ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ 6ನೇ ಪುಣ್ಯಾರಾಧನಾ ಸಮಾರಂಭ

ತಿಪಟೂರು:

  ಸಾಮಾಜಿಕ ಕೆಳಸ್ತರದ ವರ್ಗದಿಂದಿಡಿದು ಉನ್ನತ ವರ್ಗದವರಿಗೂ ಸರ್ವರೀತಿಯ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಿಕೊಟ್ಟು, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿಯೂ ತನ್ನದೇ ಆದ ವಿಶಿಷ್ಟ ಸೇವೆಗಳ ಮೂಲಕ ಸಾಮರಸ್ಯವನ್ನು ಮೂಡಿಸಿ ಸರ್ವಜನಾಂಗದ ಶಾಂತಿತೋಟದ ನಂದಾದೀಪವಾಗಿ ಕಂಗೊಳಿಸಿದ ಶ್ರೀಗಳ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕಿದೆ ಎಂದು ಆದಿಚುಂಚನಗಿರಿ ಶಾಖಾಮಠ ದಸರೀಘಟ್ಟದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ತಿಳಿಸಿದರು.

   ತಾಲ್ಲೂಕಿನ ದಸರೀಘಟ್ಟದ ಶ್ರೀ ಆದಚುಂಚನಗಿರಿ ಶಾಖಾಮಠದ ಶ್ರೀ ಚೌಡೇಶ್ವರಿ ದೇವಿಯ ದೇವಾಲಯದಲ್ಲಿ ಆದಿಚುಂಚನಗಿರಿಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು 6ನೇ ಪುಣ್ಯಾರಾಧನಾ ಸಮಾರಂಭ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಶ್ರೀ ಬಾಲಗಂಗಾಧರನಾಥ ಶ್ರೀಗಳ ಸಾಮಾಜಿಕ ಕಾಳಕಳಿ ಕಾರಣದಿಂದಲೇ ಜಗತ್ತಿನಾದ್ಯಂತ ಚಿರಸ್ಮರಣೀಯರಾಗಿದ್ದು ಸಮಾಜಕ್ಕಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಪ್ರಗತಿಗೆ ಹೆಚ್ಚಿನ ಆದ್ಯತೆಯನ್ನು ನೀಡಿ ಎಲ್ಲಾ ವರ್ಗದ ಜನಸಾಮಾನ್ಯರಿಗೆ ದಾರಿ ದೀಪವಾಗಿ ಪ್ರಜ್ವಲಿಸುತ್ತಿದ್ದಾರೆ.

ಶ್ರೀಗಳು ಪರಿಸರದ ಬಗ್ಗೆ ಹೆಚ್ಚಿನ ಕಾಳಜಿಯನ್ನು ಹೊಂದಿದ್ದಕ್ಕೆ ಸಾಕ್ಷಿಯಾಗಿ “ಕರ್ನಾಟಕ ವನಸಂವರ್ಧನ ಟ್ರಸ್ಟ್” ಪ್ರಾರಂಭಿಸಿ 5 ಕೋಟಿ ಸಸಿ ನಡೆಸುವ ಕಾರ್ಯಕ್ರಮವನ್ನು ಜಾರಿಗೆ ತಂದು ಯಶಸ್ವಿಯಾಗಿದ್ದರು. ಶ್ರೀಗಳ ಪ್ರೇರಣೆಯೇ ಇಂದು ಪರಿಸರ ದಿನಾಚರಣೆ ಹಾಗೂ ಸಸಿ ನೆಡುವ ಕಾರ್ಯಕ್ರಮಗಳು ಎಲ್ಲೆಡೆ ನಡೆಯುತ್ತಿರುವುದು ಸಂತಸದ ಸಂಗತಿ. ಪರಿಸರ ದಿನಾಚರಣೆಯ ಹೆಸರಿನಲ್ಲಿ ಸಾಂಕೇತಿಕವಾಗಿ ಗಿಡನೆಟ್ಟರೆ ಸಾಲದು, ಅದನ್ನು ಪೋಷಿಸಿ ಬೆಳೆಸುವ ಜವಾಬ್ದಾರಿಯನ್ನು ಎಲ್ಲರೂ ವಹಿಸಿಕೊಳ್ಳಬೇಕು.

   ಏಕೆಂದರೆ ದಿನದಿಂದ ದಿನಕ್ಕೆ ಜಾಗತಿಕ ತಾಪಮಾನ ಹೆಚ್ಚಾಗುತ್ತಿದ್ದು, ಮುಂದಿನ ಯುವಪೀಳಿಗೆಗೆ ಹಾಗೂ ನಮ್ಮೆಲ್ಲರಿಗೂ ಸ್ವಚ್ಛ ಆಮ್ಲಜನಕಯುಕ್ತ ಗಾಳಿಬೇಕಿದ್ದರೆ ಗಿಡ, ಮರಗಳನ್ನು ಉಳಿಸಿ ಬೆಳೆಸಬೇಕಿದೆ. ದಿನಕಳೆದಂತೆ ಅಭಿವೃದ್ಧಿ ಕಾರ್ಯಗಳಿಗಾಗಿ ಅನೇಕ ಹಳೆಯ ದೊಡ್ಡ ಮರಗಳನ್ನು ಕಡಿದು ಹಾಕುತ್ತಿದ್ದು, ಪ್ರಾಣಿ, ಪಕ್ಷಿಗಳಿಗೂ ನೆಲೆ ಇಲ್ಲದಂತೆ ಮಾಡುತ್ತಿದ್ದೇವೆ. ಒಂದು ಮರ ಕಡಿದರೆ ಹತ್ತು ಮರವನ್ನು ನೆಡುವಂತಹ ಕಾರ್ಯವನ್ನು ಎಲ್ಲರೂ ಸೇರಿ ಮಾಡಬೇಕಿದೆ. ಹಿಂದಿನ ಕಾಲದಲ್ಲಿ ಹಿಂದೂ ಸಂಪ್ರದಾಯ, ಪರಂಪರೆಯಲ್ಲಿ ಪರಿಸರ ಕಾಳಜಿಯೂ ಜೀವನದ ಭಾಗವಾಗಿದ್ದು, ವೃಕ್ಷಗಳನ್ನು ದೇವರ ರೂಪದಲ್ಲಿ ಪೂಜಿಸುವ ಮನೋಭಾವವನ್ನು ಹೊಂದಿದ್ದರು.

