನೆ. ಸ್ವಯಂಭೂ ವಿಶ್ವಕರ್ಮನ ಸೂಕ್ತಗಳು ಋಗ್ವೇದ, ಯಜುರ್ವೇದ, ಅಥರ್ವವೇದಗಳಲ್ಲಿ ದೊರೆಯುತ್ತವೆ. ಇವನೇ ವೇದಗಳಲ್ಲಿ ಸರ್ವೋಚ್ಛ ದೇವನಾಗಿದ್ದಾನೆ. ಈ ಪರಮ ಪುರುಷನನ್ನು ಸಾಕ್ಷಾತ್ಕರಿಸಿಕೊಂಡವನೇ ವಿಶ್ವಕರ್ಮ ಎಂದು ನುಡಿದರು.

                 ವಿಶ್ವಕರ್ಮನ ಪ್ರಥಮ ಸಾಕಾರ ರೂಪವೇ ಪಂಚಮುಖ ವಿಶ್ವಕರ್ಮ ಪರಮೇಶ್ವರನಾಗಿದ್ದಾನೆ.ಇವನ ಪೂರ್ವದಿಕ್ಕಿನ ಸದ್ಯೋಜಾತ ಮುಖದಿಂದ ಮನುಬ್ರಹ್ಮ, ದಕ್ಷಿಣ ದಿಕ್ಕಿನ ವಾಮದೇವ ಮುಖದಿಂದ ಮಯಬ್ರಹ್ಮ, ಪಶ್ಚಿಮ ದಿಕ್ಕಿನ ಅಘೋರ ಮುಖದಿಂದ ತ್ವಷ್ಟ ಬ್ರಹ್ಮ, ಉತ್ತರದ ದಿಕ್ಕಿನ ತತ್ಪುರುಷ ಮುಖದಿಂದ ಶಿಲ್ಪಿ ಬ್ರಹ್ಮ, ಹಾಗೂ ಊದ್ರ್ವ ದಿಕ್ಕಿನ ಮುಖದಿಂದ ವಿಶ್ವಜ್ಞ ಬ್ರಹ್ಮರೆಂಬ ಪಂಚ ಬ್ರಹ್ಮರು ಅವಿರ್ಭಸಿದರು ಎಂದರು.

                 ವಿಶ್ವಕರ್ಮನು ಮನುಬ್ರಹ್ಮನಿಗೆ ಋಗ್ವೇದವನ್ನು, ಮಯಬ್ರಹ್ಮನಿಗೆ ಯಜುರ್ವೇದವನ್ನು, ತ್ವಷ್ಟ ಬ್ರಹ್ಮನಿಗೆ ಸಾಮವೇದವನ್ನು ಶಿಲ್ಪಿ ಬ್ರಹ್ಮನಿಗೆ ಅಥರ್ವವೇದವನ್ನು, ಹಾಗೂ ವಿಶ್ವಜ್ಞ ಬ್ರಹ್ಮನಿಗೆ ಪ್ರಣವವೇದವನ್ನು ಅಲ್ಲದೇ ಅವರಿಗೆ ಕ್ರಮವಾಗಿ, ಕಬ್ಬಿಣ ಶಿಲ್ಪ, ಕಾಷ್ಠಶಿಲ್ಪ, ಕಾಂಸ್ಯಶಿಲ್ಪ, ಹಾಗೂ ಸ್ವರ್ಣಶಿಲ್ಪ ವಿಜ್ಞಾನಗಳನ್ನು ಬೋಧಿಸಿದನು,. ಮುಂದೆ ಇವರೇ ಅವುಗಳ ಪ್ರವರ್ತಕರಾದರು. ಮನುಬ್ರಹ್ಮನು ಧರ್ಮಶಾಸ್ತ್ರ ಮತ್ತು ಲೋಹ ಸಂಹಿತೆ, ಮಯಬ್ರಹ್ಮನು ವಾಸ್ತಶಾಸ್ತ್ರಗಳನ್ನು, ಮತ್ತು ಸೂತ್ರ ಸಂಹಿತೆಯನ್ನು, ತ್ವಷ್ಟ ಬ್ರಹ್ಮನು ಶ್ರೌತ ಸ್ಮಾರ್ತಾದಿ ಶಾಸ್ತ್ರಗಳನ್ನು ಮತ್ತು ತಾಮ್ರ ಸಂಹಿತೆ, ಶಿಲ್ಪಬ್ರಹ್ಮನು ಶಿಲ್ಪಶಾಸ್ತ್ರ ಮತ್ತು ಶಿಲ್ಪ ಸಂಹಿತೆ, ಮತ್ತು ವಿಶ್ವಜ್ಞ ಬ್ರಹ್ಮನು ಜ್ಯೋತಿಷ ಮತ್ತು ಗಣಿತ ಶಾಸ್ತ್ರಗಳನ್ನು ಹಾಗೂ ಸ್ವರ್ಣಸಂಹಿತೆಗಳನ್ನು ರಚಿಸಿ ಧರ್ಮ, ವಾಸ್ತು, ಶಿಲ್ಪಕಲಾ ಜ್ಞಾನ ವಿಜ್ಞಾನಗಳಿಗೆ ಬಧ್ರವಾದ ಬುನಾದಿಯನ್ನು ಹಾಕಿದ್ದಾರೆ ಎಂದರು.

                 ಆದ್ದರಿಂದ ಇವರನ್ನು ಪಂಚಾರ್ಷೇಯರೆಂತಲೂ, ಪಂಚಾಲ ಬ್ರಾಹ್ಮಣರೆಂತಲೂ, ದೇವಬ್ರಾಹ್ಮಣರೆಂತಲೂ ಕರೆಯುತ್ತಾರೆ, ಆದ್ದರಿಂದ ವಿಶ್ವಕರ್ಮ ಬ್ರಾಹ್ಮಣರ ಆರಾಧ್ಯದೇವನೆ ಸ್ವ್ವಯಂಭೂ ವಿಶ್ವಕರ್ಮ ಪರಮೇಶ್ವರನಾಗಿದ್ದಾನೆ, ಮನ್ವಾದಿ ಬ್ರಹ್ಮರ್ಷಿಗಳೇ ಮೂಲ ಪುರುಷರಾಗಿದ್ದಾರೆ. ಈ ಮನ್ವಾದಿ ಪಂಚಬ್ರಹ್ಮರಿಗೆ ಕ್ರಮವಾಗಿ ರುದ್ರ, ವಿಷ್ಣು, ಬ್ರಹ್ಮ, ಇಂದ್ರ, ಸೂರ್ಯರೆಂಬ ಪರ್ಯಾಯ ನಾಮಗಳಿರುತ್ತವೆ ಎಂದರು.

               ಸ್ವಯಂಭೂ ವಿಶ್ವಕರ್ಮನೇ ಅಷ್ಟವಸುಗಳನ್ನು ಸೃಷ್ಟಿಸಿ ಪೃಥ್ವಿಯಲ್ಲಿಯೂ, ಏಕಾದಶ ರುದ್ರರನ್ನು ಸೃಷ್ಟಿಸಿ ಅಂತರಿಕ್ಷದಲ್ಲಿಯೂ, ದ್ವಾದಶಾದಿತ್ಯರನ್ನು ಸೃಷ್ಟಿಸಿ ದ್ಯುಲೋಕದಲ್ಲಿಯೂ, ವಿಶ್ವೇದೇವತೆಗಳನ್ನು ಸೃಷ್ಟಿಸಿ ದಿಗ್ ರಕ್ಷಕರನ್ನಾಗಿ ಸ್ಥಾಪಿಸಿದನು, ಪ್ರಜೆಗಳನ್ನು ಪಾಲಿಸುವದರಿಂದ ಪ್ರಜಾಪತಿ ಎಂತಲೂ, ವಿಶ್ವದ ಸಮಸ್ತ ಕಾರ್ಯಗಳನ್ನು ಮಾಡಲು ಸಮರ್ಥವಾಗಿ ಮಾಡುವಂತಹವನಾಗಿದ್ದರಿಂದ ವಿಶ್ವಕರ್ಮನೆಂದೂ, ತನ್ನ ಪ್ರಭುತ್ವ ಶಕ್ತಿಯಿಂದ ವಿಶ್ವರೂಪ ಧಾರಣ ಮಾಡುವದರಿಂದ ವಿಶ್ವರೂಪನೆಂದೂ, ವಿಶ್ವಸಂಬಂಧವಾದ ಸೃಷ್ಟಿ, ಸ್ಥಿತಿ, ಲಯ, ತರೋದಾನ ಅನುಗ್ರಹಗಳೆಂಬ ಪಂಚಕಾರ್ಯಗಳು ಅಲ್ಲದೇ ಮತ್ತೆ ಯಾವ ಕ್ರಿಯಾ ಕರ್ಮಗಳೂ ಯಾರಿಂದ ಮಾಡಲ್ಪಡುತ್ತವೆಯೋ, ಅವನೇ ವಿಶ್ವಕರ್ಮನೆಂದೂ, ತ್ರಿಮೂರ್ತಿಗಳಾದ ರುದ್ರ, ಬ್ರಹ್ಮ, ವಿಷ್ಣು ದೇವತೆಗಳನ್ನು ಸೃಷ್ಟಿಸಿ, ಅವರ ಪಿತನಾಗಿ ಅವರನ್ನು ಲಯ, ಸೃಷ್ಟಿ, ಸ್ಥಿತಿ, ಕಾರ್ಯಗಳಿಗೆ ನಿಯಮಿಸಿದ್ದರಿಂದ ಅವನನ್ನು ವಿಶ್ವಕರ್ಮ ಪರಮೇಶ್ವರನೆಂದು ಕರೆಯಲಾಗುವುದು ಎಂದು ಶ್ರೀಗಳು ತಿಳಿಸಿದರು.

                 ನಗರದ ಯನ್ಸ ಶಾಲೆಯ ಮುಖ್ಯೋಪಧ್ಯಾಯ ಎ.ಎನ್ ಅವರು ವಿಶ್ವಕರ್ಮ ಕುರಿತು ಉಪನ್ಯಾಸ ನೀಡಿದರು. ತಾಪಂ ಸದಸ್ಯರಾದ ಭರಮಪ್ಪ ಊರ್ಮಿ, ಕರಿಯಪ್ಪ ತೋಟಿಗೇರ, ಚಿದಾನಂದ ಬಡಿಗೇರ, ಉಪತಹಶೀಲ್ದಾರ ಹಾದಿಮನಿ, ರವಿಂದ್ರಗೌಡ ಪಾಟೀಲ, ಕೆ.ಸಿ.ಕೋಮಲಾಚಾರಿ, ಬಸವರಾಜ ಬಡಿಗೇರ, ಎನ್.ಎಂ.ಕಮ್ಮಾರ ಸೇರಿದಂತೆ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link