    ಪ್ರತಿಯೊಂದು ಮರಕ್ಕೂ ತನ್ನದೇ ಆದಂತಹ ವೈಶಿಷ್ಟತೆಯನ್ನು ಹೊಂದಿದ್ದು ಪೂಜ್ಯನೀಯ ಸ್ಥಾನದ ಜೊತೆಗೆ ಆರೋಗ್ಯವನ್ನು ವೃದ್ಧಿಸುವ ಗಿಡ, ಮರಗಳನ್ನು ಕಾಣಬಹುದಾಗಿದೆ. ಆದ್ದರಿಂದಲೇ ಹಿಂದಿನವರು ಹೆಚ್ಚಾಗಿ ಗಿಡಮರಗಳನ್ನು ನೆಡುವ ಜೊತೆಗೆ ಪರಿಸರದೊಂದಿಗೆ ಉತ್ತಮ, ಬಾಂಧವ್ಯವನ್ನು ಹೊಂದಿದ್ದರು. ತದ ನಂತರದಲ್ಲಿ ಸರ್ಕಾರಗಳ ಮುಖಾಂತರ ಒತ್ತಡ ಹೇರಿ ಗಿಡ ನಡೆಸುವ ಕಾರ್ಯಕ್ರವನ್ನು ಮಾಡುವ ಹಂತಕ್ಕೆ ತಲುಪುತ್ತಿರುವುದು ವಿಷಾದನೀಯ ಸಂಗತಿ.

     ಮಾಜಿ ಶಾಸಕ ಕೆ.ಷಡಕ್ಷರಿ ಮಾತನಾಡಿ ಶಿಕ್ಷಣ, ಧಾರ್ಮಿಕ ಚಿಂತನೆ, ಸಾಮಾಜಿಕ ಸೇವಾ ಮನೋಭಾವದಿಂದ ವಿಶ್ವದಲ್ಲಿಯೇ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದು ಶ್ರೀಗಳ ಕಾರ್ಯಕ್ಕೆ ಸಾಟಿ ಮತ್ತೊಂದಿಲ್ಲ. ಸಾಮಾಜಿಕ ಕ್ಷೇತ್ರದಲ್ಲಿ ತಮ್ಮದೇ ಆದಂತಹ ವಿಶಿಷ್ಟ ಯೋಜನೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸಿ ಎಲ್ಲರೂ ಒಂದೇ ಎನ್ನುವಂತಹ ಮನೋಭಾವ ಮೂಡುವ ಸಲುವಾಗಿ ಎಲ್ಲರನ್ನು ಗೌರವವಿಸುತ್ತಿದ್ದರು.

     ಪ್ರಕೃತಿಯ ವಿನಾಶದಿಂದ ಮಾನವ ಅಂತ್ಯ ಎಂಬ ಸಂದೇಶವನ್ನು ಅರಿತಿದ್ದ ಶ್ರೀಗಳು ಸಸಿಗಳನ್ನು ನೆಟ್ಟು ಪೋಷಣೆಯನ್ನು ಮಾಡುವಂತಹ ಕಾರ್ಯದಲ್ಲಿ ತೊಡಗಿದ್ದರು. ಸೇವಾ ಮನೋಭಾವಕ್ಕೆ ಉದಾಹರಣೆಯಾಗಿ ರಾಜ್ಯದ ಮೂಲೆ ಮೂಲೆಗಳಲ್ಲಿ ಆಸ್ಪತ್ರೆ, ಶಿಕ್ಷಣ ಸಂಸ್ಥೆಗಳನ್ನು ತೆರೆಯುವ ಮುಖಾಂತರ ಉಚಿತ ಸೇವೆ, ಜ್ಞಾನ ಪ್ರಸರಣವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.

    ಸಮಾರಂಭದಲ್ಲಿ ಶ್ರೀರಂಗ ಆಸ್ಪತ್ರೆಯ ವೈದ್ಯ ಡಾ.ವಿವೇಚನ್, ಡಾ.ರಾಮೇಗೌಡ, ತಾ.ಪಂ.ಅಧ್ಯಕ್ಷ ಎಂ.ಎನ್.ಸುರೇಶ್, ದಸರಿಘಟ್ಟ ಗ್ರಾ.ಪಂ.ಸದಸ್ಯ ಮೋಹನ್ ಕುಮಾರ್, ತಹಸೀಲ್ದಾರ್ ಡಾ.ವಿ.ಮಂಜುನಾಥ್, ಗುಡಿಗೌಡರು ಹುಚ್ಚೇಗೌಡ, ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು. ಶ್ರೀಕ್ಷೇತ್ರದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ವಿಜೃಂಭಣೆಯಿಂದ ನೆರವೇರಿದವು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link